Ayrton Senna: 'ಐರ್ಟನ್ ಸೆನ್ನಾ' ಅವರ ರೆಪ್ಲಿಕಾ ಹೆಲ್ಮೆಟ್ ಹರಾಜಿಗೆ ಸಜ್ಜು
ಮೋಟಾರ್ ಸ್ಪೋರ್ಟ್ ಎಂದಾಕ್ಷಣ ಉತ್ಸಾಹಿಗಳಲ್ಲಿ ಮೊದಲು ನೆನಪಾಗುವುದು 'ಐರ್ಟನ್ ಸೆನ್ನಾ' ಈ ಲೆಜೆಂಡರಿ ರೇಸರ್‌ಗೆ ಗೌರವ ಸಲ್ಲಿಸುವ ಸಲುವಾಗಿ, ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ ಐರ್ಟನ್ ಸೆನ್ನಾ ಬಳಸಿದ್ದ ಥೇಟ್ ಅದೇ ಮಾದರಿಯ (ರೆಪ್ಲಿಕಾ) ಹೆಲ್ಮೆಟ್ ಅನ್ನು ಹರಾಜು ಮಾಡಲಿದ್ದಾರೆ. ಈ ಬಗ್ಗೆ OneArabia ವರದಿ ಮಾಡಿದೆ.
ಯಾರೀ ಐರ್ಟನ್ ಸೆನ್ನಾ?: 'ಐರ್ಟನ್ ಸೆನ್ನಾ-ಡ ಸಿಲ್ವಾ' ಅವರು ಬ್ರೆಜಿಲಿಯನ್ ರೇಸರ್ ಆಗಿದ್ದರು, 1988, 1990 ಮತ್ತು 1991 ರಲ್ಲಿ ಮೆಕ್‌ಲಾರೆನ್ ಚಾಲನೆ ಮಾಡಿ ಫಾರ್ಮುಲಾ ಒನ್ ವರ್ಲ್ಡ್ ಡ್ರೈವರ್ಸ್ ಚಾಂಪಿಯನ್‌ಶಿಪ್ ಗೆದ್ದಿದ್ದರು. ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಬ್ರೆಜಿಲ್‌ನ ಮೂರು ಫಾರ್ಮುಲಾ ಒನ್ ರೇಸರ್‌ಗಳಲ್ಲಿ ಸೆನ್ನಾ ಅಗ್ರ ಸ್ಥಾನದಲ್ಲಿದ್ದಾರೆ. 65 ಪೋಲ್ ಸ್ಥಾನಗಳನ್ನು ಸ್ಥಾಪಿಸಿ, 41 ಗ್ರ್ಯಾಂಡ್ ಪ್ರಿಕ್ಸ್ ಗೆದ್ದು ದಾಖಲೆ ನಿರ್ಮಿಸಿದ್ದರು.
ಇವರ ಮೋಟಾರ್ ಸ್ಪೋರ್ಟ್ ಪರಂಪರೆಗೆ ಗೌರವ ಸಲ್ಲಿಸುವ ಸಲುವಾಗಿ ಈಗ ದುಬೈನಲ್ಲಿ ನಡೆಯಲಿರುವ ಮುಂಬರುವ ಆರ್.ಎಂ ಸೋಥೆಬಿ ಹರಾಜಿನಲ್ಲಿ ಐರ್ಟನ್ ಸೆನ್ನಾ ಅವರ ವಿಶಿಷ್ಟ ಶೋಯಿ ಫಾರ್ಮುಲಾ 1 ಹೆಲ್ಮೆಟ್‌ನ ರೆಪ್ಲಿಕಾವು ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. $ 7,000 ರಿಂದ $ 10,000 ನಿರೀಕ್ಷಿತ ಬೆಲೆ ಶ್ರೇಣಿಯೊಂದಿಗೆ ಪ್ರಸ್ತುತಪಡಿಸಲಾಗುವುದು. ಈ ಹರಾಜು ಪ್ರಕ್ರಿಯೆಯು ಶನಿವಾರ, 9 ಮಾರ್ಚ್ 2024 ರಂದು ನಿಗದಿಯಾಗಿದೆ.
