ರಾಮಗಂಗೆಯಲ್ಲಿ ಮಹೀಂದ್ರಾ ಥಾರ್ ಚಲಾಯಿಸಿದ ಯುವಕರು.. ಹಿರೋಯಿಸಂ ತೋರಿಸಿದ್ರೆ ಹೀಗೆ ಆಗೋದು!
ಕೆಲವು ವ್ಯಕ್ತಿಗಳು ತಾವು ಇತರರಿಗಿಂತ ಭಿನ್ನ ಎಂದು ತೋರಿಸಲು ಕಾರು ಅಥವಾ ಬೈಕ್ ಬಳಸಿ ಚಿತ್ರ-ವಿಚಿತ್ರ ಸಾಹಸಗಳನ್ನು ಮಾಡುತ್ತಿದ್ದಾರೆ. ಅಂತಹ ಕೆಲಸಗಳನ್ನು ಮಾಡಿ, ಎಷ್ಟೋ ಮಂದಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಇಲ್ಲೊಂದು ಘಟನೆಯಲ್ಲಿಯೂ ಹಾಗೆಯೇ ಆಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಉತ್ತರಾಖಂಡದ (Uttarakhand) ಅಲ್ಮೋರಾದಲ್ಲಿ ಮೈದುಂಬಿ ಹರಿಯುತ್ತಿದ್ದ ರಾಮಗಂಗಾ ನದಿಯನ್ನು (Ramganga River) ಮೂವರು ಯುವಕರು, ಮಹೀಂದ್ರಾ ಥಾರ್ (mahindra thar) ಎಸ್‌ಯುವಿಯಲ್ಲಿ ದಾಟುವ ಸಾಹಸಕ್ಕೆ ಕೈಹಾಕಿದ್ದಾರೆ. ಆದರೆ, ಮಧ್ಯದಲ್ಲಿಯೇ ಕಾರು ಚಲಿಸಲಾಗದೇ ನಿಂತಿದ್ದು, ಪರಿಣಾಮ ಯುವಕರು ಅಪಾಯಕ್ಕೆ ಸಿಲುಕಿದ್ದಾರೆ.

ಇವರೆಲ್ಲ ಮೂಲತಃ ದೆಹಲಿಯವರೆಂದು ತಿಳಿದುಬಂದಿದೆ. ಈ ವಿಡಿಯೋವನ್ನು 'ಗ್ರೇಟರ್ ನೋಯ್ಡಾ' ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಆ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಥಾರ್ ಎಸ್‌ಯುವಿ ನದಿ ನಡುವೆ ಸಿಲುಕಿಕೊಂಡ ನಂತರ, ಯುವಕರು ಅದರ ರೂಫ್ ಮೇಲೆ ಬಂದು ಕುಳಿತುಕೊಂಡಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಹಗ್ಗದ ನೆರವಿನಿಂದ ಅವರನ್ನು ರಕ್ಷಿಸಿದ್ದಾರೆ.
ಈ ವಿಡಿಯೋಗೆ ಟ್ವಿಟರ್ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, 'ಅವರಿಗೆ ದಂಡ ವಿಧಿಸಲಾಗಿದೆಯೇ ಅಥವಾ ಇಲ್ಲವೇ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, 'ಅವರು ತಮ್ಮ ಮೆದುಳನ್ನು ನೋಯ್ಡಾ ಟೋಲ್‌ನಲ್ಲಿ ಬಿಟ್ಟಿದ್ದಾರೆಯೇ?' ಎಂದು ಕೇಳಿದ್ದಾರೆ. ಇನ್ನೊಬ್ಬರು, 'ಅವರು ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇನೆ. ಆದರೆ, ತಮ್ಮ ಮೆದುಳನ್ನು ಬೇರೆಡೆ ಬಿಟ್ಟಿದ್ದಾರೆಯೇ' ಎಂದು ಕಾಮೆಂಟ್ ಮಾಡಿದ್ದಾರೆ.
ಯುವಕರಿಗೆ ಆಫ್ - ರೋಡ್ ವಾಹನ ಚಲಾಯಿಸುವುದು ಕ್ರೇಜ್ ಆಗಿರಬಹುದು. ಆದರೆ, ಮಳೆಗಾಲದ ಸಂದರ್ಭದಲ್ಲಿ ಎಲ್ಲ ನದಿಗಳು ರಭಸವಾಗಿ ಹರಿಯುತ್ತಿರುತ್ತವೆ. ಅಂತಹ ವೇಳೆ, ಯಾರೇ ಆಗಲಿ ಇಷ್ಟಬಂದಂತೆ ದಾಟಲು ಪ್ರಯತ್ನಿಸಬಾರದು. ಕೊಂಚ ಯಾಮಾರಿದರೂ ಅಪಾಯಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಅದರಿಂದ ಪ್ರಾಣಕ್ಕೂ ಹಾನಿಯೂ ಸಂಭವಿಸಬಹುದು. ಏನೇ ಆಗಲಿ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ 3 - ಡೋರ್ ಆಯ್ಕೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಥಾರ್, ರೂ.10.54 ಲಕ್ಷದಿಂದ ರೂ.16.78 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. (ಕಂಪನಿ 5 - ಡೋರ್ ಥಾರ್ ಕೂಡ ಅಭಿವೃದ್ಧಿಪಡಿಸುತ್ತಿದೆ) ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, ಅದಕ್ಕೆ ತಕ್ಕಂತೆ ಪವರ್ ಉತ್ಪಾದಿಸುತ್ತದೆ. ಇದು, ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ 15.2 kmpl ಮೈಲೇಜ್ ನೀಡುತ್ತದೆ.
ಮಹೀಂದ್ರಾ ಥಾರ್, 4WD (ಫೋರ್ ವೀಲ್ ಡ್ರೈವ್) ಹಾಗೂ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ. ಎವರೆಸ್ಟ್ ವೈಟ್, ರೆಡ್ ರೇಜ್, ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದ್ದು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮ್ಯಾನ್ಯುವಲ್ ಎಸಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಏರ್ ಬಾಗ್ಸ್ ಮತ್ತು ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications