Bengaluru: ಈ ಪ್ರಮುಖ ರಸ್ತೆಯ 1 ಕಿಲೋಮೀಟರ್ ಮಾರ್ಗ ಒಂದು ವರ್ಷ ಬಂದ್, ಬದಲಿ ಮಾರ್ಗಗಳು ಯಾವುವು?
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Namma Metro) ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ಬನ್ನೇರುಘಟ್ಟ (Bannerghatta) ರಸ್ತೆಯ 1 ಕಿಲೋಮೀಟರ್ ಮಾರ್ಗವನ್ನು ಒಂದು ವರ್ಷದವರೆಗೆ ಮುಚ್ಚಲಾಗಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್ - BMRCL) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ.
ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದಲ್ಲಿನ ದಕ್ಷಿಣ ಭಾಗದ ಪ್ರವೇಶ ನಿರ್ಮಾಣ ಕಾಮಗಾರಿಯನ್ನು ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಉತ್ತರ ದಿಕ್ಕಿನ ಪಥವನ್ನು ಮೈಕೋ ಸಿಗ್ನಲ್ ನಿಂದ ಆನೆಪಾಳ್ಯ ಜಂಕ್ಷನ್ ವರೆಗೆ ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ 1 ವರ್ಷದ ಅವಧಿಗೆ ಬಂದ್ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಈ ಸಂಬಂಧ ವಾಹನ ಸವಾರರ ಅನುಕೂಲಕ್ಕಾಗಿ ಬದಲಿ ಮಾರ್ಗದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಹಾಗೂ ಆನೆಪಾಳ್ಯ ಜಂಕ್ಷನ್ ಕಡೆಗೆ ತೆರಳಬೇಕಾದ ವಾಹನಗಳು ಮೈಕೋ ಸಿಗ್ನಲ್ ನಲ್ಲಿ ಬಲಕ್ಕೆ ತಿರುಗಿ, ಭೋಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸಬೇಕು.
ಆನೆಪಾಳ್ಯ ಜಂಕ್ಷನ್ ನಿಂದ ಡೈರಿ ಸರ್ಕಲ್ ಕಡೆಗೆ ಹೋಗುವ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್ ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್ ಬಡಾವಣೆಯ 7ನೇ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುವು ಪಡೆಯಬೇಕು ಎಂದು ಬಿಎಂಆರ್‌ಸಿಎಲ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು (Bengaluru) ಹಾಗೂ ತುಮಕೂರು (Tumakuru) ನಡುವೆಯೂ ಅಂತರ ಜಿಲ್ಲಾ ಮೆಟ್ರೋ ಜಾಲ ನಿರ್ಮಾಣಕ್ಕೂ ಕರ್ನಾಟಕ ಸರ್ಕಾರ ಆಸಕ್ತಿಯನ್ನು ತೋರಿಸಿದೆ. ಈ ಬಗ್ಗೆ ಕಾರ್ಯ ಸಾಧ್ಯತಾ ಅಧ್ಯಯನದ ವರದಿಗೆ ಟೆಂಡರ್ ಸಹ ಆಹ್ವಾನಿಸಿದೆ. ಇವೆರೆಡು ನಗರಗಳ ನಡುವೆ 52.41 ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು ನಿರ್ಮಾಣಗೊಳಿಸಲು ಯೋಜಿಸಲಾಗಿದ್ದು, ಒಟ್ಟು 19 ನಿಲ್ದಾಣಗಳಿರಲಿವೆ ಎಂದು ತಿಳಿದುಬಂದಿದೆ.
ಶೀಘ್ರದಲ್ಲೇ ಬೆಂಗಳೂರು ಚಾಲಕ ರಹಿತ ಮೆಟ್ರೋ (Driverless Metro) ರೈಲಿಗೂ ಸಾಕ್ಷಿಯಾಗಲಿದೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹಳದಿ ಮಾರ್ಗ (Yellow Line)ದಲ್ಲಿ ಈ ರೈಲು ಸಂಚಾರವನ್ನು ನಡೆಸಲಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಚಾಲಕ ರಹಿತ ಮೆಟ್ರೋ ರೈಲನ್ನು ತಯಾರಿಸಿದ್ದು, ಬಿಎಂಆರ್‌ಸಿಎಲ್‌ಗೆ 216 ಬೋಗಿಗಳನ್ನು ಪೂರೈಸಲು 2019ರಲ್ಲಿ ರೂ.1,578 ಕೋಟಿ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿತ್ತು.
ಬಿಎಂಆರ್‌ಸಿಎಲ್ ಮೇ ತಿಂಗಳ ವೇಳೆಗೆ ಇನ್ನೂ 2 ಚಾಲಕ ರಹಿತ ಮೆಟ್ರೋ ರೈಲುಗಳನ್ನು ಪಡೆಯುವ ಸಾಧ್ಯತೆಯಿದೆ. ಆ ಬಳಿಕ ಪ್ರತಿ ತಿಂಗಳು 2 ರೈಲುಗಳು ಸೇರ್ಪಡೆಯಾಗಲಿವೆ. ಹಳದಿ ಮಾರ್ಗದಲ್ಲಿ ದೈನಂದಿನ ಸಂಚಾರವನ್ನು ಆರಂಭಿಸಲು 8 ಮೆಟ್ರೋ ರೈಲುಗಳ ಅಗತ್ಯವಿದೆ. ಬಹುತೇಕ ಈ ವರ್ಷದೊಳಗೆ ಪೂರ್ಣ ಪ್ರಮಾಣದ ಸಂಚಾರ ಶುರುವಾಗುವ ನಿರೀಕ್ಷೆಯಿದ್ದು, ಟ್ರಾಫಿಕ್ ಸಮಸ್ಯೆಗೂ ದೊಡ್ಡ ಪರಿಹಾರ ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications