ಕಾರಿಗೆ MLA ಸ್ಟಿಕ್ಕರ್ ಅಂಟಿಸಿಕೊಂಡು ಸಕಲ ಸವಲತ್ತುಗಳನ್ನು ಅನುಭವಿಸಿದ 22ರ ಯುವಕ
ಯುವಕನೊಬ್ಬ ತನ್ನ ಕಾರಿಗೆ ನಕಲಿ ಎಂಎಲ್ಎ ಸ್ಟಿಕ್ಕರ್ ಅಂಟಿಸಿಕೊಂಡು, MLA ಕಾರಿಗೆ ಸಿಗುವ ಸಕಲ ಸವಲತ್ತುಗಳನ್ನು ಅನುಭವಿಸಿದ್ದಾನೆ. ಕಳೆದ ಹಲವು ತಿಂಗಳುಗಳಿಂದ ಯುವಕ ರಾಜಾರೋಷವಾಗಿ ಓಡಾಡಿದ್ದು, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆದ್ರೆ ಪೊಲೀಸರು ಇಷ್ಟು ದಿನ ಏನು ಮಾಡುತ್ತಿದ್ದರು ಎಂದೆನಿಸಬಹುದು. ಅದನ್ನೇ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಘಟನೆಯು ಪುಣೆಯಲ್ಲಿ ನಡೆದಿದ್ದು, ಯುವಕ ಕಳೆದ ಹಲವು ತಿಂಗಳುಗಳಿಂದ ಹೀಗೇ ಓಡಾಡಿಕೊಂಡಿದ್ದ. ಸಾಮಾನ್ಯವಾಗಿ MLA, MP ಆದವರು ನಿಯಮಗಳ ಪಾಲನೆಯಲ್ಲಿ ನಮಗೆ ಆದರ್ಶವಾಗಿರಲು ಪ್ರಯತ್ನಿಸುವುದರಿಂದ ಯಾವುದೇ ಟ್ರಾಫಿಕ್ ನಿಯಮಗಳನ್ನು ಅಷ್ಟು ಸುಲಭವಾಗಿ ಉಲ್ಲಂಘಿಸುವುದಿಲ್ಲ. ಎಲ್ಲರಿಗೂ ತಿಳಿದಿರುವಂತೆ ಅವರನ್ನು ಪೊಲೀಸರು ಕೂಡ ಸುಖಾಸುಮ್ಮನೆ ತಡೆದು ಪ್ರಶ್ನಿಸಲು ಮುಂದಾಗುವುದಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡು ಯುವಕ ಸಿಗ್ನಲ್ ಜಂಪ್, ಟೋಲ್, ಪಾರ್ಕಿಂಗ್ ಶುಲ್ಕ ಮತ್ತು ಇನ್ನಿತರ ಶುಲ್ಕಗಳನ್ನು ಪಾವತಿಸದೇ ಮನಬಂದಂತೆ ಓಡಾಡಿಕೊಂಡಿದ್ದ.

ವಾಹನದ ಮೇಲೆ ಕೇಸ್‌ಗಳು ಹೆಚ್ಚಾಗತೊಡಗಿದಾಗ ಪೊಲೀಸರು ಕೆಲವು ದಿನಗಳ ಕಾಲ ನಿಗಾ ಇರಿಸಿ ಆತ ನಕಲಿ ಸ್ಟಿಕ್ಕರ್ ಬಳಸಿರುವುದು ಪತ್ತೆಹಚ್ಚಿದ್ದಾರೆ. ಪೊಲೀಸರು ವಿಂಡೋಗಳ ಮೇಲೆ ಕಪ್ಪು ಬಣ್ಣ ಮತ್ತು ಸ್ಟಿಕ್ಕರ್ ನೊಂದಿಗೆ ಒಡಾಡುತ್ತಿದ್ದ ಯುವಕನ ಕಾರಿಗಾಗಿ ಬಲೆ ಬೀಸಿದ್ದರು. ಇಲ್ಲಿನ ಜೆಜೂರಿ ಚೆಕ್‌ಪೋಸ್ಟ್ ಬಳಿ ಈ ಯುವಕನನ್ನು ಬಂಧಿಸಿದ್ದಾರೆ. ಕೊನೆಗೂ ನಕಲಿ "ಎಂಎಲ್‌ಎ" ಸ್ಟಿಕ್ಕರ್‌ನ ಕಾರನ್ನು ತಡೆದು ವಾಹನ ಯಾವುದೇ ಶಾಸಕರದ್ದಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಬಂಧಿತ ಯುವಕನನ್ನು ಕಲೇವಾಡಿ ನಿವಾಸಿ ರಿತುರಾಜ್ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ವಾಹನ ಆತನದ್ದೇ ಆಗಿದ್ದು, ಸಿಕ್ಕಿಬಿದ್ದ ವೇಳೆ ಆತನೇ ಕಾರನ್ನು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.
ಐಡಿ ಕೇಳಿದಾಗ ಸಿಕ್ಕಿಬಿದ್ದ:
ಕಾರಿನ ಮೇಲೆ ಮೊದಲೇ ಅನುಮಾನದಲ್ಲಿದ್ದ ಪೊಲೀಸರು ಯುವಕ ಸಿಕ್ಕಿಬಿದ್ದಾಗ ಗುರುತಿನ ಚೀಟಿಯನ್ನು ಕೇಳಿದ್ದಾರೆ. ಈ ವೇಳೆ ಬಾಯಿಗೆ ಬಂದದ್ದು ಮಾತನಾಡಿ ತಪ್ಪಿಸಿಕೊಳ್ಳು ಪ್ರಯತ್ನಿಸಿ ಕೊನೆಗೆ ಐಡಿ ನೀಡಲು ತಡಬಡಾಯಿಸಿದ್ದಾನೆ. ಈ ವೇಳೆ ಪೊಲೀಸರ ಅನುಮಾನ ನಿಜವಾಗಿದ್ದು, ಕಾರಿನ ಮೇಲಿದ್ದ ನಕಲಿ ಎಂಎಲ್ಎ ಸ್ಟಿಕ್ಕರ್ ಅನ್ನು ಕಿತ್ತುಹಾಕಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ ಯುವಕನಿಗೆ ಮೋಟಾರು ವಾಹನ ಕಾಯ್ದೆಯಡಿ 6,500 ರೂ. ದಂಡ ವಿಧಿಸಿದ್ದಾರೆ.
ಘಟನೆಯ ಕುರಿತು ಹೇಳಿಕೆ ನೀಡಿರುವ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್, ಎಂಎಲ್‌ಎ ಆದವರು ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಕೊನೆಗೂ ಯುವಕ ತನ್ನ ಕ್ರೆಟಾ ಕಾರಿನ ಮೇಲೆ ನಕಲಿ ಎಂಎಲ್ಎ ಸ್ಟಿಕ್ಕರ್ ಅನ್ನು ಬಳಸುತ್ತಿರುವುದು ನಮಗೆ ತಿಳಿದುಬಂದಿದೆ. ಹಾಗಾಗಿ ಕೆಲ ದಿನಗಳ ಕಾಲ ಆತನ ಮೇಲೆ ನಿಗಾ ವಹಿಸಿದ್ದೆವು. ಕೊನೆಗೂ 22 ವರ್ಷದ ಯುವಕನನ್ನು ಬಂಧಿಸಿ ಅಪರಾಧವನ್ನು ಪುನರಾವರ್ತಿಸಿದರೆ ಕಠಿಣ ಕ್ರಮದ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದರು.
ಈ ಹಿಂದೆಯು ಇಂಥಹದ್ದೇ ಪ್ರಕರಣ:
ಮುಂಬೈ ನಗರದ ಅಂಧೇರಿ ನಿವಾಸಿ 20 ವರ್ಷದ ಸಬೆತ್ ಅಸ್ಲಾಮ್ ಶಾ ಎಂಬ ಯುವಕ 2020 ರಲ್ಲಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದಾಗ ಓಡಾಡಲು ಕಠಿಣವಾಗುತ್ತಿದ್ದ ಕಾರಣ MLA ಸ್ಟಿಕ್ಕರ್ ಅನ್ನು ಬಳಸಿದ್ದನು. ಸ್ಟಿಕ್ಕರ್ ಬಳಸಿ ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಮತ್ತು ಅಧಿಕಾರಿಗಳಿದ್ದ ಅನೇಕ ಚೆಕ್‌ಪೋಸ್ಟ್‌ಗಳನ್ನು ಸರಾಗವಾಗಿ ಹಾದು ಹೋಗಿದ್ದ. ಈ ವೇಳೆ ಅನುಮಾನಗೊಂಡು ಚೆಕ್‌ಪೋಸ್ಟ್‌ವೊಂದರಲ್ಲಿ ಯುವಕನನ್ನು ತಡೆದು ಪ್ರಶ್ನಿಸಿದಾಗ ಸಿಕ್ಕಿಬಿದ್ದಿದ್ದ.
ಲಾಕ್‌ಡೌನ್ ಸಮಯದಲ್ಲಿ ನಗರದಾದ್ಯಂತ ಸ್ಥಾಪಿಸಲಾದ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಸುಲಭವಾಗಿ ದಾಟಲು ಉದ್ದೇಶಪೂರ್ವಕವಾಗಿ ಸ್ಟಿಕ್ಕರ್ ಅನ್ನು ಹಾಕಿದ್ದೇನೆ ಎಂದು ಸಬೆತ್ ಅಂತಿಮವಾಗಿ ಒಪ್ಪಿಕೊಂಡದ್ದ. ವಿವಿಧ ವಿಭಾಗಗಳ ಅಡಿಯಲ್ಲಿ ಸಬೆಟ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಏಕೆಂದರೆ ಆಗ ಕೊರೊನಾ ಹರಡುವ ಭೀತಿ ಹೆಚ್ಚಗಿದ್ದ ಕಾರಣ, ನಿರ್ಲಕ್ಷ್ಯದ ಕೃತ್ಯವನ್ನು ಮಾಡಿದ ಆರೋಪದಡಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಇಂತಹ ಪ್ರಕರಣಗಳು ಭಾರತದಾದ್ಯಂತ ಹಲವೆಡೆ ನಡೆಯುತ್ತಿವೆ, ಆದರೆ ಬೆಳಕಿಗೆ ಬಂದಾಗ ಮಾತ್ರ ಸಿಕ್ಕಿಬೀಳುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications