Vande bharat: 9 ಹೊಸ ವಂದೇ ಭಾರತ್ ರೈಲುಗಳು ಶೀಘ್ರದಲ್ಲೇ ಪ್ರಾರಂಭ | 9 new Vande Bharat trains starting soon
ಎರಡು ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದ ಎರಡು ತಿಂಗಳ ನಂತರ ಇದೀಗ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಬರೋಬ್ಬರಿ ಒಂಬತ್ತು ವಂದೇ ಭಾರತ್ ರೈಲುಗಳು ಹೊರಟಿವೆ ಎಂದು ವರದಿಯಾಗಿದೆ. ಈ ರೈಲುಗಳನ್ನು ವಾಯುವ್ಯ, ದಕ್ಷಿಣ ಮಧ್ಯ, ಪೂರ್ವ ಕರಾವಳಿ ರೈಲ್ವೆ ಮತ್ತು ಪೂರ್ವ ಮಧ್ಯ ರೈಲ್ವೆಗೆ ನಿಯೋಜಿಸುವುದಾಗಿ ತಿಳಿದುಬಂದಿದೆ.
ನ್ಯೂಸ್ 18 ವರದಿಯ ಪ್ರಕಾರ, ಮುಂಬೈ ಮೂಲದ ಪಶ್ಚಿಮ ರೈಲ್ವೆಯು ಹೊಸ ವಂದೇ ಭಾರತ್ ರೈಲನ್ನು ಈಗಾಗಲೇ ಸ್ವೀಕರಿಸಿದೆ. ಮತ್ತೊಂದು ರೈಲು ಇನ್ನೂ ನಿರ್ದಿಷ್ಟ ವಲಯಕ್ಕೆ ನಿಯೋಜಿಸಲು ಕಾಯುತ್ತಿದೆ, ಇದು ಮಧ್ಯಪ್ರದೇಶ ಅಥವಾ ರಾಜಸ್ಥಾನಕ್ಕೆ ಸೇವೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಎರಡು ರೈಲುಗಳು ಜೈಪುರದಿಂದ ಇಂದೋರ್ ಮತ್ತು ಉದಯಪುರದಂತಹ ಸ್ಥಳಗಳಿಗೆ ಚಲಿಸಬಹುದು ಎಂದು ಮೂಲಗಳು ತಿಳಿಸಿವೆ.

ಬಹುತೇಕ ಹೊಸ ರೈಲುಗಳನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ನೀಡುವ ಸಾಧ್ಯೆತೆ ಹೆಚ್ಚಾಗಿದೆ. ಏಕೆಂದರೆ ಈ ರಾಜ್ಯಗಳು ಚುನಾವಣೆಗೆ ಹತ್ತಿರದಲ್ಲಿರುವ ಕಾರಣ ರೈಲ್ವೆ ಲಾಭ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ. ಈ ಹೊಸ ರೈಲುಗಳು ಎಂಟು ಕೋಚ್‌ಗಳಿಂದ ಸಜ್ಜುಗೊಂಡಿದ್ದು, ಸದ್ಯ ಸೇವೆಯಲ್ಲಿರುವ ಇತರ ವಂದೇ ಭಾರತ್‌ಗಳಂತೆಯೇ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿರಲಿವೆ ಎಂದು ತಿಳಿದುಬಂದಿದೆ.
ಪ್ರಸ್ತುತ, ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 25 ವಂದೇ ಭಾರತ್ ರೈಲುಗಳು ಓಡುತ್ತಿವೆ. ಉತ್ತರ ವಲಯವು ನಾಲ್ಕು ರೈಲುಗಳು, ದಕ್ಷಿಣ ಮತ್ತು ಮಧ್ಯ ವಲಯಗಳು ಪ್ರತಿಯೊಂದೂ ಮೂರು ರೈಲುಗಳನ್ನು ಹೊಂದಿವೆ. ಪಶ್ಚಿಮ, ಪಶ್ಚಿಮ ಮಧ್ಯ ಮತ್ತು ವಾಯುವ್ಯ ರೈಲ್ವೆಯು ತಲಾ ಎರಡು ವಂದೇ ಭಾರತ್ ರೈಲುಗಳನ್ನು ಹೊಂದಿದ್ದರೇ, ಉಳಿದ ಒಂಬತ್ತು ವಲಯಗಳಲ್ಲಿ ತಲಾ ಒಂದು ವಂದೇ ಭಾರತ್ ರೈಲುಗಳು ಇವೆ.

ಶೀಘ್ರದಲ್ಲೆ ಮಂಗಳೂರಿಗೆ: ಕೇರಳದ ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20634) ಓಡಾಟ ನಡೆಸುತ್ತಿದೆ. ಬೆಳಗ್ಗೆ 5:20ಕ್ಕೆ ತಿರುವನಂತಪುರಂನಿಂದ ಹೊರಡುವ ರೈಲು, ಮಧ್ಯಾಹ್ನ 1:20ಕ್ಕೆ ಕಾಸರಗೂಡು ತಲುಪುತ್ತದೆ. ಈ ರೈಲನ್ನೇ ಮಂಗಳೂರು ತನಕ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಅಗತ್ಯ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಲೋಕೋ ಪೈಲಟ್ ಗಳಿಗೆ ಚೆನ್ನೈನಲ್ಲಿ ತರಬೇತಿ ಆರಂಭವಾಗಿದೆ.
ಮಂಗಳೂರಿನಲ್ಲಿ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿರ್ವಹಣಾ ಘಟಕ ತಲೆ ಎತ್ತಲಿದೆ ಎಂದು ಹೇಳಲಾಗಿದೆ. ತಿರುವನಂತಪುರಂ - ಮಂಗಳೂರು ನಡುವೆ ಶೀಘ್ರದಲ್ಲೇ ಕಾರ್ಯಚರಣೆ ಶುರುವಾಗುವ ನೀರಿಕ್ಷೆಯಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಮುಖ್ಯವಾಗಿ, ತಿರುವನಂತಪುರಂ-ಕಣ್ಣೂರು ಶತಾಬ್ದಿ (ರೈಲು ಸಂಖ್ಯೆ 12082) ಮತ್ತು ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ (ರೈಲು ಸಂಖ್ಯೆ 16307) ರೈಲುಗಳ ಸಮಯ ಪರಿಷ್ಕರಣೆಯಾಗಿದೆ.

ತಿರುವನಂತಪುರಂ - ಮಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ರೈಲಿನ ಟಿಕೆಟ್ ದರ ಹಾಗೂ ನಿಲುಗಡೆ ನಿಲ್ದಾಣದ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ, ಬೆಂಗಳೂರು - ಹೈದರಾಬಾದ್ ಮಾರ್ಗದಲ್ಲೂ ಈ ತಿಂಗಳಾಂತ್ಯದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸುವ ಸಾಧ್ಯತೆಯಿದ್ದು, ಕಲಬುರಗಿಯ ಸೇಡಂ ಹಾಗೂ ರಾಯಚೂರು ನಿಲ್ದಾಣದಲ್ಲಿ ನಿಲುಗಡೆಯಾಗಬಹುದು ಎಂದು ವರದಿಯಾಗಿದೆ.
ಇವೆರೆಡು ನಗರ ನಡುವೆ 618 ಕಿಲೋಮೀಟರ್ ದೂರವನ್ನು ಕ್ರಮಿಸಲು ವಂದೇ ಭಾರತ್ 7 - 8 ಗಂಟೆಗಳಲ್ಲಿ ತೆಗೆದುಕೊಳ್ಳಬಹುದು. ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ, ಮೂರು ಗಂಟೆ ಸಮಯಾವಕಾಶ ಕಡಿಮೆಯಾಗುವ ನೀರಿಕ್ಷೆಯಿದೆ. ಈ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿರಲಿದೆ. ದಕ್ಷಿಣ ಮಧ್ಯ ರೈಲ್ವೆ ಈ ವಂದೇ ಭಾರತ್ ರೈಲಿನ ನಿರ್ವಹಣೆಯನ್ನು ಮಾಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications