Mahesh Babu: ನಟ ಮಹೇಶ್ ಬಾಬು ಟ್ರಾಫಿಕ್ ನಿಯಮ ಉಲ್ಲಂಘನೆ: ನೊಂದ ಅಭಿಮಾನಿ ಶಾಕ್ ಕೊಟ್ಟ!
ಚಿತ್ರರಂಗದಲ್ಲಿ ಹೀರೋಗಳನ್ನು ಅಭಿಮಾನಿಗಳು ಎಷ್ಟು ಹೆಚ್ಚಾಗಿ ಪ್ರೀತಿಸುತ್ತಾರೆ ಎಂಬುದನ್ನು ಹೇಳಬೇಕಿಲ್ಲ. ತಮ್ಮ ನೆಚ್ಚಿನ ನಟರಿಗಾಗಿ ರಕ್ತದಾನ ಮಾಡುವುದು, ಹುಟ್ಟು ಹಬ್ಬ ಬಂದರೆ ಬಡವರಿಗೆ - ರೋಗಿಗಳಿಗೆ ಅನ್ನದಾನ ಮಾಡುವುದನ್ನು ನೋಡುತ್ತಲೇ ಇರುತ್ತೇವೆ. ತಮ್ಮ ಹೀರೋಗಳ ಹೆಸರು ಪ್ರತಿಷ್ಟಗಳಿಗೆ ಯಾವುದೇ ಧಕ್ಕೆ ಬಾರದಂತೆ ಎಚ್ಚರ ವಹಿಸುತ್ತಾರೆ. ಇತ್ತೀಚೆಗಷ್ಟೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್‌ಬಾಬು (Actor Mahesh Babu) ವಿಷಯದಲ್ಲಿ ಅಭಿಮಾನಿಯೊಬ್ಬ ಮಾಡಿದ ಕೆಲಸಕ್ಕೆ ನೆಟ್ಟಿಗರು ಹುಬ್ಬೇರಿಸುವಂತಾಗಿದೆ. ನೆಚ್ಚಿನ ನಟ ಎಂದರೆ ಇಷ್ಟು ಪ್ರೀತಿಯೇ ಎಂದು ಚರ್ಚಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಬನ್ನಿ ನೋಡೋಣ.
ಸಾಮಾನ್ಯವಾಗಿ ಬಿಗ್ ಸ್ಟಾರ್‌ಗಳು ಶೂಟಿಂಗ್‌ಗಾಗಿ ಇತರ ಸ್ಥಳಗಳಿಗೆ ಹೋಗುವಾಗ ಅಥವಾ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಅತಿ ವೇಗದಲ್ಲಿ ಕಾರು ಚಲಾಯಿಸುತ್ತಾರೆ. ಹಾಗೆಯೇ ನಟ ಮಹೇಶ್ ಬಾಬು ಅವರ ಕಾರು ಇತ್ತೀಚೆಗೆ ಪಿ.ವಿ. ನರಸಿಂಹ ರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿ ವೇಗದಲ್ಲಿ ಸಂಚರಿಸಿದೆ. ತೆಲಂಗಾಣ ಸಂಚಾರ ಇಲಾಖೆಯು, ನಿಯಮ ಉಲ್ಲಂಘಿಸಿ ಅತಿ ವೇಗ ಮತ್ತು ಅಪಾಯಕಾರಿ ಚಾಲನೆಗಾಗಿ ದಂಡ ವಿಧಿಸಿದೆ.

ಮಹೇಶ್ ಬಾಬು ಅವರ ಕಾರಿಗೆ ನವೆಂಬರ್ 4 ಮತ್ತು ನವೆಂಬರ್ 15 ರಂದು ಎರಡು ಬಾರಿ ದಂಡ ವಿಧಿಸಲಾಗಿದೆ. ಎಲ್ಲಾ ಸೆಲಿಬ್ರಿಟಿಗಳು ಇಂತಹ ಟ್ರಾಫಿಕ್ ದಂಡಗಳನ್ನು ಎದುರಿಸುವುದು ಸಾಮಾನ್ಯ ಸಂಗತಿ, ಆದರೆ ನಟ ಮಹೇಶ್ ಬಾಬು ವಿಷಯದಲ್ಲಿ ಆಗಿದ್ದೇ ಬೇರೆ. ಕಾರಿನ ಓವರ್ ಸ್ಪೀಡಿಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿದ್ದು, ಮನನೊಂದು ಅಭಿಮಾನಿ ಮಾಡಿದ ಕೆಲಸಕ್ಕೆ ಎಲ್ಲರು ಶಾಕ್ ಆಗಿದ್ದಾರೆ.
ನೆಚ್ಚಿನ ನಟನಿಗಾಗಿ ಫೈನ್ ಕಟ್ಟಿದ ಅಭಿಮಾನಿ
ಕಳೆದ ಶನಿವಾರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಟ ಮಹೇಶ್ ಬಾಬು ನಟನೆಯ 'ವಾರಣಾಸಿ' ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭಕ್ಕೆ ಬರುವಾಗ ರಸ್ತೆಯಲ್ಲಿ ಅಭಿಮಾನಿಯೊಬ್ಬ ಅವರ ಕಾರನ್ನು ಫೋಟೋ ತೆಗೆದು ಹಂಚಿಕೊಂಡಿದ್ದ. ಈ ಫೋಟೋದಲ್ಲಿ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಂಡುಬಂದಿದ್ದರಿಂದ ಕೆಲವರು ಕಾರಿನ ಮೇಲಿರುವ ದಂಡಗಳನ್ನು ಹೈಲೆಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಮಾಡಿದ್ದರು.

