Bangalore Mysore Expressway: ವಾಹನ ಸವಾರರಿಗೆ ಬಿಗ್ ಶಾಕ್, ಎಕ್ಸ್‌ಪ್ರೆಸ್ ವೇ ಪ್ರಯಾಣ ಇನ್ಮುಂದೆ ದುಬಾರಿ
ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ (Bangalore Mysore Expressway) ಉದ್ಘಾಟನೆಗೂ ಮೊದಲಿನಿಂದಲೇ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಲ್ಲಿತ್ತು. ಇದೀಗ, ಟೋಲ್ ಶುಲ್ಕ ಹೆಚ್ಚಿಸುವ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ಯಾವ ವಾಹನಕ್ಕೆ ಎಷ್ಟು ಶುಲ್ಕ ಹೆಚ್ಚಳವಾಗಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೇಕಡ 22% ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಜೂನ್ 1 ರಿಂದಲೇ ವಾಹನ ಸವಾರರಿಂದ ಹೆಚ್ಚುವರಿ ಹಣವನ್ನು ಪಡೆಯಲಾಗುತ್ತಿದೆ. ಆದರೆ, ಫಾಸ್ಟ್ ಟ್ಯಾಗ್ ವ್ಯವಸ್ಥೆಯಿರುವುದರಿಂದ ಬಹುತೇಕ ವಾಹನ ಮಾಲೀಕರಿಗೆ ಇದು ಗಮನಕ್ಕೆ ಬಂದಿರಲಿಲ್ಲ. ಅಧಿಕ ಹಣ ಕಡಿತವಾಗುತ್ತಿರುವ ಬಗ್ಗೆ ತಡವಾಗಿ ತಿಳಿದಿದೆ. ಸದ್ಯ, ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಟೋಲ್ ಶುಲ್ಕ ಏರಿಕೆ ಬಳಿಕ, ಯಾವ ವಾಹನಕ್ಕೆ (ಏಕಮುಖ ಸಂಚಾರ) ಎಷ್ಟು ಹೆಚ್ಚಳವಾಗಿದೆ ಎಂದು ನೋಡುವುದಾದರೆ, ಕಾರು, ವ್ಯಾನ್ ಹಾಗೂ ಜೀಪ್‌ಗಳಿಗೆ ಈ ಹಿಂದೆ, ರೂ.135 ಶುಲ್ಕವಿತ್ತು. ಈಗ ರೂ.30 ಏರಿಕೆಯಾಗಿ ರೂ.165 ಆಗಿದೆ. ಲಘು ವಾಹನಗಳು, ಮಿನಿ ಬಸ್‌ಗಳಿಗೆ ಈ ಮೊದಲು ರೂ.220 ಟೋಲ್ ಶುಲ್ಕವಿತ್ತು. ರೂ.50 ಹೆಚ್ಚಳದ ನಂತರ ರೂ.270ಕ್ಕೆ ಏರಿಕೆಯಾಗಿದೆ.
ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳಿಗೆ ಈ ಹಿಂದೆ ರೂ.460 ಟೋಲ್ ಶುಲ್ಕ ವಿಧಿಸಲಾಗುತ್ತಿತ್ತು. ಈಗ ರೂ.105 ಏರಿಕೆ ಬಳಿಕ, ರೂ.565ಕ್ಕೆ ಹೆಚ್ಚಳವಾಗಿದೆ. ಮೂರು ಆಕ್ಸೆಲ್ ಕಮರ್ಷಿಯಲ್ ವಾಹನಗಳಿಗೆ ರೂ.500 ಇತ್ತು. ಅದನ್ನು ರೂ.115 ಏರಿಕೆ ಮಾಡಲಾಗಿದ್ದು, ರೂ.615 ಆಗಿದೆ. ಭಾರಿ ವಾಹನಗಳಿಗೆ ಈ ಹಿಂದೆ ರೂ.720 ಟೋಲ್ ಶುಲ್ಕವಿತ್ತು. ಸದ್ಯ ರೂ.165 ಏರಿಕೆಯಾಗಿ ರೂ.885ಕ್ಕೆ ತಲುಪಿದೆ.
ಏಳು ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳಿಗೆ ರೂ.880 ಟೋಲ್ ಶುಲ್ಕವಿತ್ತು. ಇದೀಗ, ರೂ.200 ಹೆಚ್ಚಳ ಮಾಡಲಾಗಿದ್ದು, ರೂ.1,080 ಆಗಿದೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕ ಹೆಚ್ಚಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ, ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಲಾಗಿತ್ತು. ಆದರೆ, ವಾಹನ ಸವಾರರು ಹಾಗೂ ಸಾರ್ವಜನಿಕರ ಆಕ್ರೋಶದ ಹಿನ್ನೆಲೆ ವಾಪಾಸ್ ಪಡೆಯಲಾಗಿತ್ತು.
ಈ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದರು. ಕೈಗಾರಿಕೆ ಸೇರಿದಂತೆ ವಿವಿಧ ವಾಣಿಜ್ಯ ಉದ್ಯಮಗಳ ಬೆಳೆವಣಿಗೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ಸುಮಾರು ರೂ.8172 ಕೋಟಿ ವ್ಯಯಿಸಿ, ಈ ಹೆದ್ದಾರಿಯನ್ನು ನಿರ್ಮಾಣ ಮಾಡಿತ್ತು.
ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದ ಆಗಿರುವ ದೊಡ್ಡ ಅನುಕೂಲವೆಂದರೆ ಪ್ರಯಾಣದ ಅವಧಿ ಕಡಿಮೆಯಾಗಿರುವುದು. ಈ ಹಿಂದೆ, ಬೆಂಗಳೂರು - ಮೈಸೂರು ತಲುಪಲು 150 ನಿಮಿಷ ಬೇಕಾಗಿತ್ತು. ಅದು 90 ನಿಮಿಷಕ್ಕೆ ಇಳಿಕೆಯಾಗಿದೆ. ಇದು ದಶಪಥದ ಹೆದ್ದಾರಿಯಾಗಿದ್ದು, 2 ಕಡೆ ತಲಾ 3 ಪಥ ಒಳಗೊಂಡಿರುವ 6 ಪಥದ ಎಕ್ಸ್‌ಪ್ರೆಸ್ ವೇ ಇದೆ. ಉಳಿದ 2 ಬದಿಯಲ್ಲಿ ತಲಾ 2 ಲೇನ್‌ಗಳಿರುವ ಸರ್ವಿಸ್ ರಸ್ತೆ ಇದೆ.
ಎಕ್ಸ್‌ಪ್ರೆಸ್ ವೇಯಲ್ಲಿ 9 ಬೃಹತ್ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್‌ಪಾಸ್, 13 ಪಾದಚಾರಿ ಅಂಡರ್ ಪಾಸ್‍ಗಳು ಇವೆ. ಒಟ್ಟು ಎರಡು ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಮಾಡಿದ್ದು, 118 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದೆ. ಆದರೆ, ಅಪಘಾತಗಳ ಸಂಖ್ಯೆ ಹೆಚ್ಚಳ ಹಾಗೂ ಟೋಲ್ ಶುಲ್ಕ ಏರಿಕೆ ಸೇರಿದಂತೆ ಒಂದಿಲ್ಲೊಂದು ಕಾರಣಗಳಿಗೆ ಈ ಹೆದ್ದಾರಿ ಸುದ್ದಿಯಲ್ಲಿ ಇರುತ್ತದೆ.


Click it and Unblock the Notifications