ಅವಮಾನಿಸಿದ್ದಕ್ಕೆ ಸಿನಿಮೀಯ ರೀತಿಯಲ್ಲಿ ಕಾರಿಗೆ ಡಿಕ್ಕಿಹೊಡೆದು 3 ಕಿಮೀ ಎಳೆದೊಯ್ದ ಕಿರಾತಕ ಟ್ರಕ್ ಡ್ರೈವರ್
ಭಾರತದಲ್ಲಿ ಆಗಾಗ ರಸ್ತೆ ಜಗಳಗಳಾಗುವುದು ಸಾಮಾನ್ಯವಾದ ವಿಚಾರ. ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಕೆಲವರು ಸುಮ್ಮ ಸುಮ್ಮನೆ ತಕರಾರುಗನ್ನು ಎತ್ತುತ್ತಿರುತ್ತಾರೆ. ಈ ಕುರಿತಾದ ಹಲವಾರು ವಿಡಿಯೋಗಳನ್ನು ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಷ್ಟು ಕಾಣ ಸಿಗುತ್ತದೆ. ಆದರೆ ಇಲ್ಲೊಂದು ರಸ್ತೆ ಜಗಳದ ವಿಡಿಯೋ ವೈರಲ್ ಸಾಕಷ್ಟು ಸದ್ದು ಮಾಡುತ್ತಿದೆ.
ಇಲ್ಲೊಂದು ಟ್ರಕ್ ಡ್ರೈವರ್, ಕಾರು ಮಾಲೀಕನೊಬ್ಬ ತನ್ನನ್ನು ಅವಮಾನಿಸಿದ ಎಂಬ ಕಾರಣಕ್ಕೆ ಆತನ ಕಾರನ್ನು ಗುದ್ದಿ, ಸುಮಾರು ಮೂರು ಕಿಲೋಮೀಟರ್‌ಗಳಷ್ಟು ದೂರದವರೆಗೆ ಅಮಾನುಷವಾಗಿ ಎಳೆದುಕೊಂಡು ಹೋದ ಕ್ರೂರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಮೀರತ್‌ನ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು ಘಟನೆಯ ವಿಡಿಯೋ ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಘಟನೆಗೆ ಸಂಭಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಘಟನೆಯ ವಿಡಿಯೋವನ್ನು ಮಿಹಿರ್ ಝಾ ಎಂಬ ವ್ಯಕ್ತಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಂತರದಲ್ಲಿ ಹಲವಾರು ಚಾನಲ್‌ಗಳು ಈ ಸುದ್ದಿಯನ್ನು ಪ್ರಸಾರ ಮಾಡಿವೆ. ವರದಿಗಳ ಪ್ರಕಾರ, ಮಲ್ಟಿ ಆಕ್ಸಿಲ್ ಟ್ರಕ್ ಡ್ರೈವರ್ ಕಾರಿಗೆ ಗುದ್ದಿದ್ದಾನೆ. ನಂತರದಲ್ಲಿ ಕಾರು ಮಾಲಿಕ ಕಾರನ್ನು ನಿಲ್ಲಿಸಿ ಟ್ರಕ್ ಡ್ರೈವರ್ ಜೊತೆ ಯಾಕೆ ಹೀಗೆ ಮಾಡಿದ್ದೀಯ ಎಂದು ವಾದಕ್ಕೆ ಇಳಿದಿದ್ದಾನೆ ಮತ್ತು ರಸ್ತೆಯಲ್ಲಿ ಜಾಗರೂಕತೆಯಿಂದ ಟ್ರಕ್ ಓಡಿಸುವಂತೆ ಬುದ್ದಿ ಹೇಳಿದ್ದಾನೆ.
ಈ ವಾದ ವಿವಾದಗಳಲ್ಲಿ ಟ್ರಕ್ ಡ್ರೈವರ್ ಎಷ್ಟರ ಮಟ್ಟಿಗೆ ಕೋಪಗೊಂಡಿದ್ದ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲವಾದರೂ, ಆತ ಕಾರನ್ನು ಉದ್ದೇಶಪೂರ್ವಕವಾಗಿಯೇ ಗುದ್ದಿ, ದೂಡಿಕೊಂಡು ಹೋಗಿದ್ದಾನೆ ಎಂಬುದು ನಮಗೆ ವಿಡಿಯೋ ನೋಡಿದಾಗಲೇ ತಿಳಿಯುತ್ತದೆ. ಇನ್ನು ಇವರಿಬ್ಬರ ನಡುವಿನ ಸಂಭಾಷಣೆಯ ದೃಶ್ಯಗಳು ಲಭ್ಯವಾಗಿಲ್ಲ. ಜಗಳದ ನಂತರ ಟ್ರಕ್ ಡ್ರೈವರ್ ಕಾರನ್ನು ಎರಡನೇಯ ಬಾರಿ ಗುದ್ದಿ ನಿಲ್ಲಿಸದೇ ದೂಡಿಕೊಂಡು ಹೋಗಿದ್ದಾನೆ. ವರದಿಗಳ ಪ್ರಕಾರ ಕಾರಿನಲ್ಲಿ ಸುಮಾರು ನಾಲ್ಕರಿಂದ ಐದು ಮಂದಿ ಇದ್ದರು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ನಾಲ್ಕರಿಂದ ಐದು ಮಂದಿ ಇದ್ದಂತೆಯೇ ಟ್ರಕ್ ಡ್ರೈವರ್ ಈ ಕೃತ್ಯವನ್ನು ಎಸಗಿದ್ದಾನೆ. ಕಾರಿನ ಡ್ರೈವರ್ ಬದಿಯು ಟ್ರಕ್‌ನ ಮುಂಭಾಗಕ್ಕೆ ಬಂದಿದ್ದು, ಟ್ರಕ್ ಡ್ರೈವರ್ ಅದೇ ರೀತಿಯಲ್ಲಿ ದೂಡಿಕೊಂಡು ಹೋಗಿದ್ದಾನೆ. ಇನ್ನು ವಿಡಿಯೋದಲ್ಲಿ ಕಾರಿನ ಟೈರ್ ಜಾರುವಾಗ ಜೋರಾಗಿ ಶಬ್ದವಾಗುತ್ತಿರುವುದನ್ನು ಗಮನಿಸಬಹುದಾಗಿದ್ದು, ಕಾರನ್ನು ಶೆವರ್ಲೇ ಕಂಪನಿಯ ಬೀಟ್ ಹ್ಯಾಚ್‌ಬಾಕ್ ಎಂದು ಗುರುತಿಸಬಹುದು. ಟ್ರಕ್ ದೂಡಿಕೊಂಡು ಹೋಗುತ್ತಿದ್ದ ತೀವ್ರತೆಗೆ ಕಾರಿನ ಕೆಲವೊಂದು ಟೈರ್‌ಗಳು ಸ್ಪೋಟಗೊಂಡಿದೆ.
ಜೊತೆಗೆ ಟೈರ್‌ನ ರಿಮ್‌ಗಳು ಸಹ ಹಾನಿಗೆ ಒಳಗಾಗಿದೆ. ಕೆಲವು ಸಿನಿಮೀಯ ದೃಶ್ಯಗಳಲ್ಲಿ ಕಾಣುವಂತೆ ಕಾರನ್ನು ಹೆದ್ದಾರಿಯಲ್ಲಿ ದುಡಿಕೊಂಡು ಹೋಗುತ್ತಿರುವುದನ್ನು ಹಲವು ಜನರು ಆಶ್ಚರ್ಯದಿಂದ ವೀಕ್ಷಿಸುತ್ತಿದ್ದಾರೆ. ಇನ್ನು ಕಾರಿನ ಡ್ರೈವರ್ ಭಾಗವು ಸಂಪೂರ್ಣವಾಗಿ ಹಾನಿಗೆ ಒಳಗಾಗಿದ್ದು, ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಟ್ರಕ್ ಡ್ರೈವರ್ ಈ ಕೃತ್ಯವನ್ನು ನಿರ್ಜನ ಪ್ರದೇಶದಲ್ಲಿ ಮಾಡಿಲ್ಲ. ಬದಲಾಗಿ ಜನನಿಬಿಡ ರಸ್ತೆಯಲ್ಲಿ ಈ ಕೃತ್ಯವನ್ನು ಮಾಡಿರುವುದು ಇತರರು ಸಹ ಅದನ್ನು ಗಮನಿಸುತ್ತಿರುವುದು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಭಾರತದಲ್ಲಿ ರೋಡ್ ರೇಜ್ ಅಥವಾ ರಸ್ತೆ ಮಧ್ಯೆ ನಡೆಯುವ ಜಗಳ ನಿಜಕ್ಕೂ ತುಂಬಾ ಅಪಾಯಕಾರಿಯಾದುದ್ದು. ಜಗಳವಾಡುತ್ತಿರುವಾಗ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಇನ್ನು ನೀವು ಸಂಚರಿಸುವಾಗಲೂ ಯಾರಾದರೂ ನಿಮ್ಮೊಂದಿಗೆ ಜಗಳಕ್ಕೆ ಬಂದರೆ ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದೆ ಸಾಗುವುದು ಒಂದು ವೇಳೆ ಒಳ್ಳೆಯ ನಿರ್ಧಾರವಾಗಬಹುದು. ಬದಲಿಗೆ ಎರಡೂ ಕಡೆಯವರು ಜಗಳಕ್ಕೆ ನಿಂತರೆ ಕೊನೆಗೆ ಅದು ಕೊಲೆಯಲ್ಲಿ ಕೊನೆಗೊಂಡರೂ ಆಶ್ಚರ್ಯವಿಲ್ಲ.


Click it and Unblock the Notifications