ಲಕ್ಕಿ ನಂಬರ್ 1206ಕ್ಕೆ ಲಕ್ ಇಲ್ಲ.. ಸಾವಿನಲ್ಲೂ ಒಂದಾದ ಲಕ್ಕಿ ನಂಬರ್! ವಿಜಯ್ ರೂಪಾನಿ ಬಾಳಲ್ಲಿ ದುರಂತ!
ಅಹಮದಾಬಾದ್‌ನಿಂದ ಲಂಡನ್‌ಗೆ ಗುರುವಾರ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನ ಹಾರಾಟ ಶುರು ಮಾಡಿದ ಕೆಲವೇ ಸೆಕೆಂಡುಗಳಲ್ಲಿ ಬಿಜೆ ಮೆಡಿಕಲ್ ಕಾಲೇಜಿನ ಮೆಸ್ ಕಟ್ಟಡಕ್ಕೆ ಡಿಕ್ಕಿಯಾಗಿ ಪತನಗೊಂಡಿದೆ. ಈ ಘನಘೋರ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಸೇರಿದಂತೆ 241 ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಿಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸದ್ಯ, ಈ ಅವಗಢದಲ್ಲಿ ಸಾವನ್ನಪ್ಪಿರುವ ವಿಜಯ್ ರೂಪಾನಿ ಅವರ 'ಲಕ್ಕಿ ನಂಬರ್' ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣವು ಇದೆ. ವಿಜಯ್ ರೂಪಾನಿ '1206'ನ್ನು ತಮ್ಮ ಅದೃಷ್ಟದ ಸಂಖ್ಯೆ ಎಂದು ಭಾವಿಸಿದ್ದರು. ಅವರ ಬಳಿಯಿದ್ದ ಸ್ಕೂಟರ್ ಹಾಗೂ ಕಾರು ಸೇರಿದಂತೆ ಎಲ್ಲ ವಾಹನಗಳು ಇದೇ ಸಂಖ್ಯೆಯನ್ನು ಹೊಂದಿದ್ದವು ಎನ್ನಲಾಗಿದೆ.

ವಿಚಿತ್ರವೆಂಬಂತೆ ವಿಜಯ್ ರೂಪಾನಿ, ಜೂನ್ 12 (12-06) ರಂದು ನಿಧಾನರಾಗಿದ್ದಾರೆ. ಇದರಲ್ಲೂ ಅವರ ಅದೃಷ್ಟ ಸಂಖ್ಯೆ ತಳುಕು ಹಾಕಿಕೊಂಡಿದೆ. ಜೊತೆಗೆ ಮಧ್ಯಾಹ್ನ 12:10ಕ್ಕೆ ಅವರು ವಿಮಾನವನ್ನು ಹತ್ತಿದ್ದು, 12 ಸಂಖ್ಯೆಯ ಆಸನದಲ್ಲಿ ಕುಳಿತುಕೊಂಡಿದ್ದಾರೆ. ಕಾಕತಾಳೀಯವೆಂಬಂತೆ ಜೀವನವಿಡಿ ಫಾಲೋ ಮಾಡಿದ್ದ ಅದೇ '12' ನಂಬರ್ ಸಾವಿನಲ್ಲೂ ಬಂದು ಸೇರಿದೆ ಎಂಬುದು ಬೇಸರದ ಸಂಗತಿಯಾಗಿದೆ.
ವಿಜಯ್ ರೂಪಾನಿ ಪತ್ನಿ ಹಾಗೂ ಪುತ್ರಿಯನ್ನು ಭೇಟಿಯಾಗಲು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದರು. ಇದೇ ಜೂನ್ 19 ರಂದು ಪಂಜಾಬ್ ರಾಜ್ಯದ ಲುಧಿಯಾನ ಪಶ್ಚಿಮ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಜೂನ್ 5 ರಿಂದ 12 ರವರೆಗೆ ತಮ್ಮ ಲಂಡನ್ ಪ್ರವಾಸವನ್ನು ಮುಂದೂಡಿದ್ದರು.
ಮಾಜಿ ಸಿಎಂ ವಿಜಯ್ ರೂಪಾನಿ ನಿಧನಕ್ಕೆ ಹಲವು ನಾಯಕರು ಭಾರವಾದ ಮನಸ್ಸಿನಿಂದ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹಾಗೂ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರು, 'ನಮ್ಮ ನಾಯಕ ವಿಜಯ್ ರೂಪಾನಿ ವಿಮಾನ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದು ಬಿಜೆಪಿಗೆ ದೊಡ್ಡ ನಷ್ಟ' ಎಂದು ಹೇಳಿದ್ದಾರೆ.
ವಿಜಯ್ ರೂಪಾನಿ ಹಿನ್ನೆಲೆಯೇನು:
ಮಾಜಿ ಸಿಎಂ ವಿಜಯ್ ರೂಪಾನಿ ಆಗಸ್ಟ್ 2, 1956 ರಲ್ಲಿ ಬರ್ಮಾದಲ್ಲಿ (ಮ್ಯಾನ್ಮಾರ್) ಜನಿಸಿದ್ದರು. 1960 ರಲ್ಲಿ ಅವರ ಕುಟುಂಬವು ಗುಜರಾತ್‌ನ ರಾಜ್‌ಕೋಟ್‌ಗೆ ಸ್ಥಳಾಂತರಗೊಂಡಿತು. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಪೂರೈಸಿದ ರೂಪಾನಿ, ಧರ್ಮೇಂದ್ರಸಿಂಹಜಿ ಕಾಲೇಜಿನಲ್ಲಿ 'ಬಿಎ' ಪದವಿ ವ್ಯಾಸಂಗ ಮಾಡಿದ್ದರು. ಸೌರಾಷ್ಟ್ರ ವಿವಿಯಿಂದ ಎಲ್‌ಎಲ್‌ಬಿ ಪದವಿ ಪಡೆದ್ದರು.
ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಕಾರ್ಯಕರ್ತರಾಗಿದ್ದ ವಿಜಯ್ ರೂಪಾನಿ ಅವರು, 1987 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ಸದ್ಯಸ್ಯರಾಗಿ ಆಯ್ಕೆಯಾದ್ದರು. 1996 ರಿಂದ 1997 ರವರಿಗೆ ಮೇಯರ್ ಕೂಡ ಆಗಿದ್ದರು. 2006 ರಿಂದ 2012 ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. 2016 ರಿಂದ 2021 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಒಟ್ಟಾರೆಯಾಗಿ ಏರ್ ಇಂಡಿಯಾ ವಿಮಾನವು ಪತನಗೊಂಡಿರುವುದು ಯಾರು ಊಹೆ ಮಾಡಿರದಷ್ಟು ಘೋರ ದುರಂತವಾಗಿದೆ. ಈ ಘಟನೆಯಲ್ಲಿ ವಿಜಯ್ ರೂಪಾನಿ ಸೇರಿದಂತೆ 241 ಜನರು ಮೃತಪಟ್ಟಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದ್ದು, ಹಲವರು ತಮ್ಮ ಆತ್ಮೀಯರನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ. ಈ ಭೀಕರ ಅವಘಡಕ್ಕೆ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಬಯಲಾಗಬೇಕಾಗಿದೆ.


Click it and Unblock the Notifications








