ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಅವರ 'ಹಾರುವ ಬಂಗಲೆ'
ನವೆಂಬರ್ ತಿಂಗಳಲ್ಲಿ ನಡೆಯಲಿರುವ 2016 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಸ್ಪರ್ಧಿಸಲಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್, ಈಗಾಗಲೇ ತಮ್ಮ ಹೇಳಿಕೆಯಿಂದಲೇ ಪರ-ವಿರೋಧ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ.
ರಾಜಕೀಯ ನೇತಾರ ಹೊರತಾಗಿ ಪ್ರಮುಖ ಉದ್ಯಮಿಯೂ ಆಗಿರುವ ಡೋನಾಲ್ಡ್ ಟ್ರಂಪ್, ಚುನಾವಣಾ ಪ್ರಚಾರ ಹಾಗೂ ತಮ್ಮ ಖಾಸಗಿ ಸಂಚಾರಕ್ಕಾಗಿ 'ಟ್ರಂಪ್ ಫೋರ್ಸ್ ಒನ್' ಎಂಬ ವಿಮಾನವನ್ನು ಬಳಕೆ ಮಾಡುತ್ತಿದ್ದಾರೆ. ಇದು ವೈಶಿಷ್ಟ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರ ಅಧಿಕೃತ ವಿಮಾನ 'ಏರ್ ಫೋರ್ಸ್ ಒನ್' ಗಿಂತಲೂ ಕಮ್ಮಿಯೇನಲ್ಲ ಎಂಬುದು ಆಶ್ಚರ್ಯಗೊಳಿಸುತ್ತದೆ.

ಡೋನಾಲ್ಡ್ ಟ್ರಂಪ್ ಖಾಸಗಿ ವಿಮಾನ 'ಟ್ರಂಪ್ ಫೋರ್ಸ್ ಒನ್' ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿದೆ. ಅಮೆರಿಕದ ಪ್ರತಿಷ್ಠಿತ ಬೋಯಿಂಗ್ ಸಂಸ್ಥೆಗೆ ಸೇರಿದ ಬೋಯಿಂಗ್ 757-200 ವಿಮಾನ ಇದಾಗಿದೆ.

2011ರಲ್ಲಿ ಮೈಕ್ರೋಸಾಫ್ಟ್ ಸಹ ಸ್ಥಾಪಕ ಪಾಲ್ ಅಲೆನ್ ಅವರಿಂದ ಡೋನಾಲ್ಡ್ ಟ್ರಂಪ್ ಈ ಖಾಸಗಿ ವಿಮಾನವನ್ನು ಖರೀದಿಸಿದ್ದರು.

ವಿಮಾನದೊಳಗೆ ಐಷಾರಾಮಿ ಸವಲತ್ತುಗಳಿಗೆ ಆದ್ಯತೆ ಕೊಡಲಾಗಿದ್ದು, ಸ್ವರ್ಣ ಲೇಪಿತ ಸೀಟು ಬೆಲ್ಟ್ ಗಳನ್ನು ಕಾಣಬಹುದಾಗಿದೆ.

52 ಇಂಚುಗಳ ಫ್ಲ್ಯಾಟ್ ಪರದೆ ಮೇಲೆ 1000ದಷ್ಟು ಸಿನೆಮಾಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ಹಾರ್ಡ್ ಡ್ರೈವ್ ನಲ್ಲಿ 2500 ಮ್ಯೂಸಿಕ್ ಸಿಡಿಗಳ ಸಂಗ್ರಹವಿರಲಿದೆ.

1991ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಬೋಯಿಂಗ್ 757-200 , ಸರಿ ಸುಮಾರು 670 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧಿಕೃತ ಏರ್ ಫೋರ್ಸ್ ಒನ್ ವಿಮಾನದಲ್ಲಿ 70 ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಒದಗಿಸಿಕೊಡಲಾಗಿದೆ. ಅದೇ ಹೊತ್ತಿಗೆ ವಿಶೇಷವಾಗಿ ಮಾರ್ಪಾಡುಗೊಳಿಸಿರುವ ಟ್ರಂಪ್ ಫೋರ್ಸ್ ಒನ್ ನಲ್ಲಿ 43 ಮಂದಿ ಆರಾಮದಾಯಕ ಆಸನ ವ್ಯವಸ್ಥೆಯನ್ನು ನೀಡಲಾಗಿದೆ.

ದಿನದ 24 ಗಂಟೆಯೂ ಗರಿಷ್ಠ ಭದ್ರತೆಯನ್ನು ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೋಟಿಗಟ್ಟಲೆ ರುಪಾಯಿಗಳಷ್ಟು ನಿರ್ವಹಣಾ ವೆಚ್ಚವನ್ನು ಖರ್ಚು ಮಾಡಲಾಗುತ್ತಿದೆ.

ಸಂಚರಿಸುವ ವೈದ್ಯಕೀಯ ನೆರವು, ವಿದ್ಯುನ್ಮಾನ ಪ್ರತಿತಂತ್ರಗಳು ಮತ್ತು ನ್ಯೂಕ್ಲಿಯರ್ ದಾಳಿಯಿಂದ ರಕ್ಷಣೆಗೆ ಎಲೆಕ್ಟ್ರೊ ಮ್ಯಾಗ್ನೆಟಿಕ್ ವ್ಯವಸ್ಥೆಯನ್ನು ಒದಗಿಸಲಾಗಿದೆ.

10 ಮಿಲಿಯನ್ ಅಮೆರಿಕನ್ ಡಾಲರ್ ಗಳ ಒಡೆಯನಾಗಿರುವ ಡೋನಾಲ್ಡ್ ಟ್ರಂಪ್, ಅಮೆರಿಕ ಇತಿಹಾಸ ಕಂಡಿರುವ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಓರ್ವರಾಗಿದ್ದಾರೆ. ಇದು ಅವರು ಹೊಂದಿರುವ ವಿಮಾನದಲ್ಲೂ ಪ್ರತಿಫಲಿಸುತ್ತಿದೆ.

ಹಾರುವ ವಿಹಾರ ಹೋಟೆಲ್ ಎಂದೇ ಇದನ್ನು ವಿಶ್ಲೇಷಿಸಲಾಗುತ್ತಿದ್ದು, ಲೆಥರು ಸೀಟು, ಸ್ವರ್ಣ ಲೇಪಿತ ವೈಶಿಷ್ಟ್ಯಗಳು ಮತ್ತು ಲಿವಿಂಗ್ ಕೊಠಡಿ ಮತ್ತು ಕಚೇರಿಗಳು ಇದರಲ್ಲಿದೆ.

ಟ್ರಂಪ್ ಫೋರ್ಸ್ ಒನ್ ವಿಮಾನದಲ್ಲಿ ಶಕ್ತಿಶಾಲಿ ಟ್ವಿನ್ ರೋಲ್ಸ್ ರಾಯ್ಸ್ ಎಂಜಿನ್ (RB211-535E) ಆಳವಡಿಸಲಾಗಿದ್ದು, ಗಂಟೆಗೆ 500 ಮೈಲುಗಿಂತಲೂ ವೇಗದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ.

ಮಾಸ್ಟರ್ ಬೆಡ್ ರೂಂನಲ್ಲೂ ಚಿನ್ನ ಲೇಪನವನ್ನು ಕಾಣಬಹುದಾಗಿದೆ. ಇಲ್ಲೂ ಹೋಮ್ ಥಿಯೇಟರ್ ಸೇವೆಯನ್ನು ಕೊಡಲಾಗಿದೆ.


Click it and Unblock the Notifications