ಐರ್ಟನ್ ಸೆನ್ನಾ ಅವರ ಹೆಲ್ಮೆಟ್ ಇತರ ಹೆಲ್ಮೆಟ್‌ಗಳಿಗಿಂತ ವಿಶಿಷ್ಟವಾಗಿರುತ್ತದೆ. ಈ ಹೆಲ್ಮೆಟ್ ರಕ್ಷಣೆ ನೀಡುವ ಸಾಧನವಾಗಿ ಮಾತ್ರವಲ್ಲದೇ ಅಸಾಧಾರಣ ಉತ್ಸಾಹ, ಆಕರ್ಷಕ ಡಿಸೈನ್ ಹಾಗೂ ಅವರ ಸಾಟಿಯಿಲ್ಲ ಸಾಧನೆಗಳನ್ನು ನೆನಪಿಸುತ್ತದೆ. ಇದರ ಡಿಸೈನ್ ಕೂಡ ಲೆಜೆಂಡರಿ ಅಂಶಗಳನ್ನು ಒಳಗೊಂಡಿದೆ. ಅದರಲ್ಲಿನ ಹಸಿರು-ನೀಲಿ ಪಟ್ಟಿಗಳೊಂದಿಗೆ ಹಳದಿ ಬಣ್ಣವು ಬ್ರೆಜಿಲ್ ರಾಷ್ಟ್ರೀಯ ಬಣ್ಣವನ್ನು ಸಂಕೇತಿಸುತ್ತದೆ. ಈ ವಿನ್ಯಾಸವು ಎದ್ದು ಕಾಣಲು ಸೆನ್ನಾ ಅವರ ಉದ್ದೇಶಪೂರ್ವಕ ಆಯ್ಕೆಯಾಗಿತ್ತು.
ಅರೈ, ಬೆಲ್, ರಿಯೋಸ್ ಮತ್ತು ಅಂತಿಮವಾಗಿ ಶೋಯಿಯಂತಹ ವಿವಿಧ ಹೆಲ್ಮೆಟ್ ಬ್ರಾಂಡ್‌ಗಳ ನಡುವೆ ಅವರ 15 ವರ್ಷಗಳ ವೃತ್ತಿಜೀವನದಲ್ಲಿ ಸೆನ್ನಾ ಅವರ ಹೆಲ್ಮೆಟ್ ಸಣ್ಣ ಮಾರ್ಪಾಡುಗಳನ್ನು ಕಂಡಿದೆ. ಈ ಬದಲಾವಣೆಗಳ ಹೊರತಾಗಿಯೂ, ವಿನ್ಯಾಸದ ಪ್ರಮುಖ ಸಾರವು ಹಾಗೇ ಉಳಿದಿರುವುದು ವಿಶೇಷ. ಇದು ಸೆನ್ನಾ ಅವರ ಸಮರ್ಪಣೆ ಮತ್ತು ಫಾರ್ಮುಲಾ 1 ಗೆ ಅವರು ತಂದ ರೋಮಾಂಚಕ ಮತ್ತು ಆಕ್ರಮಣಕಾರಿ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಈ ಪ್ರತಿಕೃತಿಯ (ರೆಪ್ಲಿಕಾ) ಹೆಲ್ಮೆಟ್‌ನ ಹರಾಜು, ಅಭಿಮಾನಿಗಳು ಮತ್ತು ಸಂಗ್ರಾಹಕರಿಗೆ ದೊಡ್ಡ ವರವಾಗಿದೆ. ಇದು ಸೆನ್ನಾ ಅವರ ಅಸಾಧಾರಣ ವೃತ್ತಿಜೀವನಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ಅವರ ಜ್ಞಾಪಕಾರ್ಥ ಹೆಲ್ಮೆಟ್ ಅನ್ನು ಪಡೆಯುವ ಅದ್ಬುತ ಅವಕಾಶವಾಗಿದೆ. ಹರಾಜಿನ ದಿನ ಫಾರ್ಮುಲಾ 1 ಪರಂಪರೆಯ ಈ ಅಪ್ರತಿಮ ರೆಪ್ಲಿಕಾ ಸ್ಪರ್ಧಾತ್ಮಕ ಬೆಲೆಗೆ ಹರಾಜಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಅನಿರೀಕ್ಷಿತ ಸಾವುಗಳು: 1 ಮೇ 1994 ರಂದು ಇಟಲಿಯ ಇಮೋಲಾ ಸರ್ಕ್ಯೂಟ್‌ನಲ್ಲಿ 1994 ರ ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಮುನ್ನಡೆಸುತ್ತಿರುವಾಗ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದು ಲೆಜೆಂಡರಿ 'ಐರ್ಟನ್ ಸೆನ್ನಾ-ಡ ಸಿಲ್ವಾ' ಸಾವನ್ನಪ್ಪಿದರು. ಅದರ ಹಿಂದಿನ ದಿನ, ಆಸ್ಟ್ರಿಯಾದ ಚಾಲಕ ರೋಲ್ಯಾಂಡ್ ರಾಟ್ಜೆನ್‌ಬರ್ಗರ್ ರೇಸ್‌ಗೆ ಅರ್ಹತೆ ಪಡೆಯುವ ಸಮಯದಲ್ಲಿ ಅವರ ಕೂಡ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications
