BMTC: ಅನಾರೋಗ್ಯಕ್ಕೆ ತುತ್ತಾದ ಡ್ರೈವರ್ ಬದಲು ತಾವೇ ಬಸ್ ಓಡಿಸಿದ ಸಿಂಗಂ ಎಸಿಪಿ ರಾಮಚಂದ್ರ!
ನಾಗರಿಕ ಸೇವಕರೆಂದರೆನೆ ಹಾಗೆ, ಜನರ ಕಷ್ಟಕಾಲದಲ್ಲಿ ಹಿಂದೆ ಮುಂದೆ ನೋಡದೆ ಸಹಾಯ ಮಾಡಿ ಅವರನ್ನು ಸಂಕಷ್ಟದಿಂದ ಪಾರು ಮಾಡುವುದು. ಈ ರೀತಿ ಪೊಲೀಸರು ಹಲವು ಬಾರಿ ಜನರಿಗೆ ಸಹಾಯ ಮಾಡುತ್ತಾ ಆಗಾಗ ಸುದ್ದಿಯಲ್ಲಿರುವುದು ಇತ್ತೀಚೆಗೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡಿದ್ದೇವೆ.
ಅದೇ ರೀತಿ ಇಲ್ಲೊಂದು ಕಡೆ ಬಸ್ ಡ್ರೈವರ್ ಅನಾರೋಗ್ಯಕ್ಕೆ ತುತ್ತಾದುದನ್ನು ಕಂಡ ಪೊಲೀಸ್ ಅಧಿಕಾರಿಯೊಬ್ಬರು, ಅವರನ್ನು ಬದಿಗೆ ಇರಿಸಿ ಸ್ವತಃ ತಾವೇ ಡ್ರೈವರ್ ಸೀಟ್ ಹತ್ತಿ ಬಸ್ ಚಾಲನೆ ಮಾಡಿಕೊಂಡು, ಬಸ್‌ನಲ್ಲಿದ್ದ ಅಷ್ಟೂ ಜನರ ಪ್ರಾಣ ಉಳಿಸಿದ ಘಟನೆಯೊಂದು ಇತ್ತೀಚೆಗೆ ವರದಿಯಾಗಿದೆ.

ಈ ಘಟನೆ ನಡೆದಿರುವುದು ನಮ್ಮ ಬೆಂಗಳೂರಿನಲ್ಲೇ. ಹೌದು, ಬಿಎಂಟಿಸಿ (BMTC) ಬಸ್ ಚಾಲಕ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಕಂಡ ಹಲಸೂರು ಎಸಿಪಿ ರಾಮಚಂದ್ರ ಅವರು, ಬಸ್ ಡ್ರೈವರ್‌ಗೆ ವಿಶ್ರಾಂತಿ ನೀಡಿ ಸ್ವತಃ ಅವರೇ ಬಸ್ ಚಲಾಯಿಸಿಕೊಂಡು ಕರ್ತವ್ಯ ಪ್ರಜ್ಞೆ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವರದಿಗಳ ಪ್ರಕಾರ ಶಿವಾಜಿ ನಗರ ಮತ್ತು ಕಾಡುಗೋಡಿ ಮಾರ್ಗದಲ್ಲಿ ಬಸ್ ಚಲಾಯಿಸುತ್ತಿದ್ದ ಬಿಎಂಟಿಸಿ (BMTC) ಚಾಲಕನಿಗೆ ಮಾರ್ಗ ಮಧ್ಯದಲ್ಲಿ ಅನಾರೋಗ್ಯ ಎದುರಾಗಿದೆ. ಈ ಸಂಧರ್ಭದಲ್ಲಿ ಚಾಲಕ ಚಿಕಿತ್ಸೆ ಪಡೆಯುವುದಕ್ಕಾಗಿ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆಯಲ್ಲಿ ಬಸ್ ಅನ್ನು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಇದೇ ಸಂಧರ್ಭದಲ್ಲಿ ಬೆಂಗಳೂರು ನಗರಕ್ಕೆ ವಿಐಪಿಗಳು ಆಗಮಿಸುತ್ತಿದ್ದುದರಿಂದ ಅಂದು ಹಲಸೂರು ಎಸಿಪಿ ರಾಮಚಂದ್ರ ಅವರು ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಭಧ್ರತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂಧರ್ಭದಲ್ಲಿ ರಸ್ತೆ ಮಧ್ಯೆ ನಿಂತಿದ್ದ ಬಿಎಂಟಿಸಿ ಬಸ್ ಗಮನಿಸಿದ ಎಸಿಪಿ ರಾಮಚಂದ್ರ ಅವರು ಬಳಿ ಬಂದು ವಿಚಾರಿಸಿದಾಗ ಬಸ್ ನಿಂತ ಕಾರಣ ಗೊತ್ತಾಗಿದೆ.
ಕೂಡಲೇ ಹಿಂದೆ ಮುಂದೆ ಯೋಚಿಸದ ಎಸಿಪಿ ರಾಮಚಂದ್ರ ಬಸ್‌ನ ಡ್ರೈವರ್ ಸೀಟ್ ಹತ್ತಿ ಬಸ್ ಅನ್ನು ಚಲಾಯಿಸಲು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು ಒಂದು ಕಿಲೋ ಮೀಟರ್ ವರೆಗೆ ಬಸ್ ಚಲಾಯಿಸಿದ ಎಸಿಪಿ ರಾಮಚಂದ್ರ ಅವರು ಪ್ರಯಾಣಿಕರನ್ನು ಸುರಕ್ಷಿತವಾಗಿ ಗುರಿ ತಲುಪಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ತಾವು ಬಸ್ ಚಲಾಯಿಸುವುದಕ್ಕೂ ಮುನ್ನ ಬಸ್ ಚಾಲಕನನ್ನು ಆಂಬುಲೆನ್ಸ್ ಸಹಾಯದಿಂದ ಬೌರಿಂಗ್ ಆಸ್ಪತ್ರೆಗೆ ಎಸಿಪಿ ರಾಮಚಂದ್ರ ಅವರು ತಲುಪಿಸಿದ್ದಾರೆ. ಇನ್ನು ಅಧಿಕಾರಿ ಬಸ್ ಚಲಾಯಿಸುವ ವೇಳೆಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು ಸಾರ್ವಜನಿಕ ವಲಯದಿಂದ ಭರಪೂರ ಮೆಚ್ಚುಗೆ ಹರಿದು ಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications