ಆಯ ತಪ್ಪಿದರೆ ಅಪಾಯ ತಪ್ಪಿದ್ದಲ್ಲ
ಚಾಲನೆಯಲ್ಲಿ ಎಷ್ಟೇ ವರ್ಷದ ಅನುಭವ ಸಂಪಾದಿಸಿದರೂ ನಮ್ಮಿಂದಾಗುವ ಕೇವಲ ಒಂದೇ ಒಂದು ಸೆಕೆಂಡಿನ ಏಕಾಗ್ರತಾ ಭಂಗದಿಂದಾಗಿ ಬೃಹತ್ ಅಪಘಾತವೇ ಘಟಿಸಿ ಹೋಗಬಹುದು. ಹಾಗಾಗಿ ಚಾಲನೆಯಲ್ಲಿ ಎಂದೂ ತಾನು ಎಲ್ಲವನ್ನು ಕರಗತ ಮಾಡಿಕೊಂಡಿದ್ದೇನೆಂಬ ಅಹಂಭಾವ ಸಲ್ಲದು.
ಇನ್ನು ಕೆಲವು ಬಾರಿ ತಮ್ಮಿಂದಾಗದ ತಪ್ಪಿಗಾಗಿಯೂ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಾಹನ ಚಾಲಕನೂ ಸಹ ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಬೇಕಾಗಿರುವುದು ಅತಿ ಅಗತ್ಯ. ನಾವಿಂದು ಇಂತಹ ಅತಿ ವಿರಳ ಕೆಲವು ವಿಚಿತ್ರ ಅಪಘಾತಗಳ ಚಿತ್ರಗಳ ಸಂಗ್ರಹದೊಂದಿಗೆ ಮುಂದೆ ಬಂದಿದ್ದೇವೆ. ಎಲ್ಲಿಯವರೆಗೂ ಪ್ರಯಾಣಿಕರ ಪ್ರಾಣಕ್ಕೆ ಅಪಾಯ ಕಾಡುವುದಿಲ್ಲವೋ ಅಲ್ಲಿಯ ವರೆಗೆ ಇಂತಹ ಸನ್ನಿವೇಶಗಳಲ್ಲಿ ಮೋಜು ಸಿಗುತ್ತದೆ.

ಅಪಘಾತಗಳಿಗೆ ಕಾರಣಗಳು ಹಲವು. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಬಿಡುಗಡೆ ಮಾಡಿರುವ ವರ ಪ್ರಕಾರ 2014ನೇ ಸಾಲಿನಲ್ಲಿ ಒಟ್ಟು 1.41 ಲಕ್ಷ ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.

ಅಲ್ಲದೆ 2013ನೇ ಸಾಲಿಗೆ ಹೋಲಿಸಿದಾಗ ಅಪಘಾತಗಳಲ್ಲಿ ಸಾವಿಗೀಡಾದ ಪ್ರಮಾಣ ಶೇಕಡಾ 3ರಷ್ಟು ಹೆಚ್ಚಾಗಿದೆ.

ಅಪಘಾತಗಳು ಹಾಗೂ ಪ್ರಯಾಣಿಕರು ಗಾಯಗೀಡಾಗಿರುವ ಸಂಖ್ಯೆಯಲ್ಲೂ ಗಣನೀಯವಾಗಿ ವರ್ಧನೆಯುಂಟಾಗಿದೆ.

ಅಮಿತ ವೇಗವೇ ಅಪಘಾತಕ್ಕಿರುವ ಪ್ರಮುಖ ಕಾರಣ ಎನ್ನಲಾಗಿದೆ.

ಇನ್ನು ಚಾಲನೆ ವೇಳೆ ಏಕಾಗ್ರತೆ ಕಳೆದುಕೊಳ್ಳುವ ಚಾಲಕರು ಅಪಾಯಕಾರಿಯಾಗಿ ವಾಹನ ಓಡಿಸುತ್ತಿರುವುದು ಹೆಚ್ಚಿನ ಪ್ರಮಾಣದ ಅಪಘಾತ ಪ್ರಸಂಗಗಳನ್ನು ಸೃಷ್ಟಿ ಮಾಡುತ್ತಿದೆ.

ಭಾರತದಲ್ಲಿ ದ್ವಿಚಕ್ರ ವಾಹನ, ಲಾರಿ ಹಾಗೂ ಟ್ರಕ್ ಅಪಘಾತಗಳು ಹೆಚ್ಚಾಗಿ ಘಟಿಸುತ್ತಿದೆ.

13,787 ದ್ವಿಚಕ್ರ ವಾಹನ ಚಾಲಕರು ಸಾವನ್ನಪ್ಪಿದ್ದರೆ ಇದೇ ವಾಹನಗಳಿಂದಾಗಿ ಸಂಭವಿಸಿರುವ ಅಪಘಾತದಲ್ಲಿ ಹೆಚ್ಚುವರಿ 23,529 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ಅಮಿತ ವೇಗದಿಂದಾಗಿ ಸಂಭವಿಸಿರುವ 1.7 ಲಕ್ಷದಷ್ಟು ಅಪಘಾತ ಪ್ರಕರಣಗಳಲ್ಲಿ 49,000ದಷ್ಟು ಮಂದಿ ಸಾವನ್ನಪ್ಪಿದ್ದಾರೆ.

ಹಾಗೆಯೇ ಅಪಾಯಕಾರಿ, ಅಜಾಗರೂಕ ಚಾಲನೆ ಹಾಗೂ ಓವರ್ ಟೇಕಿಂಗ್ ನಿಂದಾಗಿ ಸಂಭವಿಸಿರುವ 1.4 ಲಕ್ಷದಷ್ಟು ಅಪಘಾತಗಳಲ್ಲಿ 42,000ಗಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲೇ ಅಪಘಾತಗಳಲ್ಲಾಗಿ ಮರಣ ಸಂಭವಿಸಿರುವ ಟಾಪ್ 5 ರಾಷ್ಟ್ರಗಳಲ್ಲಿ ಕರ್ನಾಟಕವೂ ಕಾಣಿಸಿಕೊಂಡಿರುವುದು ಚಿಂತಾಜನಕ ವಿಷಯವೆನಿಸಿದೆ. ಈ ನಿಟ್ಟಿನಲ್ಲಿ ವಾಹನ ಸವಾರರನ್ನು ಜಾಗೃತಗೊಳಿಸಲು ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುವುದಾಗಲಿ, ಕರೆ ಸ್ವೀಕರಿಸುವುದಾಗಲಿ, ಮೇಸೆಜ್ ಮಾಡುವುದಾಗಲಿ ಮಾಡಬಾರದು.

ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕೆಂಪು ದೀಪವನ್ನು ಉಲ್ಲಂಘಿಸಿ ಸರ್ರನೆ ಗಾಡಿ ಚಾಲನೆ ಮಾಡುವ ಪ್ರಯತ್ನಿಸುವುದರಿಂದ ಅಪಘಾತ ಎದುರಾಗಬಹುದು.

ಇಕ್ಕಟ್ಟಾದ ರಸ್ತೆ ಪರಿಸ್ಥಿತಿ ಅಥವಾ ಅಪರಿಚಿತ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಬಹುದು. ಹಾಗಾಗಿ ಬಹಳ ಎಚ್ಚರಿಕೆಯಿಂದಾಗಿ ವಾಹನ ಚಲಾಯಿಸಿ.

ವಾಹನಗಳ ಮಧ್ಯೆ ಸದಾ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸಿ.

ರಸ್ತೆ ಯಾವುದೇ ರೇಸ್ ಟ್ರ್ಯಾಕ್ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಎಡ ಅಥವಾ ಬಲ ತಿರುವುಗಳಲ್ಲಿ ಟರ್ನ್ ಇಂಡಿಕೇಟರ್ ಬಳಕೆ ಮಾಡಲು ಮರೆಯದಿರಿ.

ವಾಹನಗಳ ಸುಗಮ ಸಂಚಾರಕ್ಕಾಗಿ ಲೇನ್ ನಿಯಮವನ್ನು ಪಾಲಿಸಲೇಬೇಕು.

ವೇಗ ಯಾವತ್ತೂ ಖುಷಿ ನೀಡುತ್ತದೆ. ಆದರೆ ಅದೇ ವೇಗವು ನಿಮ್ಮ ಅಂತಿಮ ಪಯಣ ಆಗದಂತೆ ಎಚ್ಚರ ವಹಿಸಿ

ನಿಮ್ಮ ಜೀವಕ್ಕೆ ನೀವು ಜವಾಬ್ದಾರರು. ರಸ್ತೆಯ ಇನ್ನೊಂದು ತುದಿಯಲ್ಲಿ ನಿಮ್ಮ ಆಗಮನಕ್ಕಾಗಿ ಕಾದು ಕುಳಿತಿರುವ ಪ್ರೀತಿಯ ಕುಟುಂಬವೊಂದಿದೆ ಎಂಬುದನ್ನು ಮರೆಯಬಾರದು.

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ.


Click it and Unblock the Notifications








