E20 ಇಂಧನಕ್ಕೆ ಭಾರೀ ಪ್ರೋತ್ಸಾಹ: ಸಾವಿರಾರು ರೂ. ಉಳಿಸಬಹುದು! ಹೊಸ ಇಂಧನದ ಬಗ್ಗೆ ತಿಳಿಯಿರಿ
ಭಾರತದಲ್ಲಿ ಆಟೋ ಉದ್ಯಮವು ಹೊಸ ಆವಿಷ್ಕಾರಗಳನ್ನು ಪರಿಚಯಿಸುವಲ್ಲಿ ತೀವ್ರವಾಗಿ ಶ್ರಮಿಸುತ್ತಿದೆ. ಇದರಲ್ಲಿ ಮೊದಲಿಗೆ ಇಂಧನದ ಬಳಕೆಯನ್ನು ಕಡಿಮೆ ಮಾಡಿ ಪರ್ಯಾಯ ಇಂಧನ ಮೂಲಗಳ ಅನ್ವೇಷಣೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್, ಹೈಬ್ರಿಡ್, ಹೈಡ್ರೋಜನ್ ಸೇರಿದಂತೆ ಎಥೆನಾಲ್ ಚಾಲಿತ ವಾಹನಗಳು ಭವಿಷ್ಯವನ್ನು ಆಳುವುದು ಖಚಿತವಾಗಿದೆ.
ಈಗಾಗಲೇ ಮೇಲೆ ಹೇಳಲಾದ ಬಹುತೇಕ ಎಲ್ಲದರ ಬಗ್ಗೆಯೂ ಜನರಿಗೆ ತಿಳಿದಿರಬಹುದು, ಆದರೆ ಈ ಎಥೆನಾಲ್ (ಫ್ಲೆಕ್ಸ್ ಫ್ಯೂಯಲ್) ಬಗ್ಗೆ ಬಹುತೇಕರಿಗೆ ತಿಳಿದಿರುವುದಿಲ್ಲ. ಹಾಗಾದ್ರೆ ಏನಿದು ಎಥೆನಾಲ್? ಫ್ಲೆಕ್ಸ್ ಫ್ಯೂಯಲ್‌ನಿಂದ ಓಡುವ ವಾಹನಗಳು ವಿಶೇಷವಾಗಿ ಇತ್ತೀಚೆಗಷ್ಟೆ ಮುನ್ನಲೆಗೆ ಬಂದಿವೆ. ಮುಂಬರುವ ವರ್ಷಗಳಲ್ಲಿ ಇದರ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಭಾರೀ ಪ್ರಯತ್ನಗಳು ನಡೆಯುತ್ತಿವೆ.

ಇತ್ತೀಚೆಗಷ್ಟೆ ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ಮುಗಿದಿದೆ. ಈ ಎಕ್ಸ್‌ಪೋದಲ್ಲಿ ಎಥೆನಾಲ್ ಇಂಧನದಿಂದ ಓಡುವ ವಾಹನಗಳು ಸಾಕಷ್ಟು ಸದ್ದು ಮಾಡಿವೆ. ಹಲವು ಕಾರುಗಳ ಜೊತೆಗೆ ದ್ವಿಚಕ್ರ ವಾಹನಗಳೂ ಇದರಲ್ಲಿ ಭಾಗಿಯಾಗಿದ್ದವು. ಎಥೆನಾಲ್ ಚಾಲಿತ ಮಾರುತಿ ವ್ಯಾಗನ್ಆರ್ ಜೊತೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನು ಕೂಡ ಪ್ರದರ್ಶಿಸಲಾಗಿತ್ತು.
ಮುಂಬರುವ ದಿನಗಳಲ್ಲಿ ಅನೇಕ ಕಾರುಗಳು ಈ ಎಥೆನಾಲ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಎಥೆನಾಲ್ ಸಹಾಯದಿಂದ, ಭಾರತವು ಪೆಟ್ರೋಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬಯಸುತ್ತಿದೆ. ಫ್ಲೆಕ್ಸ್ ಇಂಧನವನ್ನು ಸರಳ ಪದಗಳಲ್ಲಿ ಅರ್ಥಮಾಡಿಕೊಂಡರೆ, ಪೆಟ್ರೋಲಿನಲ್ಲಿ ಮೆಥನಾಲ್ ಅಥವಾ ಎಥೆನಾಲ್ ಅನ್ನು ಬೆರೆಸಿ ತಯಾರಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ E20 ಅನ್ನು E50 ಆಗಿ ಪರಿವರ್ತಿಸಲಾಗುತ್ತದೆ. E20' ಪೆಟ್ರೋಲ್ ಸ್ವರೂಪವಾಗಿದ್ದು, ಇದು ಪೆಟ್ರೋಲ್‌ಗಿಂತ ಅಗ್ಗವಾಗಿರುತ್ತದೆ. E20 (ಎಥೆನಾಲ್ 20) ಇದರ ಅರ್ಥ ಶೇ80 ರಷ್ಟು ಪೆಟ್ರೋಲ್‌ನಲ್ಲಿ ಶೇ20 ರಷ್ಟು ಎಥೆನಾಲ್ ಅನ್ನು ಬೆರೆಸಲಾಗುತ್ತದೆ. 2025 ರ ವೇಳೆಗೆ ಈ ಪ್ರಮಾಣವನ್ನು ದ್ವಿಗುಣಗೊಳಿಸುವ ಯೋಜನೆಗಳು ನಡೆಯುತ್ತಿವೆ.
ಜಿಯೋ-ಬಿಪಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ದೇಶದ ಮೊದಲ ಕಂಪನಿಯಾಗಿದೆ. ಜಿಯೋ-ಬಿಪಿಯ ಆಯ್ದ ಪೆಟ್ರೋಲ್ ಪಂಪ್‌ಗಳಲ್ಲಿ E20 ಪೆಟ್ರೋಲ್ ಅನ್ನು ಪ್ರಾರಂಭಿಸಿದೆ. E20 ಇಂಧನದ ಬಗ್ಗೆ ಇನ್ನೂ ಆಳವಾಗಿ ತಿಳಿಯುವುದಾದ್ರೆ ಈಥೈಲ್ ಆಲ್ಕೋಹಾಲ್ ಅಥವಾ ಎಥೆನಾಲ್ (C2H5OH) ಎಂಬುದು ಯೀಸ್ಟ್‌ಗಳಿಂದ ಸಕ್ಕರೆಯ ಹುದುಗುವಿಕೆ ಪ್ರಕ್ರಿಯೆಯಿಂದ ಅಥವಾ ಎಥಿಲೀನ್ ಜಲಸಂಚಯನದಂತಹ ಪೆಟ್ರೋಕೆಮಿಕಲ್ ಪ್ರಕ್ರಿಯೆಗಳ ಮೂಲಕ ನೈಸರ್ಗಿಕವಾಗಿ ಉತ್ಪಾದಿಸಲಾಗುತ್ತದೆ.

ಪಳೆಯುಳಿಕೆ ಇಂಧನ ಬಳಕೆಯನ್ನು ಕಡಿಮೆ ಮಾಡಲು ಈ ಜೈವಿಕ ಇಂಧನವನ್ನು ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡಲು ಭಾರತವು ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮವನ್ನು ಪ್ರಾರಂಭಿಸಿದೆ. E20 ನಲ್ಲಿನ ಸಂಖ್ಯೆ ಶೇ20 ಎಂಬುದು ಪೆಟ್ರೋಲ್ ಮಿಶ್ರಣದಲ್ಲಿ ಎಥೆನಾಲ್ ಪ್ರಮಾಣವನ್ನು ಸೂಚಿಸುತ್ತದೆ. ಅಂದರೆ, ಈ ಸಂಖ್ಯೆ ಹೆಚ್ಚಾದಷ್ಟೂ ಪೆಟ್ರೋಲ್‌ನಲ್ಲಿರುವ ಎಥೆನಾಲ್ ಪ್ರಮಾಣ ಹೆಚ್ಚಾಗಿರುತ್ತದೆ.
1 ಲೀಟರ್ E20 ಪೆಟ್ರೋಲ್ ಬೆಲೆ: Jio-BP ಸಿದ್ಧಪಡಿಸಿದ E20 ಪೆಟ್ರೋಲ್ ಶೇ80 ಪೆಟ್ರೋಲ್ ಮತ್ತು ಶೇ20 ಎಥೆನಾಲ್ ಅನ್ನು ಹೊಂದಿರುತ್ತದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96 ರೂ. ಇದೆ. 96 ರೂಪಾಯಿ ದರದಲ್ಲಿ ಶೇ 80 ಪೆಟ್ರೋಲ್ ಬೆಲೆ 76.80 ರೂ. ಆಗುತ್ತದೆ. ಅದೇ ರೀತಿ ಎಥೆನಾಲ್ ಬೆಲೆ ಲೀಟರ್‌ಗೆ 55 ರೂ.ವರೆಗೆ ಇದೆ.

ಅಂದರೆ, 55 ರೂ.ನಲ್ಲಿ, ಶೇ20 ಎಥೆನಾಲ್ ಬೆಲೆ ಅಂದರೆ 11 ರೂ. ಆಗುತ್ತದೆ. ಅಲ್ಲಿಗೆ ಇವೆರಡರ ಮಿಶ್ರಣದ ಒಂದು ಲೀಟರ್ ಇ20 ಪೆಟ್ರೋಲ್ ಬೆಲೆ 87.80 ರೂ. ಆಗುತ್ತದೆ. ಸಾಮಾನ್ಯ ಪೆಟ್ರೋಲ್ ಗಿಂತ 8.20 ರೂ. ಕಡಿಮೆಯಾಗುತ್ತದೆ. ಒಂದು ವೇಳೆ E20 ಅನ್ನು E50 ಆಗಿ ಪರಿವರ್ತಿಸಿದರೆ ಪೆಟ್ರೋಲ್ ಬೆಲೆ ಶೇ50 ರಷ್ಟು ಕುಸಿಯುತ್ತದೆ.


Click it and Unblock the Notifications