ಇತರ ನಟರ ಕೆಲವರು ಅಭಿಮಾನಿಗಳು ಮಹೇಶ್ ಅವರ ಕಾರಿಗೆ ದಂಡ ವಿಧಿಸಲಾಗಿದೆ ಎಂದು ಹೀಯಾಳಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫ್ಯಾನ್ ವಾರ್ ಶುರುವಾಗುತ್ತು. ಇದು ಮಹೇಶ್ ಅಭಿಮಾನಿಯೊಬ್ಬರನ್ನು ಕೆರಳಿಸಿದೆ, ಆ ದಂಡಗಳ ಮೊತ್ತವನ್ನು (2,070 ರೂ.) ಪಾವತಿಸಿ ಆ ಕುರಿತ ವಿಡಿಯೋವನ್ನು ಅಭಿಮಾನಿ ಹಂಚಿಕೊಂಡು ತಮ್ಮ ಅಭಿಮಾನವನ್ನು ತೋರಿಸಿದ್ದಾರೆ. ಇದಕ್ಕೆ ನಟ ಮಹೇಶ್ ಮತ್ತು ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮಹೇಶ್ ಅವರ ದುಬಾರಿ ಕಾರಿದು: ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ರೇಂಜ್ ರೋವರ್ ಕಾರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಬರೋಬ್ಬರಿ 5.4 ಕೋಟಿ ರೂ. (ಅವರು ಖರೀದಿಸಿದ್ದ ಸಮಯಕ್ಕೆ), ಇದು ಎಲ್ಲಾ ರೇಂಜ್ ರೋವರ್‌ಗಳಂತಲ್ಲದೇ ವಿಭಿನ್ನ ಗೋಲ್ಡ್ ಬಣ್ಣದೊಂದಿಗೆ ಬರುವ ವಿರಳ ಮಾದರಿಯಾಗಿದೆ. ಅವರು ಖರೀದಿಸಿದ್ದ ಸಮಯಕ್ಕೆ ಹೈದರಾಬಾದ್‌ನಲ್ಲಿ ಗೋಲ್ಡ್ ಬಣ್ಣದ ರೇಂಜ್ ರೋವರ್ ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದರು.

ರೇಂಜ್ ರೋವರ್ ಎಸ್‌ಯುವಿ ಫೋರ್ ಸ್ಪೋಕ್ ಲ್ಯಾಂಡ್ ರೋವರ್ ಸ್ಟೀರಿಂಗ್ ವ್ಹೀಲ್ ವಿನ್ಯಾಸ, ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಕಂಪನಿಯು ಹಲವಾರು ಅಪ್ಹೋಲ್ಸ್ಟರಿ ಮತ್ತು ಇಂಟೀರಿಯರ್ ಫಿನಿಶ್ ಗಳೊಂದಿಗೆ ಅನೇಕ ಒಳಾಂಗಣ ಆಯ್ಕೆಗಳನ್ನು ಸಹ ನೀಡುತ್ತದೆ. ಹಿಂಭಾಗದ ಸೆಂಟರ್ ಕ್ಲಬ್ ಟೇಬಲ್ ಜೊತೆಗೆ 13.1 ಇಂಚಿನ ಹಿಂಭಾಗದ ಇನ್ಫೋಟೈನ್ಮೆಂಟ್ ಆಯ್ಕೆಯೂ ಲಭ್ಯವಿದೆ.
ಇದು ರೇಂಜ್ ರೋವರ್ ಕಂಪನಿಯ ಸೀಮಿತ ಆವೃತ್ತಿಯ ಸೂಪರ್ ಎಕ್ಸ್ ಕ್ಲೂಸಿವ್ ಎಸ್‌ಯುವಿಯಾಗಿದ್ದು, ಮಹೇಶ್ ಬಾಬು ಅವರು ಖರೀದಿಸಿದ್ದ ಸಮಯಕ್ಕೆ (2023) ಭಾರತೀಯ ಮಾರುಕಟ್ಟೆಯಲ್ಲಿ ಆಹ್ವಾನದ ಮೂಲಕ ಮಾತ್ರ ನೀಡಲಾಗಿತ್ತು. ರೇಂಜ್ ರೋವರ್ ಹೊಂದಿರುವ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳ ಪಟ್ಟಿಯಲ್ಲಿ ಮಹೇಶ್ ಬಾಬು ಸೇರಿದ್ದಾರೆ.


Click it and Unblock the Notifications








