ಬೆಂಗಳೂರಲ್ಲಿ 5 ಗಂಟೆಗೆ ಸಂಪಾದಿಸಿದ್ದು 40 ರೂ, ಜೀವನ ಮಾಡೋದು ಹೇಗೆ ಸಾರ್: ಆಟೋ ಚಾಲಕನ ಅಳಲು, ನಿಮಗೇನನ್ನಿಸುತ್ತಿದೆ?
ಬೆಂಗಳೂರಿನ ಆಟೋ ಚಾಲಕರೊಬ್ಬರ ಮನದಾಳದ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದುಡಿಮೆಗೆ ಬಂದ 5 ಗಂಟೆಗಳಲ್ಲಿ ಕೇವಲ 40 ರೂಗಳನ್ನು ಮಾತ್ರ ದುಡಿದಿದ್ದು, ಹೀಗಾದರೆ ನಾವೆಲ್ಲಾ ಏನು ಮಾಡಬೇಕು ಎಂಬ ಆ ಚಾಲಕನ ಪ್ರಶ್ನೆ ಪ್ರತಿಯೊಬ್ಬರನ್ನೂ ಆಲೋಚನೆಗೆ ದೂಡುವಂತೆ ಮಾಡಿದೆ.
ಹೌದು, ಕ್ಯಾಮೆರಾ ಮುಂದೆ ಆಟೋ ರಿಕ್ಷಾ ಚಾಲಕನೊಬ್ಬ (Auto Driver) ತನ್ನ ಮನದಾಳದ ನೋವನ್ನು ತೊಡಿಕೊಂಡಿರುವ ವಿಡಿಯೋ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಕಾಣುವಂತೆ ಆತ ಬೆಳಗ್ಗೆ ಯಿಂದ ಕೆಲಸ ಆರಂಭಿಸಿದ್ದೇನೆ, ಆದರೆ ಬಾಡಿಗೆಯೇ ಸಿಗುತ್ತಿಲ್ಲ. ಕಳೆದ 4 ಗಂಟೆಗಳಿಂದ ನಾನು ಕೆಲಸ ಆರಂಭಿಸಿದ್ದು, ಯಾರೂ ಸಹ ಬಾಡಿಗೆಗೆ ಬರುತ್ತಿಲ್ಲ. ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಕೆಲವು ದಿನಗಳಲ್ಲಿ ಒಳ್ಳೆಯ ಬಾಡಿಗೆಗಳು ಸಿಗುತ್ತಿದ್ದು, ಇವತ್ತು ಹೀಗಾಗಿದೆ. ಹಾಗಾಗಿ ಬೇಜಾರ್ ಮಾಡಿಕೊಂಡು ಮನೆಗೆ ಹೋಗುತ್ತಿದ್ದೇನೆ ಎಂದು ತನ್ನ ಜೋಬಲ್ಲಿದ್ದ ಕೆಲವು ನೋಟುಗಳನ್ನು ತೆಗೆದು ತೋರಿಸಿದ್ದಾನೆ. ಇನ್ನು ತನ್ನ ಮಾತುಗಳನ್ನು ಮುಂದುವರೆಸಿದ ಆತ ತುಂಬಾ ಕಷ್ಟ ಆಗುತ್ತಿದ್ದು, ಈ ಕೆಲಸ ಬಿಟ್ಟು ಬೇರೇನಾದರೂ ಕೆಲಸ ಮಾಡಬೇಕು ಸರ್, ಅಳು ಬರುತ್ತಿದೆ ಎಂದು ಹೇಳುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಭಾರೀ ಕಾಮೆಂಟ್‌ಗಳು ಈ ವಿಡಿಯೋ ಬಗ್ಗೆ ಹರಿದು ಬರುತ್ತಿದೆ. ಕಾಮೆಂಟ್ ಬಗ್ಗೆ ಮಾತನಾಡುವುದಕ್ಕೂ ಮುನ್ನ, ಈ ವಿಡಿಯೋ ದಿಂದ ಆಟೋ ಚಾಲಕರು ಬೆಂಗಳೂರಿನಲ್ಲಿ ತಾವು ಎದುರಿಸುತ್ತಿರುವ ಕಷ್ಟವನ್ನು ನೋಡುಗರಿಗೆ ಮನದಟ್ಟು ಮಾಡುವಂತಿದೆ.
ತಾವು ದಿನಂಪ್ರತಿ ಅನಿವಾರ್ಯವಾಗಿ ಮಾಡುತ್ತಿದ್ದ ವೃತ್ತಿಯನ್ನೇ ಕೈ ಬಿಡುವಂತೆ ಯೋಚಿಸುವಷ್ಟು ಆಟೋ ಚಾಲಕರ ಪರಿಸ್ಥಿತಿ ಹದಗೆಡುತ್ತಿದೆ ಎಂಬುದನ್ನು ನಾವಿಲ್ಲಿ ತಿಳಿಯಬೇಕಾಗಿದೆ. ಪ್ರತಿ ದಿನ ಬೆಳಗ್ಗೆಯಿಂದ ಸಾಯಂಕಾಲದವರೆಗೆ ತಮ್ಮ ಬಳಿ ಬರುವ ಪ್ರಯಾಣಿಕರನ್ನು ಅವರು ಹೇಳುವ ಜಾಗಕ್ಕೆ ಬೆಂಗಳೂರಿನ ಟ್ರಾಫಿಕ್ ಮಧ್ಯೆ ಸುರಕ್ಷಿತವಾಗಿ ತಲುಪಿಸುವ ಆಟೋ ಚಾಲಕರ ಪರಿಸ್ಥಿತಿ ಹೀಗಾಗಿರುವುದು ನಿಜಕ್ಕೂ ಚಿಂತಾಜನಕ.
ಇನ್ನು ವೈರಲ್ ಆದ ವಿಡಿಯೋ ಗೆ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಕಾಮೆಂಟ್‌ಗಳು ಹರಿದು ಬಂದಿದೆ. ಅದರಲ್ಲಿ ಕೆಲವರು ಆಟೋ ಚಾಲಕರ ಪರಿಸ್ಥಿತಿಗೆ ಮರುಗಿದರೆ ಇನ್ನು ಕೆಲವರು ಈತನ ಮಾತುಗಳನ್ನು ನಂಬಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಆಟೋ ಚಾಲಕರ ಮೇಲೆ ತಮಗಿರುವ ಆಕ್ರೋಶವನ್ನೂ ಹೊರ ಹಾಕಿದ್ದಾರೆ.
ತುಂಬಾ ಅರ್ಜೆಂಟ್‌ನಲ್ಲಿ ಆಟೋ ಬಳಿ ಹೋಗಿ ಬಾಡಿಗೆ ಕೇಳಿದರೆ ಕೆಲವೊಮ್ಮೆ ಸಣ್ಣ ದೂರದ ಪ್ರಯಾಣಕ್ಕೂ ನಿಜ ಬಾಡಿಗೆಗಿಂತ ಮೂರು ಪಟ್ಟು ಅಧಿಕ ಬಾಡಿಗೆಯನ್ನು ಕೇಳುತ್ತಾರೆ. ಮಳೆ ಬಂದರಂತೂ ಆಟೋದವರು ಮಾನವೀಯತೆಯೇ ಇಲ್ಲದೆ ತಮಗನಿಸಿದ್ದ ಬಾಡಿಗೆಯನ್ನು ಕೇಳಿ ಜನರ ಹಗಲು ದರೋಡೆಯನ್ನು ಮಾಡುತ್ತಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications