Bangalore Mysore Expressway: ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ದಿಢೀರ್ ಏರಿಕೆ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ (Bangalore Mysore Expressway) ಒಂದಿಲ್ಲೊಂದು ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತದೆ. ಇದೀಗ, ದಶಪಥ ಹೆದ್ದಾರಿಯಲ್ಲಿ ಎರಡನೇ ಟೋಲ್‌ನಲ್ಲಿ ಶುಲ್ಕ ಸಂಗ್ರಹ ಆರಂಭವಾಗಿದ್ದು, ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ (KSRTC) ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ.
ಶಿರಂಗಪಟ್ಟಣದ ಗಣಂಗೂರು ಟೋಲ್‌ನಲ್ಲಿ ತಿಂಗಳಾರಂಭದಿಂದ (ಜುಲೈ 1) ಶುಲ್ಕ ಸಂಗ್ರಹ ಪ್ರಾರಂಭಿಸಲಾಗಿದ್ದು, ಬಸ್‌ಗಳ ಏಕಮುಖ ಸಂಚಾರಕ್ಕೆ ರೂ.525 ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಬೀಳುತ್ತಿರುವ ಹೆಚ್ಚುವರಿ ಹೊರೆಯನ್ನು ಸರಿದೂಗಿಸಲು ಕೆಎಸ್‌ಆರ್‌ಟಿಸಿ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ಮಂಗಳವಾರದಿಂದ ಜಾರಿಯಾಗಿದೆ. ಬಸ್‌ಗಳಿಗೆ ಅನುಗುಣವಾಗಿ ರೂ.15 ರಿಂದ ರೂ.30ರವರೆಗೆ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ.

ಬೆಂಗಳೂರಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರವನ್ನು ನೋಡುವುದಾದರೆ, ಈ ಹಿಂದೆ, ಸಾಮಾನ್ಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇದ್ದ ರೂ.170 ಟಿಕೆಟ್ ದರ ರೂ.15 ಹೆಚ್ಚಳವಾಗುವ ಮೂಲಕ ರೂ.185ಕ್ಕೆ ತಲುಪಿದೆ. ರಾಜಹಂಸ ಬಸ್‌ಗಳಲ್ಲಿ ಈ ಹಿಂದೆ, ರೂ.230 ಇದ್ದ ಪ್ರಯಾಣ ದರ ರೂ.250 ಆಗಿದ್ದು, ರೂ.20 ಹೆಚ್ಚಳವಾಗಿದೆ.
ವೋಲ್ವೋ ಹಾಗೂ ಎಲೆಕ್ಟ್ರಿಕ್ ಬಸ್‌ಗಳಲ್ಲಿ ರೂ.330 ಇದ್ದ ಟಿಕೆಟ್ ದರ ರೂ.30 ಅಧಿಕಗೊಂಡು ರೂ.360ಕ್ಕೆ ತಲುಪಿದೆ. ಪ್ರವಾಸೋದ್ಯಮ, ಕೈಗಾರಿಕೆ ಒಳಗೊಂಡಂತೆ ನಾನಾ ಕ್ಷೇತ್ರಗಳ ಬೆಳವಣಿಗೆಗೆ 118 ಕಿಮೀ ಉದ್ದದ ಈ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಮಾ.12 ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದರು.

ಈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಆದಾಗಿನಿಂದಲೂ ಟೋಲ್ ಹಾಗೂ ಅಪಘಾತಗಳ ವಿಚಾರಕ್ಕೆ ಸಾಕಷ್ಟು ಸುದ್ದಿ ಮಾಡುತ್ತಿದೆ. ವರದಿ ಪ್ರಕಾರ, ದಶಪಥ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ, ಜರಗಿದ ಅಪಘಾತಗಳಲ್ಲಿ 100 ಜನರು ಜೀವ ಬಿಟ್ಟಿದ್ದು, 350 ಮಂದಿ ಗಾಯಗೊಂಡಿದ್ದಾರೆ. ಅಪಘಾತ ನಡೆಯಲು ಪ್ರಮುಖ ಕಾರಣ, ಅತಿವೇಗದ ಚಾಲನೆ ಎಂದು ವಿಶ್ಲೇಷಿಸಲಾಗಿದೆ.
ಕಳೆದ ವಾರ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್‌ಪ್ರೆಸ್‌ವೇಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಂಬಂಧ ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಅದರಂತೆ ರಾಮನಗರ ಪೊಲೀಸರು, ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈ 4ರಿಂದ 3 ಮೊಬೈಲ್ ಸ್ಪೀಡ್ ರಾಡಾರ್‌ಗಳನ್ನು ನಿಯೋಜಿಸಿದ್ದರು.
100 kmph ವೇಗ ಮಿತಿ ದಾಟಿದವರ ವಿರುದ್ಧ 44 ಕೇಸ್ ದಾಖಲಿಸಿದ್ದರು. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲೂ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ವೇಗದ ಮಿತಿ ದಾಟುವವರಿಗೆ ಪೊಲೀಸರು ದಂಡ ವಿಧಿಸುವುದನ್ನು ಶುರು ಮಾಡಿದ್ದಾರೆ. ಗಂಟೆ 100 ಕಿಲೋಮೀಟರ್ ಗೂ ಹೆಚ್ಚಿನ ಸ್ವೀಡ್ ನಲ್ಲಿ ವಾಹನಗಳನ್ನು ಓಡಿಸಿದರೆ ರೂ.1000 ದಂಡ ವಿಧಿಸುತ್ತಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆಯನ್ನು ಇಳಿಸಲು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಮೆಚ್ಚಲೇಬೇಕು. ಆದರೆ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಟೋಲ್ ಶುಲ್ಕ ಹೆಚ್ಚಳವಾದ ಹಿನ್ನೆಲೆ, ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿರುವುದು ಅವರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಿದಂತೆ ಆಗಿದೆ.


Click it and Unblock the Notifications