Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್‌ಗೆ ಹೋಗಬಹುದು, ಕಡಿಮೆ ಖರ್ಚು!
ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ ಮತ್ತು ನವದೆಹಲಿಯಲ್ಲಿ ಸಂಚಾರ ದಟ್ಟಣೆ ಎಂಬುದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಅದಕ್ಕೆ ಪರಿಹಾರವಾಗಿ ಇಂಡಿಗೋ (IndiGo) ಮಾತೃಸಂಸ್ಥೆ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಮತ್ತು ಅಮೆರಿಕದ ಆರ್ಚರ್ ಏವಿಯೇಷನ್ ಜಂಟಿಯಾಗಿ 2026ರಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ (Air Taxi) ಸೇವೆಯನ್ನು ಪ್ರಾರಂಭಿಸಲು ಯೋಜಿಸಿವೆ.
ಈ ಏರ್ ಟ್ಯಾಕ್ಸಿಗಳು ಪುಟ್ಟ ಹೆಲಿಕಾಪ್ಟರ್‌ಗಳಿಗೆ ಹೋಲಿಕೆಯಾಗಲಿದ್ದು, ಪೈಲಟ್ ಸೇರಿ 5 ಮಂದಿ ಪ್ರಯಾಣಿಸಬಹುದು. ಇವು ಕಡಿಮೆ ಶಬ್ಡ ಮಾಡಲಿದ್ದು, ಗರಿಷ್ಠ ಸುರಕ್ಷತೆಯನ್ನು ಒದಗಿಸಲಿವೆ ಎನ್ನಲಾಗಿದೆ. ಆರ್ಚರ್ ಏವಿಯೇಷನ್ ಪ್ರಕಾರ, ಸದ್ಯ ದೆಹಲಿ ಹಾಗೂ ಗುರುಗ್ರಾಮ್ ನಡುವೆ ಕಾರಿನಲ್ಲಿ 7 ಕಿಲೋಮೀಟರ್ ಅಂತರವನ್ನು ಕ್ರಮಿಸಲು ರೂ.1,500 ವೆಚ್ಚವಾಗಲಿದ್ದು, ಪ್ರಯಾಣದ ಅವಧಿಯು 90 ನಿಮಿಷಗಳಾಗಿದೆ.

ಅದೇ ಏರ್ ಟ್ಯಾಕ್ಸಿಯು ಈ ದೂರವನ್ನು ಕೇವಲ 7 ನಿಮಿಷಗಳಲ್ಲಿ ಮುಟ್ಟಲಿದ್ದು, ಪ್ರಯಾಣಿಕರು ರೂ.2,000 ರಿಂದ ರೂ.3,000 ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಕಾರ್ಯಾಚರಣೆಯನ್ನು ನಡೆಸಲು ಆರ್ಚರ್ ಏವಿಯೇಷನ್ ಒಪ್ಪಂದದ ಭಾಗವಾಗಿ 200 ಏರ್ ಟ್ಯಾಕ್ಸಿಗಳನ್ನು ಇಂಟರ್‌ಗ್ಲೋಬ್ ಎಂಟರ್ಪ್ರೈಸಸ್ಗೆ ಪೂರೈಸಲಿದ್ದು, ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಏರ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ.
ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ಚರ್ ಏವಿಯೇಷನ್ ಸಿಇಒ ಆಡಮ್ ಗೋಲ್ಡ್‌ಸ್ಟೈನ್, 'ಏರ್ ಟ್ಯಾಕ್ಸಿಗೆ ಮಾನ್ಯತೆ ನೀಡುವ ಸಂಬಂಧ ಯುಎಸ್ ರೆಗ್ಯುಲೇಟರ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ)ನೊಂದಿಗೆ ಮಾತುಕತೆಯನ್ನು ನಡೆಸಲಾಗುತ್ತಿದೆ. ಬಹುತೇಕ ಮುಂದಿನ ವರ್ಷ ಪರವಾನಿಗೆ ದೊರೆಯಬಹುದು' ಎಂದು ಹೇಳಿದ್ದಾರೆ. ಆ ನಂತರ, ಏರ್ ಟ್ಯಾಕ್ಸಿ ಮಾನ್ಯತೆಗಾಗಿ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಕ್ಕೂ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ಆರ್ಚರ್ ಏವಿಯೇಷನ್‌ನಲ್ಲಿ ಉನ್ನತ ಅಧಿಕಾರಿಯಾಗಿರುವ ನಿಖಿಲ್ ಗೋಯೆಲ್ ಅವರು, ಈ ಏರ್ ಟ್ಯಾಕ್ಸಿ 6 ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, 30 ರಿಂದ 40 ನಿಮಿಷಗಳಲ್ಲಿ ಭರ್ತಿ ಚಾರ್ಜ್ ಆಗುತ್ತದೆ ಎಂದು ಹೇಳಿದ್ದಾರೆ. ಏರ್ ಟ್ಯಾಕ್ಸಿಯನ್ನು ಜಂಟಿಯಾಗಿ ಶುರು ಮಾಡುವ ಸಂಬಂಧ ಆರ್ಚರ್ ಏವಿಯೇಷನ್ ಮತ್ತು ಇಂಟರ್ ಗ್ಲೋಬ್ ಎಂಟರ್‌ಪ್ರೈಸಸ್ ಮಧ್ಯೆ ಅಂತಿಮ ಹಂತದ ಚರ್ಚೆಗಳನ್ನು ನಡೆಸುತ್ತಿವೆ ಎಂಬ ವಿವರಗಳು ಲಭ್ಯವಾಗಿದೆ.
ಮಾರುತಿ ಸುಜುಕಿ, ತನ್ನ ಮಾತೃಸಂಸ್ಥೆ 'ಸುಜುಕಿ' ಜೊತೆಗೂಡಿ ಎಲೆಕ್ಟ್ರಿಕ್ ಏರ್ ಕಾಪ್ಟರ್ (ಹಾರುವ ಕಾರು)ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಕಳೆದ ಫೆಬ್ರವರಿ ತಿಂಗಳಲ್ಲಿ ವರದಿಯಾಗಿತ್ತು. ಸುಜುಕಿ ತಯಾರಿಸಲಿರುವ ಈ ಏರ್ ಕಾಪ್ಟರ್‌ಗಳು, ಡ್ರೋನ್‌ಗಳಿಗಿಂತ ದೊಡ್ಡದಾಗಿರಲಿವೆ. ಆದರೆ, ಹೆಲಿಕಾಪ್ಟರ್‌ಗಳಿಗೆ ಹೋಲಿಸಿದರೆ ಚಿಕ್ಕದಾಗಿರಲಿವೆ. ಪೈಲಟ್ ಸೇರಿ ಮೂವರು ಪ್ರಯಾಣಿಸಲು ಸಾಧ್ಯವಾಗುವಂತೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿತ್ತು.
'ಸುಜುಕಿ' ಪ್ರಾರಂಭದಲ್ಲಿ ಈ ಏರ್ ಕಾಪ್ಟರ್‌ಗಳನ್ನು ಜಪಾನ್ ಹಾಗೂ ಅಮೆರಿಕದಲ್ಲಿ ಪರಿಚಯಿಸಲು ಯೋಜಿಸಿದ್ದು, ಆ ನಂತರದ ವರ್ಷಗಳಲ್ಲಿ ಭಾರತಕ್ಕೆ ತರುವ ಗುರಿಯನ್ನು ಹಾಕಿಕೊಂಡಿದೆ ಎಂಬ ವಿವರಗಳು ದೊರೆತ್ತಿದ್ದವು. ವಿಮಾನಯಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಹೊಸ ಆವಿಷ್ಕಾರಗಳನ್ನು ಗಮನಿಸಿದರೆ, ಮುಂಬರುವ ವರ್ಷಗಳಲ್ಲಿ ಸಾರ್ವಜನಿಕ ಸಾರಿಗೆ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನಿರೀಕ್ಷಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








