85ರ ವಯಸ್ಸಲ್ಲಿ 60ನೇ ಕಾರು ಖರೀದಿ... ಇದ್ದಷ್ಟು ದಿನ ಎಂಜಾಯ್ ಮಾಡಿ ಎಂದ ವೃದ್ಧ! ವಿಡಿಯೋ
ಕೇರಳದ ಮಾವೆಲಿಕ್ಕರದ 85 ವರ್ಷದ ಮಾಜಿ ವಕೀಲ ನಾರಾಯಣನ್ ಪಿಳ್ಳೈ ಎಂಬುವರು, 60ಕ್ಕೂ ಹೆಚ್ಚು ಕಾರುಗಳನ್ನು ಖರೀದಿಸಿದ್ದಾರೆ. ಕಾರುಗಳೊಂದಿಗಿನ ಅವರ ಪ್ರಯಾಣವು ದಶಕಗಳು, ದೇಶಗಳು ಮತ್ತು ಅಸಂಖ್ಯಾತ ಮೈಲಿಗಳನ್ನು ವ್ಯಾಪಿಸಿದೆ. ಇವರ ಪ್ರಕಾರ ಕಾರುಗಳನ್ನು ಜೀವನ ಪರ್ಯಂತ ಇಟ್ಟುಕೊಳ್ಳಬಾರದು, ಒಂದೆರಡು ವರ್ಷ ಅವುಗಳನ್ನು ಬಳಸಿ ಮಾರಾಟ ಮಾಡಬೇಕು. ಬಳಿಕ ಮಾರುಕಟ್ಟೆಗೆ ಬರುವ ಹೊಸ ಕಾರನ್ನು ಖರೀದಿಸಬೇಕು. ಕಾರುಗಳೆಂದರೆ ಬಹಳಷ್ಟು ಕ್ರೇಜ್ ಹೊಂದಿರುವ ಈ ವೃದ್ದ ಇತ್ತೀಚೆಗೆ ತಮ್ಮ ಮನಮೆಚ್ಚಿದ ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ (220 ಐ)ಯನ್ನು ಖರೀದಿಸಿದ್ದಾರೆ.
ಈ ಐಷಾರಾಮಿ ಕಾರು 2.0 ಲೀಟರ್ ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 189 ಬಿಹೆಚ್ ಪವರ್ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 7.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಕಾರಿನ ಬಗ್ಗೆ ಹೇಳುವುದಕ್ಕಿಂತ ವೃದ್ಧನ ಬಗ್ಗೆ ಹೇಳಿದ್ರೆ ನೀವು ಇನ್ನಷ್ಟು ಉತ್ಸಾಹಗೊಳ್ಳಬಹುದು. ಬನ್ನಿ ಅವರ ಬಗ್ಗೆ ತಿಳಿಯೋಣ...

ಪಿಳ್ಳೈ ಅವರಿಗೆ ಮೊದಲ ಬಾರಿಗೆ ಕಾರು ಕ್ರೇಜ್ ಹುಟ್ಟಿಕೊಂಡಿದ್ದು ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದಾಗ. ಅಲ್ಲಿ ಆಡಿ ಕಾರೊಂದನ್ನು ನೋಡಿ ಮನಸೋತಿದ್ದರು, ಬಳಿಕ ಅದನ್ನೇ ಖರೀದಿಸಿದರು. ಅವರು ಆರ್ಥಿಕವಾಗಿ ಬೆಳೆದಂತೆ ಮಾರುಕಟ್ಟೆಗೆ ಬರುವ ಹೊಸ ಕಾರುಗಳನ್ನು ಖರೀದಿಸಬೇಕೆಂಬ ಆಸೆ ಹೆಚ್ಚಾಯಿತು. ಖರೀದಿಸುವ ಪ್ರತಿ ಕಾರನ್ನು ಒಂದೆರಡು ವರ್ಷಗಳವರೆಗೆ ಬಳಸಿ ಮತ್ತೊಂದು ಮಾಡಲ್ ಅಥವಾ ಬ್ರಾಂಡ್‌ನ ಕಾರನ್ನು ಖರೀದಿಸುತ್ತಿದ್ದರು.
ಹೀಗೆ ಅವರ ಹೊಸ ಕಾರು ಖರೀದಿಸುವ ಆಸೆಗಳನ್ನು ಈಡೇರಿಸಕೊಳ್ಳುವ ಮೂಲಕ ಇಲ್ಲಿಯವರೆಗೆ ಬರೋಬ್ಬರಿ 60ಕ್ಕೂ ಹೆಚ್ಚು ಕಾರುಗಳನ್ನು ಖರೀದಿಸಿ ಅವುಗಳ ಪರ್ಫಾಮೆನ್ಸ್ ಅನ್ನು ಅನುಭವಿಸಿದ್ದಾರೆ. ಕೇವಲ ಭಾರತ ಮಾತ್ರವಲ್ಲ, ಈ ಹಿಂದೆ ಅವರು ಆಸ್ಟ್ರೇಲಿಯಾದಲ್ಲಿ 43 ವರ್ಷ ಮತ್ತು ಲಂಡನ್‌ನಲ್ಲಿ 7 ವರ್ಷಗಳನ್ನು ಕಳೆದಿದ್ದಾರೆ. ಈ ದೇಶಗಳಲ್ಲಿಯೂ ಪಿಳ್ಳೈ ಅವರು ತಮ್ಮಿಷ್ಟದ ಕಾರುಗಳನ್ನು ಖರೀದಿಸಿ ಆಸೆ ಈಡೇರಿಸಿಕೊಂಡಿದ್ದಾರೆ.

ಅಂತಿಮವಾಗಿ ಭಾರತಕ್ಕೆ ಮರಳಿ ಸದ್ಯ ಇಲ್ಲಿನ ಐಷಾರಾಮಿ ಕಾರುಗಳ ಚಾಲನಾ ಅನುಭವವನ್ನು ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರು ಖರೀದಿಸಿದ ಎಲ್ಲಾ ಬ್ರಾಂಡ್‌ಗಳಲ್ಲಿ, ಬಿಎಂಡಬ್ಲ್ಯು ಮಾತ್ರ ವಿಶೇಷ ಸ್ಥಾನವನ್ನು ಹೊಂದಿದೆ. 2008ರಿಂದ ಅವರು ಬಿಎಂಡಬ್ಲ್ಯೂಗಳನ್ನು ಪ್ರತ್ಯೇಕವಾಗಿ ಓಡಿಸುತ್ತಿದ್ದು, ಕೇರಳದ ಇವಿಎಂ ಗ್ರೂಪ್ ಡೀಲರ್‌ಶಿಪ್‌ನಿಂದ ಸುಮಾರು 14 ವಾಹನಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಪಿಳ್ಳೈ ಅವರು ಲಾಂಗ್ ಡ್ರೈವ್ ಹೆಚ್ಚಾಗಿ ಇಷ್ಟಪಡುತ್ತಾರೆ. ಆಸ್ಟ್ರೇಲಿಯಾದ ಪ್ರತಿಯೊಂದು ಮೂಲೆಗೂ ಡ್ರೈವ್ ಮಾಡಿರುವುದಾಗಿ ಹೇಳಿದ್ದಾರೆ. ಸದ್ಯ ಈಗಲೂ ಆಗಾಗ್ಗೆ ತಮಿಳುನಾಡಿಗೆ ಪ್ರಯಾಣಿಸುತ್ತಾರೆ. ಕಾರುಗಳನ್ನು ಓಡಿಸುವುದು ಮತ್ತು ಅವುಗಳನ್ನು ಆನಂದಿಸುವುದು ಮಾತ್ರ ನನ್ನ ಮುಖ್ಯ ಉದ್ದೇಶ, ಅವುಗಳನ್ನು ಸಂಗ್ರಹಿಸುವುದರ ಬಗ್ಗೆ ನನಗೆ ಒಲವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಾರು ಉತ್ಸಾಹವು ಕೇವಲ ಯುವ ಪೀಳಿಗೆಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು 85ರ ವಯಸ್ಸಿನ ನಾರಾಯಣನ್ ಪಿಳ್ಳೈ ತೋರಿಸಿದ್ದಾರೆ. ಈಗ ಖರೀದಿಸಿರುವ ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಕೂಡ ನನ್ನ ಕೊನೆಯ ಕಾರಲ್ಲ, ಮುಂಬರುವ ದಿನಗಳಲ್ಲಿ ನನಗೆ ಇಷ್ಟವಾಗುವ ಮತ್ತೊಂದು ಮಾಡಲ್ ಬಂದರೆ ಖಂಡಿತ ಅದನ್ನು ಖರೀದಿಸುತ್ತೇನೆ ಎಂದು ಪಿಳ್ಳೈ ಹೇಳಿದ್ದಾರೆ. ಒಟ್ಟಾರೆ ತಮ್ಮ ಆನಂದದ ಕ್ಷಣಗಳನ್ನು ಅವರು ಅನುಭವಿಸುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications