ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್‌ಗೆ ಮಹೀಂದ್ರ ಥಾರ್ ಗಿಫ್ಟ್!
2016 ರಿಯೊ ಒಲಿಂಪಿಕ್ಸ್ ಜಾಗತಿಕ ಕ್ರೀಡಾಕೂಟದಲ್ಲಿ ದೇಶಕ್ಕೆ ಚೊಚ್ಚಲ ಪದಕ ಗೆದ್ದು ಕೊಟ್ಟಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕರಾಗಿರುವ ಆನಂದ್ ಮಹೀಂದ್ರ, ಉಡುಗೊರೆಯೊಂದನ್ನು ಘೋಷಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿರುವ ಸಾಕ್ಷಿ ಮಲಿಕ್ ಅವರಿಗೆ ವಿಶೇಷವಾಗಿ ಮಾರ್ಪಾಡುಗೊಳಿಸಿದ ಮಹೀಂದ್ರ ಥಾರ್ ಕ್ರೀಡಾ ಬಳಕೆಯ ವಾಹನವನ್ನು ಉಡುಗೊರೆಯಾಗಿ ನೀಡುವುದಾಗಿ ಆನಂದ್ ಮಹೀಂದ್ರ ಘೋಷಿಸಿದ್ದಾರೆ.

ಈ ಸಂಬಂಧ ತಮ್ಮ ಟ್ವಿಟರ್ ಅಧಿಕೃತ ಪುಟದಲ್ಲಿ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ಸಾಕ್ಷಿಗೆ ಆಗಾಧ ಬೆಂಬಲದ ಜೊತೆಗೆ ಥಾರ್ ಫಾರ್ ಸಾಕ್ಷಿ ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡುತ್ತಾ ತೀರ್ಪು ಘೋಷಿಸಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ನ ಚೀಫ್ ಮಾರ್ಕೆಟಿಂಗ್ ಆಫಿಸರ್ ವಿವೇಕ್ ನಾಯರ್ ಅವರನ್ನು ಟ್ಯಾಗ್ ಮಾಡಿರುವ ಆನಂದ್ ಮಹೀಂದ್ರ, ಸಾಕ್ಷಿ ಬಣ್ಣದ ಆಯ್ಕೆ ಹಾಗೂ ಕಸ್ಟಮೈಸ್ಡ್ ಬಯಕೆಗಳನ್ನು ಪರೀಶೀಲಿಸುವಂತೆ ಸಲಹೆ ಮಾಡಿದ್ದಾರೆ.

ಬಳಿಕ ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಶ್ ನಾಯರ್, ತಮ್ಮ ಟ್ವೀಟ್ ನಲ್ಲಿ ಸಾಕ್ಷಿ ಮಲಿಕ್ ಅವರನ್ನು ಅಭಿನಂದಿಸಿದ್ದು, ಕಠಿಣ ಹಾಗೂ ಒರಟಾದ ಮಹೀಂದ್ರ ಥಾರ್ ನಿಮಗಾಗಿ ಕಾಯುತ್ತಿದೆ ಎಂದಿದ್ದಾರೆ.

ದೇಶದ ಕ್ರೀಡಾಪಟುಗಳನ್ನು ಬಹಳ ಹಿಂದಿನಿಂದಲೇ ಪ್ರೋತ್ಸಾಹಿಸುತ್ತಲೇ ಬಂದಿರುವ ಮಹೀಂದ್ರ ಸಂಸ್ಥೆಯು 2016 ರಿಯೊ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದಿರುವ ಸಾಕ್ಷಿ ಮಲಿಕ್ ಗೆ ಥಾರ್ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಇತರೆ ವಾಹನ ಸಂಸ್ಥೆಗಳಿಗೆ ಮಾದರಿಯಾಗಿದೆ.

23ರ ಹರೆಯದ ಸಾಕ್ಷಿ ರಿಯೊ ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆಯಾಗಿದ್ದಾರೆ. ತನ್ಮೂಲಕ ರಿಯೋದಲ್ಲಿ ಪದಕದ ಬರ ನೀಗಿಸಿದ್ದರು.

ಅಂದ ಹಾಗೆ 2.5 ಲೀಟರ್ ಡಿಐ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಥಾರ್, 182.5 ಎನ್ ಎಂ ತಿರುಗುಬಲದಲ್ಲಿ 63 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆದಿದೆ.

ಸ್ಕಾರ್ಪಿಯೊದಲ್ಲಿರುವುದಕ್ಕೆ ಸಮಾನವಾದ ಮಗದೊಂದು 2.5 ಸಿಆರ್ ಡಿಇ ಎಂಜಿನ್ 247 ಎನ್ ಎಂ ತಿರುಗುಬಲದಲ್ಲಿ 105 ಅಶ್ವಶಕ್ತಿಯನ್ನು ನೀಡುತ್ತದೆ. ಇದು ಸಹ ಐದು ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

2016 ಮಹೀಂದ್ರ ಥಾರ್ ಆಧುನಿಕ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದ್ದು, ಡ್ಯುಯಲ್ ಟೋನ್ ಬಣ್ಣಗಳು, ಸಿಲ್ವರ್ ಪಟ್ಟಿಯ ಸ್ಟೀರಿಂಗ್ ವೀಲ್, ಟ್ರಿಪಲ್ ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸಿಲ್ವರ್ ಎಸಿ ವೆಂಟ್ಸ್, ಗೇರ್ ಲಿವರ್, ಕಪ್ ಹೋಲ್ಡರ್, ಪರಿಷ್ಕೃತ ಬಂಪರ್, ಗ್ರಿಲ್, ಬೊನೆಟ್, ವೀಲ್ ಆರ್ಚ್, ಎಕ್ಸಾಸ್ಟ್ ಪೈಪ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications








