ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್‌ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
ತಮಿಳು ನಟ ರಾಘವ ಲಾರೆನ್ಸ್ (Raghava Lawrence), ಭಾಷೆಯ ಎಲ್ಲೆಯನ್ನು ಮೀರಿ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನೃತ್ಯ ಸಂಯೋಜಕರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಅವರು, ತೆಲುಗು ಸಿನಿಮಾ ಮೂಲಕ ನಟನ ಕ್ಷೇತ್ರಕ್ಕೂ ಕಾಲಿಟ್ಟರು. ಇಂದು ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ, ತಮ್ಮ ಸಾಮಾಜಿಕ ಸೇವೆ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ.
ನಟ ರಾಘವ ಲಾರೆನ್ಸ್ ಬುಧವಾರ ವಿಶೇಷ ಚೇತನ ಸಾಧಕರಿಗೆ 13 ಸ್ಕೂಟರ್‌ಗಳನ್ನು ಉಡೊಗೊರೆಯಾಗಿ ನೀಡುರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈವರೆಗೆ 8 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 1 ಲಕ್ಷಕ್ಕೂ ಹೆಚ್ಚಿನ ಲೈಕ್ ಪಡೆದುಕೊಂಡಿದ್ದು, ರಾಘವ ಲಾರೆನ್ಸ್ ಅವರ ಕಾರ್ಯವನ್ನು ನೆಟ್ಟಿಗರು ಮೆಚ್ಚಿ ಕೊಂಡಾಡುತ್ತಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವತಃ ಪೋಸ್ಟ್ ಮಾಡಿರುವ ನಟ ರಾಘವ ಲಾರೆನ್ಸ್, 'ನಮಸ್ಕಾರ ಸ್ನೇಹಿತರೇ ಮತ್ತು ಅಭಿಮಾನಿಗಳೇ.. ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ವಿಶೇಷ ಚೇತನ ಯುವಕರು ತುಂಬಾ ಧೈರ್ಯದಿಂದ 'ಮಲ್ಲಕಂಬ' ಪ್ರದರ್ಶಿದ್ದರು ಎಂದು ಹೇಳಿದ್ದೆ. ಅವರ ದೃಢಸಂಕಲ್ಪ, ಶ್ರಮವನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಗಿದೆ' ಎಂದಿದ್ದಾರೆ.
ಮುಂದುವರಿದು, 'ಅವರಿಗೆ ದ್ವಿಚಕ್ರ ವಾಹನ ಮತ್ತು ಮನೆಯನ್ನು ಕಟ್ಟಿಕೊಡುವುದಾಗಿ ಭರವಸೆ ನೀಡಿದ್ದೆ. ಅದರ ಭಾಗವಾಗಿ ಮೊದಲಿಗೆ 13 ಸ್ಕೂಟರ್ ಗಳನ್ನು ನೀಡುವ ನನ್ನ ಮಾತನ್ನು ಈಡೇರಿಸಿದ್ದಾನೆ. ಎಲ್ಲ ಸ್ಕೂಟರ್ ಗಳನ್ನು ತ್ರಿಚಕ್ರ ವಾಹನಗಳಾಗಿ ಪರಿವರ್ತಿಸಲಾಗುವುದು. ಅವರಿಗೆ ಭರವಸೆ ನೀಡಿದಂತೆ ಶೀಘ್ರವೇ ಮನೆಯನ್ನು ನಿರ್ಮಿಸಿ ಕೊಡುತ್ತೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಬೇಕು' ಎಂದು ಬರೆದುಕೊಂಡಿದ್ದಾರೆ.

ಕಳೆದ ತಿಂಗಳು ನಟ ರಾಘವ ಲಾರೆನ್ಸ್ ಅವರ ನೆರವಿನಿಂದ ಖ್ಯಾತ ಟಿವಿ ನಿರೂಪಕ ಕೆಪಿವೈ ಬಾಲಾ, ಮಹಿಳೆಯೊಬ್ಬರಿಗೆ ಆಟೋವನ್ನು ಉಡುಗೊರೆಯಾಗಿ ನೀಡಿದ್ದರು. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಬಾಲಾ, 'ಮುರುಗಮ್ಮಲ್ ಅವರು ಕುಟುಂಬದ ನಿರ್ವಹಣೆಗಾಗಿ ರೈಲಿನಲ್ಲಿ ಸಮೋಸವನ್ನು ಮಾರುತ್ತಿದ್ದಾರೆ. ಹೊಸ ಆಟೋ ಖರೀದಿಬೇಕೆಂಬುದು ಅವರ ಕನಸು. ಅದನ್ನು ನನ್ನ ರೋಲ್ ಮಾಡೆಲ್ ನಟ ರಾಘವ ಲಾರೆನ್ಸ್ ಸಹಾಯದಿಂದ ಈಡೇರಿಸಲಾಗಿದೆ' ಎಂದು ಬರೆದುಕೊಂಡಿದ್ದರು.
ವಿಶೇಷಚೇತನ ಸಾಧಕರಿಗೆ ನಟ ರಾಘವ ಲಾರೆನ್ಸ್ ಗಿಫ್ಟ್ ಮಾಡಿರುವ ಟಿವಿಎಸ್ ಸ್ಕೂಟಿ ಜೆಸ್ಟ್ (TVS Scooty Zest), ರೂ.72,069 ದಿಂದ ರೂ.72,471 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇದು 109.7 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 7.8 ಪಿಎಸ್ ಗರಿಷ್ಠ ಪವರ್ ಹಾಗೂ 8.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಟಿವಿಎಸ್ ಸ್ಕೂಟಿ ಜೆಸ್ಟ್ 48 ಕೆಎಂಪಿಎಲ್ ಮೈಲೇಜ್ ನೀಡಲಿದ್ದು, ಸುರಕ್ಷತೆಗಾಗಿ ಡ್ರಮ್ ಬೇಕ್ ಆಯ್ಕೆಯನ್ನು ಪಡೆದಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಒಳಗೊಂಡಿರುವ ಈ ಸ್ಕೂಟರ್, 103 ಕೆಜಿ ತೂಕವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications