ಸೂಪರ್ ಕಾರು ಖ್ಯಾತಿಯ ಫೆರಾರಿ ವಿಶಿಷ್ಟ ಬೋಟ್ ಹರಾಜಿಗೆ
ಮೊನಕೊದಲ್ಲಿ ಈ ಬಾರಿ ನಡೆಯಲಿರುವ ಆರ್ ಸೋಥೆಬಿ ಹರಾಜಿನಲ್ಲಿ ಹಲವಾರು ವಿಶಿಷ್ಟ ವಾಹನಗಳನ್ನು ಹರಾಜಿಡಲಾಗುತ್ತಿದೆ. ಇವುಗಳಲ್ಲಿ ಫೋರ್ಷೆ ರೇಸ್ ಕಾರು ಹಾಗೂ 1920ರ ದಶಕದ ಇನ್ನಿತರ ಹಳೆಯ ವಿಂಟೇಂಜ್ ಕಾರುಗಳು ಸೇರಿವೆ.
ಈ ಸಾಲಿಗೀಗ ಫೆರಾರಿಯ ಅತಿ ವಿಶಿಷ್ಟ ವಾಹನವೊಂದು ಸೇರ್ಪಡೆಯಾಗಿದೆ. ಇದನ್ನು ನೀವು ಸೂಪರ್ ಕಾರೆಂದು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಫೆರಾರಿಯ ಅತಿ ವಿರಳ ವಾಹನಗಳಲ್ಲಿ ಒಂದಾಗಿರುವ 1990ರ ಫೆರಾರಿ ರಿವಾ ಸ್ಪೀಡ್ ಬೋಟ್ ಹರಾಜಿಗಿಡಲಾಗುತ್ತಿದೆ.

1990ರ ಫೆರಾರಿ ರಿವಾ ಸ್ಪೀಡ್ ಬೋಟ್, 390 ಅಶ್ವಶಕ್ತಿ ಉತ್ಪಾದಿಸಬಲ್ಲ ತಲಾ ಎರಡು ಶಕ್ತಿಶಾಲಿ ವಿ-8 ಎಂಜಿನ್ ಇದರಲ್ಲಿ ಆಳವಡಿಸಲಾಗಿದೆ.

ಇದು ಫೆರಾರಿ ಸಂಸ್ಥಾಪಕ ಎನ್ಜೊ ಫೆರಾರಿ ಮತ್ತು ಅಂದಿನ ಹೆಸರಾಂತ ಸ್ಪೀಡ್ ಬೋಟ್ ರಿವಾ ವಿನ್ಯಾಸಕ ಗಿನೊ ಗೆರ್ವಸೋನಿ ಕನಸಿನ ಕೂಸಾಗಿದೆ.

ಬಲ್ಲ ಮೂಲಗಳ ಪ್ರಕಾರ ನೀರಿನಲ್ಲಿ ತೇಲುವ ಫೆರಾರಿ ಈ ವಿಶಿಷ್ಟ ಬೋಟ್, ಎರಡರಿಂದ ಎರಡುವರೆ ಲಕ್ಷದಷ್ಟು ಅಮೆರಿಕನ್ ಡಾಲರ್ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.

ಇತಿಹಾಸ ಪ್ರಸಿದ್ಧ ಫೆರಾರಿ ಪ್ರತಿಷ್ಠೆಯನ್ನು ಏರಿಸಿರುವ ಸ್ಪೀಡ್ ಬೋಟ್ 40 ಯುನಿಟ್ ಗಳಷ್ಟೇ ನಿರ್ಮಿಸಲಾಗಿದೆ. ಇದು ಈ ಸ್ಪೀಡ್ ಬೋಟ್ ವರ್ಚಸ್ಸನ್ನು ಇಮ್ಮಡಿಗೊಳಿಸುತ್ತದೆ.

32 ಅಡಿ ಉದ್ದದ ಫೆರಾರಿ ಸ್ಪೀಡ್ ಬೋಟ್ ಗಂಟೆಗೆ 96.56 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ರಿವಾ ಎಂಜಿನಿಯರ್ ಮತ್ತು ವಿನ್ಯಾಸಗಾರರ ಜೊತೆಗೂಡಿ ಫೆರಾರಿ ಈ ವಿಶೇಷ ಬೋಟ್ ತಯಾರಿಸಿತ್ತು. ಟೆಸ್ಟಾರೊಸ್ಸಾ ಶೈಲಿಯ ಏರ್ ಇಂಟೇಕ್ ಮತ್ತು ಫಾರ್ಮುಲಾ ಒನ್ ಸ್ಪಾಯ್ಲರ್ ಗಳು ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿತ್ತು.


Click it and Unblock the Notifications








