ವಂದೇ ಭಾರತ್, ಅಮೃತ್ ಭಾರತ್ ರೈಲುಗಳಿಂದ ಪ್ರಯಾಣದ ಮರುಕಲ್ಪನೆ.. ದೇಶದಲ್ಲಿ ದೊಡ್ಡ ಕ್ರಾಂತಿ!
ಭಾರತ ಆಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಜ್ಜಾಗಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ, ದೇಶವು ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು, ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯರು ದುಡಿಯುತ್ತಿದ್ದಾರೆ. ನಾವು ಇತರೆ ದೇಶಗಳ ಮೇಲೆ ಅವಲಂಬನೆಯಾಗದೆ ಸ್ವಾಲಂಬಿಯಾಗುವ ಕಡೆಗೆ ಸಾಗುತ್ತಿದ್ದೇವೆ. ಅದರಲ್ಲೂ ದೇಶದ ಸಾರಿಗೆಯ ಬೆನ್ನೆಲುಬಾಗಿರುವ 'ರೈಲ್ವೆ' ಭಾರಿ ಪ್ರಗತಿ ಕಂಡಿದೆ. ಸ್ವದೇಶಿವಾಗಿ ತಯಾರಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗಳು ರೈಲು ಪ್ರಯಾಣಕ್ಕೆ ಮರುಕಲ್ಪನೆ ನೀಡಿವೆ.
ಸೆಮಿ - ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಸ್ವದೇಶಿ ತಂತ್ರಜ್ಞಾನದ ಹೆಮ್ಮೆಯ ಸಂಕೇತವಾಗಿದೆ. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ತಯಾರಿಸಲಾಗಿದೆ. ಈ ರೈಲು ಭಾರತದ ಎಂಜಿನಿಯರಿಂಗ್ ಕ್ಷೇತ್ರದ ಪರಿಣಿತಿಯನ್ನು ಜಗತ್ತಿಗೆ ಪರಿಚಯಿಸುತ್ತಿದೆ.

ವಂದೇ ಭಾರತ್ ರೈಲು ಗರಿಷ್ಠ ವೇಗದಲ್ಲಿ ಸಂಚರಿಸುವುದಕ್ಕೆ ಹೆಸರುವಾಸಿಯಾಗಿದೆ. ಈ ರೈಲಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 'ಕವಾಚ್' ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರಿಗೂ ವಿಮಾನದಂತಹ ಅತ್ಯಾಧುನಿಕ ಸೌಕರ್ಯ ಒದಗಿಸಲಾಗುತ್ತದೆ. ಸಂಪೂರ್ಣ ಎಸಿ (ಹವಾನಿಯಂತ್ರಿತ) ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಹೆಚ್ಚು ಆರಾಮದಾಯವಾಗಿವೆ. ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು ಮತ್ತು ಅಗ್ನಿ ನಿರೋಧಕ ಸಾಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ.
2019ರ ಫೆಬ್ರವರಿ 15ರಂದು ನವದೆಹಲಿ ಹಾಗೂ ವಾರಣಾಸಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟವನ್ನು ಆರಂಭಿಸಿತ್ತು. ಆ ಬಳಿಕ, ಹಲವು ರಾಜ್ಯಗಳಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರವನ್ನು ಶುರುಮಾಡಿದ್ದವು. ಈ ಹಿಂದೆ, ಭೂಮಿಗೆ 310 ಸುತ್ತುಗಳನ್ನು ಹಾಕುವಷ್ಟು ದೂರವನ್ನು ಈ ರೈಲುಗಳು ಕ್ರಮಿಸಿವೆ ಎಂದು ವರದಿಯಾಗಿತ್ತು.

ಅಮೃತ್ ಭಾರತ್ ಎಕ್ಸ್‌ಪ್ರೆಸ್ (Amrit Bharat Express) ರೈಲನ್ನು ಕೂಡ ದೇಶೀಯವಾಗಿಯೇ ತಯಾರಿಸಲಾಗಿದೆ. ಈ ರೈಲಿನ ಎಂಜಿನ್‌ನ್ನು ಪಶ್ಚಿಮ ಬಂಗಾಳದಲ್ಲಿರುವ ಚಿತ್ತರಂಜನ್ ಲೊಕೊಮೊಟಿವ್ ವರ್ಕ್ಸ್ (ಸಿಎಲ್ಡಬ್ಲ್ಯೂ)ನಲ್ಲಿ ತಯಾರಿಸಲಾಗಿದೆ. ಕೋಚ್‌ಗಳನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, 2023ರ ಡಿ.30ರಂದು ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಮಾಲ್ಡಾ-ಬೆಂಗಳೂರು ಹಾಗೂ ದೆಹಲಿ-ಅಯೋಧ್ಯೆ-ದರ್ಬಂಗಾ ಮಧ್ಯೆ ಸಂಚರಿಸುವ ಮೊದಲ 2 ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು.
ಸಾಮಾನ್ಯ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ 'ಅಮೃತ್ ಭಾರತ್' ಎಕ್ಸ್‌ಪ್ರೆಸ್‌ನ್ನು ಪರಿಚಯಿಸಲಾಗಿತ್ತು. ಈ ರೈಲುವೊಂದರಲ್ಲಿ 1,834 ಜನರು ಪ್ರಯಾಣಿಸಬಹುದು. ವೇಗವಾಗಿ ಸಂಚರಿಸಲಿದ್ದು, ಮುಂಭಾಗ ಹಾಗೂ ಹಿಂಭಾಗ ಎಂಜಿನ್‌ನ್ನು ಒಳಗೊಂಡಿದೆ. ದ್ವಿತೀಯ ದರ್ಜೆ ಸ್ಲೀಪರ್ ಕೋಚ್ ಮತ್ತು ಕಾಯ್ದಿರಿಸದ ಕೋಚ್‌ಗಳನ್ನು ಹೊಂದಿದೆ. ಇದರಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ. ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ಲೈಟ್ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳು ಇವೆ.
ರೈಲ್ವೆ ಇಲಾಖೆ ಪ್ರಯಾಣಿಕರ ರಾತ್ರಿ ಸಂಚಾರಕ್ಕಾಗಿ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ ಈ ರೈಲು ಹಳಿಗೆ ಬರುವ ಸಾಧ್ಯತೆಯಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ತಯಾರಿಕಾ ಘಟಕದಲ್ಲಿ ವಂದೇ ಸ್ಲೀಪರ್‌ನ್ನು ಸಿದ್ಧಪಡಿಸಲಾಗುತ್ತಿದೆ.
ಹಲವು ವಿಶ್ವದರ್ಜೆಯ ಸೌಕರ್ಯಗಳು ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಇರಲಿದ್ದು, 16 ಕೋಚ್‌ಗಳನ್ನು ಒಳಗೊಂಡಿರಲಿದೆ. ಅದರಲ್ಲಿ 823 ಬರ್ತ್‌ಗಳನ್ನು ಹೊಂದಿರುವ ನಿರೀಕ್ಷೆಯಿದೆ. ಹತ್ತಿರದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ವಂದೇ ಮೆಟ್ರೋ (Vande Metro) ಕೂಡ ಶೀಘ್ರದಲ್ಲಿಯೇ ಕಾರ್ಯಾಚರಣೆಗೆ ಬರಲಿದೆ. ಪ್ರಯಾಣಿಕರು 250 ಕಿಲೋಮೀಟರ್ ದೂರವನ್ನು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದೆ ಎಂದು ತಿಳಿದುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








