Bangalore Tunnel Road: 190 ಕಿಮೀ ಉದ್ದದ ಬೆಂಗಳೂರು ಸುರಂಗ ರಸ್ತೆ, ಯಾವೆಲ್ಲ ಪ್ರದೇಶದಲ್ಲಿ ಬರುತ್ತೆ?
ಬೆಂಗಳೂರು (Bangalore) ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, 190 ಕಿಮೀ ಉದ್ದದ ಸುರಂಗ ರಸ್ತೆ (Tunnel Road) ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಿದೆ. ಬೃಹತ್ ಯೋಜನೆಗೆ 45 ದಿನಗಳಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಂಗ ರಸ್ತೆ ಯೋಜನೆಗೆ ಆಸಕ್ತಿ ತೋರಿದ 9 ಕಂಪನಿಗಳಲ್ಲಿ 8 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಆದಷ್ಟು ಬೇಗ ಕಾರ್ಯಸಾಧ್ಯತಾ ವರದಿ ನೀಡುವಂತೆ ತಿಳಿಸಲಾಗಿದೆ. ಈ ಕಂಪನಿಗಳು, ಸುರಂಗ ರಸ್ತೆ ಹೇಗಿರಬೇಕು. ಅದು 4 ಅಥವಾ 6 ಪಥಗಳನ್ನು ಒಳಗೊಂಡಿರಬೇಕೇ, ಎಲ್ಲಿಂದ ಆರಂಭಿಸಿ, ಎಲ್ಲಿ ಕೊನೆಗೊಳಿಸಬೇಕು ಎಂಬುದರ ಬಗ್ಗೆ ಅಧ್ಯಯನ ನಡೆಸಲಿವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಈ ಯೋಜನೆಯು ಬೃಹತ್ ಗಾತ್ರದಾಗಿದೆ. ದೊಡ್ಡ ಪ್ರಮಾಣದ ಹಣಕಾಸಿನ ಅಗತ್ಯವಿದ್ದು, ವಿವಿಧ ಹಂತದಲ್ಲಿ ಕಾಮಗಾರಿಯನ್ನು ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ 190 ಕಿಲೋಮೀಟರ್ ನಷ್ಟು ಸುರಂಗ ರಸ್ತೆಯನ್ನು ಮಾಡಲು ಉದ್ದೇಶಿಸಲಾಗಿದೆ ಎಂದಿದ್ದಾರೆ. ಪ್ರಮುಖವಾಗಿ ಈ ಪ್ರದೇಶಗಳನ್ನು ಗುರುತಿಸಲಾಗಿದೆ.
ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್ ನಿಂದ ಮೇಖ್ರಿ ಸರ್ಕಲ್, ಮಿಲ್ಲರ್ ಸರ್ಕಲ್, ಚಾಲುಕ್ಯ ಸರ್ಕಲ್, ಟ್ರಿನಿಟಿ ಸರ್ಕಲ್, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆಯಿಂದ ಶಿರಸಿ ವೃತ್ತ , ಮಾಗಡಿ ರಸ್ತೆ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆಆರ್ ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳು ಸೇರಿವೆ ಎಂದು ಹೇಳಿದ್ದಾರೆ.

'ನಾವು ಈ ಪ್ರದೇಶಗಳನ್ನು ಆದ್ಯತೆಯ ಮೇರಿಗೆ ಆಯ್ಕೆ ಮಾಡಿದ್ದೇವೆ. ಈ ಸುರಂಗ ರಸ್ತೆಯನ್ನು ಎಲ್ಲಿ ಮತ್ತು ಹೇಗೆ ಮಾಡಬಹುದು ಎಂಬುದನ್ನು ಕಂಪನಿಗಳು ಅಧ್ಯಯನ ಮಾಡಲಿವೆ' ಎಂದು ಅವರು ಹೇಳಿದ್ದಾರೆ. ಬೆಂಗಳೂರಿಗೆ ಕನಿಷ್ಠ ನಾಲ್ಕು ಪಥದ ಸುರಂಗ ರಸ್ತೆಯ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ನೆರವನ್ನು ಕೋರಲಿದೆ. ಕಂಪನಿಗಳು ತಮ್ಮ ಕಾರ್ಯಸಾಧ್ಯತಾ ವರದಿ ನೀಡಿದ ನಂತರ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದಿದ್ದಾರೆ.
'ರಾಷ್ಟ್ರೀಯ ಹೆದ್ದಾರಿಗಳಿಂದ ವಾಹನಗಳು ನೇರವಾಗಿ ಬೆಂಗಳೂರು ನಗರವನ್ನು ಪ್ರವೇಶಿಸಿ, ಇಲ್ಲಿ, ಹೆಚ್ಚಿನ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಈ ಸಂಬಂಧ ಯೋಜನೆ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಈಗಾಗಲೇ, ಚರ್ಚಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಪತ್ತು ನಿರ್ವಹಣೆ ಮತ್ತು ನಗರ ಪ್ರವಾಹ ತಡೆಗೆ ವಿಶ್ವಬ್ಯಾಂಕ್‌ಗೆ ರೂ.3,000 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ರೂ.250 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಆದ್ಯತೆಯ ಮೇರೆಗೆ ನಗರದಲ್ಲಿ ಪ್ರವಾಹ ತಡೆಗೆ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಂಚಾರಿ ಪೊಲೀಸರ ಸಹಾಯ ಪಡೆದು ನವೆಂಬರ್ 30ರೊಳಗೆ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಇನ್ನು, 190 ಕಿಮೀ ಉದ್ದದ ಬೆಂಗಳೂರು ಸುರಂಗ ರಸ್ತೆ ನಿರ್ಮಾಣವಾಗುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ, ಈ ರಸ್ತೆ ನಿರ್ಮಾಣಕ್ಕೆ ಒಂದಷ್ಟು ವರ್ಷಗಳು ಬೇಕು. ಜೊತೆಗೆ ಯೋಜನೆಯೂ ದೊಡ್ಡಗಾತ್ರದಿಂದ ಕೂಡಿದ್ದು, ಕೋಟಿ - ಕೋಟಿ ಹಣವನ್ನು ಸರ್ಕಾರ ಹೊಂದಿಸಬೇಕು. ಈಗಾಗಲೇ, ಶಕ್ತಿ ಯೋಜನೆಗೆ ಅನುದಾನ ನೀಡಲು ಹೆಣಗಾಡುತ್ತಿದ್ದು, ಈ ಯೋಜನೆಗೆ ಎಲ್ಲಿಂದ ಸರ್ಕಾರ ಹಣ ತರುತ್ತದೆ ಎಂಬುದನ್ನು ಹಲವಾರು ಪ್ರಶ್ನೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications