ಸೀಟ್ ಬೆಲ್ಟ್ ಧರಿಸದೆ ರೂ.10.5 ಕೋಟಿ ಫೆರಾರಿ ಕಾರು ಓಡಿಸಿದ ಆಕಾಶ್ ಅಂಬಾನಿ: ಶ್ರೀಮಂತರು ಏಕೆ..? ನೆಟ್ಟಿಗರ ಪ್ರಶ್ನೆ
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani), ಫೋರ್ಬ್ಸ್ ಪ್ರಕಾರ ಬರೋಬ್ಬರಿ ರೂ.9,67,188 ಕೋಟಿ ಮೌಲ್ಯದ ಸಂಪತ್ತನ್ನು ಹೊಂದುವ ಮೂಲಕ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ಪತ್ನಿ ನೀತಾ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ ವಿಲಾಸಿ ಜೀವನಶೈಲಿಯಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅಂಬಾನಿ ಕುಟುಂಬವು ರೂ.15,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮುಂಬೈನ 'ಆಂಟಿಲಿಯಾ' ಹೆಸರಿನ ನಿವಾಸದಲ್ಲಿ ವಾಸಿಸುತ್ತಿದೆ. ಇಲ್ಲಿನ ಗ್ಯಾರೇಜ್‌ನಲ್ಲಿ ದುಬಾರಿ ಬೆಲೆಯ ಹತ್ತಾರು ಐಷಾರಾಮಿ ಕಾರುಗಳಿದ್ದು, ಸರಿ ಸುಮಾರು ರೂ.100 ಕೋಟಿಯಷ್ಟು ಬೆಲೆಬಾಳುತ್ತವೆ ಎನ್ನಲಾಗಿದೆ.
ಇತ್ತೀಚೆಗೆ ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ಬೆಂಗಾವಲು ವಾಹನಗಳ ನಡುವೆ, ರೂ.10.5 ಕೋಟಿಯ 'ಫೆರಾರಿ' ಎಸ್‌ಯುವಿಯನ್ನು ಸೀಟ್ ಬೆಲ್ಟ್ ಧರಿಸದೆ ಚಲಾಯಿಸಿದ್ದಾರೆ. ಈ ವಿಡಿಯೋವನ್ನು 'ಮಾಡರ್ನ್ ಕಾರ್‌ಸ್ಪಾಟರ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ನೆಟ್ಟಿಗರು ಈ ಕಾರಿನ ವಿನ್ಯಾಸವನ್ನು ಮೆಚ್ಚಿದರೆ, ಮತ್ತೆ ಹಲವರು ಆಕಾಶ್ ಅಂಬಾನಿ ಸಂಚಾರಿ ನಿಯಮವನ್ನು ಪಾಲಿಸದಿರುವ ಬಗ್ಗೆ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, 'ಶ್ರೀಮಂತರು ಏಕೆ ಸೀಟ್ ಬೆಲ್ಟ್ ಧರಿಸುವುದಿಲ್ಲ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, 'ಸುರಕ್ಷಿತ ಚಾಲನೆಗಾಗಿ ದಯವಿಟ್ಟು ನಿಮ್ಮ ಸೀಟ್ ಬೆಲ್ಟ್‌ನ್ನು ಧರಿಸಿ' ಎಂದಿದ್ದಾರೆ. ಇನ್ನೋರ್ವ ಬಳಕೆದಾರರೊಬ್ಬರು, 'ಏಕಾಂಗಿ ಹಾಗೂ ಸ್ವತಂತ್ರವಾಗಿ ಓಡಿಸಲು ಸಾಧ್ಯವಾಗದಿರುವಾಗ ಇಂತಹ ಕಾರುಗಳನ್ನು ಹೊಂದುವುದರಲ್ಲಿ ಏನು ಪ್ರಯೋಜನ? ಎಂದು ಕೇಳಿದ್ದಾರೆ.
ದೇಶದಲ್ಲಿ ಕಟ್ಟುನಿಟ್ಟಿನ ಸಂಚಾರಿ ನಿಯಮಗಳು ಜಾರಿಯಲ್ಲಿವೆ. ಅದನ್ನು ಉಲ್ಲಂಘನೆ ಮಾಡಿ, ವಾಹನ ಚಲಾಯಿಸುವ ಸವಾರರಿಗೆ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತದೆ. ಭದ್ರತಾ ವಾಹನಗಳ ನಡುವೆ ಆಕಾಶ್ ಅಂಬಾನಿ ಸೀಟ್ ಬೆಲ್ಟ್ ಹಾಕದೆ ಕಾರು ಓಡಿಸಿರುವುದರಿಂದ ಅವರಿಗೂ ಪೊಲೀಸರು ದಂಡ ಹಾಕುವ ಸಾಧ್ಯತೆಯಿದೆ. ಮುಂದೆ ಈ ಘಟನೆಗೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಆಕಾಶ್ ಅಂಬಾನಿ ಚಲಾಯಿಸಿರುವ ಫೆರಾರಿ ಪುರೊಸಾಂಗ್ಯೂ (Ferrari Purosangue) ಅಪರೂಪದ ಕಾರಾಗಿದ್ದು, ದೇಶದಲ್ಲಿ ಬೆರಳೆಣಿಕೆಯಷ್ಟು ಶ್ರೀಮಂತರು ಮಾತ್ರ ಹೊಂದಿದ್ದಾರೆ. ಈ ಎಸ್‌ಯುವಿಯು 6.5-ಲೀಟರ್, ನ್ಯಾಚುರಲ್ ಆಸ್ಪಿರೇಟೆಡ್ ವಿ12 ಪೆಟ್ರೋಲ್ ಎಂಜಿನ್ ಪಡೆದಿದ್ದು, 725 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 716 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಡುಯಲ್-ಕ್ಲಚ್ ಆಟೋಮೆಟಿಕ್ (ಡಿಸಿಟಿ) ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಈ ಕಾರು 310 ಕೆಎಂಪಿಹೆಚ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಎಸಿಗಾಗಿ ಟಚ್‌ಸ್ಕ್ರೀನ್ ಪಾಪ್-ಅಪ್ ರೋಟರಿ ಡಯಲ್, ವೈರ್‌ಲೆಸ್ ಫೋನ್ ಚಾರ್ಜರ್, ರೇರ್ (ಹಿಂಭಾಗ) ವೆಂಟಿಲೇಟೆಡ್ ಸೀಟ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸದ್ಯದ ಮಾಹಿತಿ ಪ್ರಕಾರ, ಮುಖೇಶ್ ಅಂಬಾನಿ ಕುಟುಂಬಸ್ಥರ ಬಳಿ 168ಕ್ಕೂ ಅಧಿಕ ಐಷಾರಾಮಿ ಕಾರುಗಳಿವೆ. ನೀತಾ ಅಂಬಾನಿ ರೂ.10.48 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಮಾಲೀಕರಾಗಿದ್ದಾರೆ. ಇನ್ನುಳಿದಂತೆ ಅಂಬಾನಿ ಕುಟುಂಬ ಸದಸ್ಯರು ಫೆರಾರಿ ರೋಮಾ, ಫೆರಾರಿ ಎಸ್ಎಫ್ 90 ಸ್ಟ್ರಾಡೇಲ್ ಸ್ಪೋರ್ಟ್ಸ್, ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications