ಲಾಠಿ ಬಿಟ್ಟು ಹೊಸ ಪ್ರಯತ್ನಕ್ಕೆ ಕೈಹಾಕಿದ ಬೆಂಗಳೂರು ಪೊಲೀಸರು..!
ಕರೋನಾ ವೈರಸ್‌ನಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರಣಾಂತಿಕ ವೈರಸ್ ವಿಶ್ವಾದ್ಯಂತ 43,272 ಜನರ ಸಾವಿಗೆ ಕಾರಣವಾಗಿದೆ. 8 ಲಕ್ಷಕ್ಕೂ ಹೆಚ್ಚು ಜನರಿಗೆ ಈ ವೈರಸ್ ಸೋಂಕು ತಗುಲಿದೆ. ಸಾವು ನೋವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೇಂದ್ರ ಸರ್ಕಾರವು ಕರೋನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ 21 ದಿನಗಳ ಲಾಕ್ ಡೌನ್ ಜಾರಿಗೊಳಿಸಿದೆ. ಜನರು ವಿನಾಕಾರಣ ಮನೆಗಳಿಂದ ಹೊರಬಾರದಂತೆ ನಿರ್ಬಂಧ ವಿಧಿಸಲಾಗಿದೆ. ತುರ್ತು ಕಾರ್ಯಗಳಿದ್ದರೆ ಮಾತ್ರ ಜನರು ಮನೆಗಳಿಂದ ಹೊರ ಬರಬೇಕೆಂದು ಸೂಚಿಸಲಾಗಿದೆ.

ಲಾಕ್ ಡೌನ್ ಜಾರಿಗೊಳಿಸಿದ್ದರೂ, ಕೆಲವರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಬೇಕಾಬಿಟ್ಟಿಯಾಗಿ ಹೊರಗೆ ತಿರುಗಾಡುತ್ತಿದ್ದಾರೆ. ರಸ್ತೆಗಳು ಬಿಕೋ ಎನ್ನುತ್ತಿರುವ ಕಾರಣಕ್ಕೆ ಕೆಲವರು ಜಾಲಿ ರೈಡ್ ಮಾಡುತ್ತಿದ್ದಾರೆ. ಅದರಲ್ಲೂ ಯುವಕರು ನಗರದಾದ್ಯಂತ ತಿರುಗಾಡುತ್ತಿದ್ದಾರೆ.

ಅಗತ್ಯವಿಲ್ಲದೇ ಹೊರಗೆ ಬರುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರು ವಾಹನ ಸವಾರರನ್ನು ಥಳಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಕಾರಣಕ್ಕೆ ಪೊಲೀಸರು ವಾಹನ ಚಾಲಕರನ್ನು ಥಳಿಸುವುದನ್ನು ಕೈಬಿಟ್ಟು ಹೊಸ ಕ್ರಮಗಳಿಗೆ ಮುಂದಾಗಿದ್ದಾರೆ. ಅದರಂತೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ದಂಡ ವಿಧಿಸಲಾಗುತ್ತಿದೆ. ಪ್ರಕರಣಗಳನ್ನು ಸಹ ದಾಖಲಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ತಮಿಳುನಾಡು ಪೊಲೀಸರು ಕರೋನಾ ವೈರಸ್ ರೀತಿಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ್ದರು. ಈಗ ಕರ್ನಾಟಕ ಪೊಲೀಸರು ಸಹ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಜನ ತಮ್ಮ ಮನೆಗಳಿಂದ ಹೊರಬಂದರೆ ಏನಾಗುತ್ತದೆ ಎಂಬುದನ್ನು ತೋರಿಸುವ ವೀಡಿಯೊವನ್ನು ಬಿಡುಗಡೆಗೊಳಿಸಿದ್ದಾರೆ.

ಈ ವೀಡಿಯೊ ವೀಕ್ಷಿಸಲು ಖುಷಿಯಾಗಿದ್ದರೂ, ಸಾವಿನ ಭಯವನ್ನೂ ತೋರಿಸುತ್ತದೆ. ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಬಿಡುಗಡೆಗೊಳಿಸಿರುವ ಈ ವೀಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿರುವ ಪೊಲೀಸರು ಕರೋನಾ ವೈರಸ್ ನಂತಹ ಹೆಲ್ಮೆಟ್ ಧರಿಸಿರುತ್ತಾರೆ. ಆಗ ಯುವಕನೊಬ್ಬ ಬೈಕ್‌ನಲ್ಲಿ ಬರುತ್ತಾನೆ. ಆತನಿಗೆ ಪೊಲೀಸರು ಕರೋನಾ ವೈರಸ್ ಹೆಲ್ಮೆಟ್ ಧರಿಸುತ್ತಾರೆ. ಕರೋನಾ ಹೆಲ್ಮೆಟ್ ಹಾಕಿರುವ ಪೊಲೀಸ್ ಆತನ ಹಿಂದೆ ಕೂರುತ್ತಾರೆ.
ಉಳಿದ ಪೊಲೀಸರು ಗಂಟೆ ಹೊಡೆಯುತ್ತಾರೆ. ಮನೆಯಿಂದ ಹೊರ ಬಂದರೆ ಕರೋನಾ ವೈರಸ್ ತಗುಲಿ ಸಾವು ಸಂಭವಿಸಬಹುದು ಎಂದು ಪೊಲೀಸರು ಈ ರೀತಿಯಾಗಿ ಅರಿವು ಮೂಡಿಸಿದ್ದಾರೆ.

ಈ ವೀಡಿಯೋ ನೋಡಿದ ನಂತರವಾದರೂ ಜನ ಮನೆಗಳಿಂದ ಹೊರಬರುವುದನ್ನು ಕಡಿಮೆಮಾಡುತ್ತಾರೆಂಬ ನಂಬಿಕೆಯಲ್ಲಿದ್ದಾರೆ. ಲಾಠಿ ರುಚಿ ತೋರಿಸುವ ಬದಲು ಹೊಸ ರೀತಿಯ ಪ್ರಯತ್ನಕ್ಕೆ ಪೊಲೀಸರು ಕೈ ಹಾಕಿರುವುದು ನಿಜಕ್ಕೂ ಅಭಿನಂದನಾರ್ಹ.


Click it and Unblock the Notifications