ರಾಘವ ಲಾರೆನ್ಸ್ ಹಾದಿಯಲ್ಲಿ ಮತ್ತೊಬ್ಬ ಸ್ಟಾರ್ ನಟ.. ಬಡ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್: ವಿಡಿಯೋ
ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟ ಹಾಗೂ ನಿರ್ದೇಶಕರಾಗಿರುವ ರಾಘವ ಲಾರೆನ್ಸ್ (Raghava Lawrence) ಸಿನಿಮಾಗಳಿಗಿಂತ ಸಮಾಜ ಸೇವೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ತಮ್ಮ ಫೌಂಡೇಶನ್ ಮೂಲಕ ಬದುಕು ಕಟ್ಟಿಕೊಳ್ಳಲು ಹೊರಡುವ ಸಾವಿರಾರು ಶ್ರಮಿಕರನ್ನು ಗುರುತಿಸಿ, ಅವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆ, ವಸತಿ ಹಾಗೂ ಊಟವನ್ನು ಒದಗಿಸುತ್ತಿದ್ದು, ಅಂಗವಿಕಲರಿಗೆ ತ್ರಿಚಕ್ರ ವಾಹನ, ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ.
ಕಳೆದ ತಿಂಗಳು ನಟ ರಾಘವ ಲಾರೆನ್ಸ್ ಬಡ ರೈತರಿಗೆ 10 ಮಹೀಂದ್ರಾ ಟ್ರಾಕ್ಟರ್‌ಗಳನ್ನು ಉಡೊಗೊರೆಯಾಗಿ ಕೊಟ್ಟಿದ್ದರು. ಇವರ ಹಾದಿಯಲ್ಲಿಯೇ ಮತ್ತೊಬ್ಬ ಖ್ಯಾತ ನಟ ಮತ್ತು ನಿರ್ದೇಶಕ ಎಸ್.ಜೆ.ಸೂರ್ಯ (S.J.Suryah) ಕೂಡ ಅನ್ನದಾತನಿಗೆ ಟ್ರ್ಯಾಕ್ಟರ್ ನೀಡಲು ಮುಂದಾಗಿದ್ದು, ರಾಘವ ಲಾರೆನ್ಸ್ ಜೊತೆಗೂಡಿ ಕಾಂಚೀಪುರಂ ಜಿಲ್ಲೆಯ ರೈತರೊಬ್ಬರಿಗೆ ನೂತನ ಟ್ರ್ಯಾಕ್ಟರ್‌ನ್ನು ಹಸ್ತಾಂತರಿಸಿದ್ದಾರೆ.

ಈ ಬಗ್ಗೆ ತಮ್ಮ 'ಎಕ್ಸ್' ಖಾತೆಯಲ್ಲಿ ನಟ ರಾಘವ ಲಾರೆನ್ಸ್ ಪೋಸ್ಟ್ ಮಾಡಿದ್ದು, 'ನನ್ನ ಸ್ವಂತ ಹಣದಲ್ಲಿ ಮಾತ್ರಂ ಫೌಂಡೇಶನ್ ಮೂಲಕ 10 ಟ್ರ್ಯಾಕ್ಟರ್‌ಗಳನ್ನು ರೈತರಿಗೆ ಉಡುಗೊರೆಯಾಗಿ ಕೊಟ್ಟಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇದೀಗ ಎಸ್.ಜೆ.ಸೂರ್ಯ ತಾನು ದುಡಿದ ಹಣದಲ್ಲಿ ಮತ್ತೊಂದು ಟ್ರ್ಯಾಕ್ಟರ್ ನೀಡಿರುವುದು ಸಂತೋಷವನ್ನು ತಂದಿದೆ. ನಾವೆಲ್ಲ ಸೇರಿ 11ನೇ ಟ್ರ್ಯಾಕ್ಟರ್‌ನ್ನು ಕಾಂಚೀಪುರಂ ಜಿಲ್ಲೆಯ ರೈತನೊರ್ವನಿಗೆ ಹಸ್ತಾಂತರ ಮಾಡಿದ್ದೇವೆ. ಅವರ ಬೆಂಬಲಕ್ಕೆ ನನ್ನ ಧನ್ಯವಾದಗಳು' ಎಂದು ಹೇಳಿದ್ದಾರೆ.
ಏಪ್ರಿಲ್‌ನಲ್ಲಿ ನಟ ರಾಘವ ಲಾರೆನ್ಸ್ ವಿಶೇಷ ಚೇತನ ಸಾಧಕರಿಗೆ 13 ಸ್ಕೂಟರ್‌ಗಳನ್ನು ಉಡೊಗೊರೆಯಾಗಿ ನೀಡಿದ್ದರು. ಈ ಕುರಿತಂತೆ ಇನ್‌ಸ್ಟಾಗ್ರಾಮ್‌ನಲ್ಲಿಯೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. 'ವಿಶೇಷ ಚೇತನ ಯುವಕರು ತುಂಬಾ ಧೈರ್ಯದಿಂದ ಮಲ್ಲಕಂಬ ಪ್ರದರ್ಶಿಸಿದ್ದ ದೃಢಸಂಕಲ್ಪವನ್ನು ನೋಡಿ, ನನಗೆ ಹೆಮ್ಮೆ ಮತ್ತು ಸಂತೋಷವಾಗಿದೆ. ಅವರಿಗೆ ದ್ವಿಚಕ್ರ ವಾಹನ ಹಾಗೂ ಮನೆಯನ್ನು ಕಟ್ಟಿಕೊಡುವುದಾಗಿ ಭರವಸೆ ನೀಡಿದ್ದೆ. ಅದರ ಭಾಗವಾಗಿ 13 ಸ್ಕೂಟರ್‌ಗಳನ್ನು ನೀಡುತ್ತಿದ್ದೇನೆ' ಎಂದು ತಿಳಿಸಿದ್ದರು.

ಅದಕ್ಕೂ ಮೊದಲು ನಟ ರಾಘವ ಲಾರೆನ್ಸ್ ಅವರ ನೆರವಿನಿಂದ ಖ್ಯಾತ ಟಿವಿ ನಿರೂಪಕ ಕೆಪಿವೈ ಬಾಲಾ, ಕಷ್ಟದಲ್ಲಿದ್ದ ಮಹಿಳೆಯೊಬ್ಬರಿಗೆ ಆಟೋವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಆ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಬಾಲಾ, 'ಮುರುಗಮ್ಮಲ್ ಅವರು ಕುಟುಂಬದ ನಿರ್ವಹಣೆಗಾಗಿ ರೈಲಿನಲ್ಲಿ ಸಮೋಸವನ್ನು ಮಾರುತ್ತಿದ್ದಾರೆ. ಹೊಸ ಆಟೋ ಖರೀದಿಬೇಕೆಂಬುದು ಅವರ ಕನಸು. ಅದನ್ನು ನನ್ನ ರೋಲ್ ಮಾಡೆಲ್ ನಟ ರಾಘವ ಲಾರೆನ್ಸ್ ಸಹಾಯದಿಂದ ಈಡೇರಿಸಲಾಗಿದೆ' ಎಂದು ಬರೆದುಕೊಂಡಿದ್ದರು.
ನಟ ರಾಘವ ಲಾರೆನ್ಸ್ ಒಳ್ಳೆಯ ಅಣ್ಣ ಕೂಡ ಆಗಿದ್ದಾರೆ. ಸಹೋದರ ಎಲ್ವಿನ್ ಕೂಡ ತಮಿಳು ಚಿತ್ರರಂಗದಲ್ಲಿ ದುಡಿಯಲು ಇಚ್ಚಿಸಿದ್ದು, 'ಬುಲೆಟ್' ಸಿನಿಮಾ ಮೂಲಕ ಆಕ್ಟಿಂಗ್ ಕೆರಿಯರ್ ಪ್ರಾರಂಭಿಸಿದ್ದಾರೆ. ಈ ಚಿತ್ರಕ್ಕೆ ಇನಾಸಿ ಪಾಂಡಿಯನ್ ನಿರ್ದೇಶನವಿದೆ. ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ರಾಘವ ಲಾರೆನ್ಸ್ ಮಾನಿಟರ್ ರೂಮ್‌ನಲ್ಲಿ ಎಲ್ವಿನ್ ಅಭಿನಯದ ಒಂದಷ್ಟು ದೃಶ್ಯಗಳನ್ನು ನೋಡಿದ್ದು, ಆತನ ನಟನೆಯನ್ನು ಮೆಚ್ಚಿ, ಎಂಜಿ ಗ್ಲೋಸ್ಟರ್ ಕಾರನ್ನು ಈಚೆಗೆ ಗಿಫ್ಟ್ ನೀಡಿದ್ದರು.
ಇನ್ನು, ನಟ ಎಸ್.ಜೆ.ಸೂರ್ಯ ರೈತರೊಬ್ಬರಿಗೆ ಉಡುಗೊರೆಯಾಗಿ ಕೊಟ್ಟಿರುವ ಮಹೀಂದ್ರಾ 575 ಡಿಐ (Mahindra 575 DI) ಟ್ರಾಕ್ಟರ್ ವಿಶೇಷತೆಗಳ ಹೇಳುವುದಾದರೆ, ಇದು ರೂ.6.80 ಲಕ್ಷದಿಂದ ರೂ.7.10 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 45 ಹೆಚ್‌ಪಿ - 2730 ಸಿಸಿ ಡೀಸೆಲ್ ಎಂಜಿನ್ ಹೊಂದಿದ್ದು, 8ಎಸ್+ 2ಆರ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ ಡ್ರೈ ಡಿಸ್ಕ್ ಬ್ರೇಕ್‌ನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications