Vande Bharat: ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರಯಲ್ ರನ್ ಯಶಸ್ವಿ.. ಟಿಕೆಟ್ ದರ ಎಷ್ಟಿರಲಿದೆ?
ಬೆಂಗಳೂರು - ಬೆಳಗಾವಿ (Bengaluru - Belagavi) ನಡುವೆ ಸೆಮಿ ಪ್ರೀಮಿಯಂ ಹೈಸ್ವೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಮಂಗಳವಾರ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ (Trial Run) ನಡೆಸಿದೆ. ಬಹುತೇಕ ಈ ತಿಂಗಳ ಕೊನೆಯಿಂದ ಕಾರ್ಯಾಚರಣಿ ಆರಂಭಿಸುವ ನೀರಿಕ್ಷೆಯಿದೆ.
ಪರೀಕ್ಷಾರ್ಥ ಓಡಾಟದ ವೇಳೆಯಲ್ಲಿ 8 ಬೋಗಿಗಳನ್ನು ಒಳಗೊಂಡಿದ್ದ ಈ ರೈಲು ಗಂಟೆಗೆ 110 ಕಿ.ಮೀ ವೇಗದಲ್ಲಿ ಸಂಚರಿಸಿದೆ. ಬೆಂಗಳೂರಿನಿಂದ ಬೆಳಿಗ್ಗೆ 5:45ಕ್ಕೆ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್, ಮಧ್ಯಾಹ್ನ 1:37ಕ್ಕೆ ಬೆಳಗಾವಿ ತಲುಪಿತು. ಸುಮಾರು 611 ಕಿ.ಮೀ ದೂರವನ್ನು ಕ್ರಮಿಸಲು 7.50 ನಿಮಿಷಗಳನ್ನು ತೆಗೆದುಕೊಂಡಿದೆ. ಮಾರ್ಗ ಮಧ್ಯೆ ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡ ನಿಲ್ದಾಣದಲ್ಲಿ ನಿಲುಗಡೆಯಾಯಿತು ಎಂದು ವರದಿಯಾಗಿದೆ.

ಬೆಳಗಾವಿಯಿಂದ ಮಧ್ಯಾಹ್ನ 2 ಗಂಟೆಗೆ ಪ್ರಯಾಣ ಆರಂಭಿಸಿದ ವಂದೇ ಭಾರತ್ ರಾತ್ರಿ 10:10 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೈಲು ಎಂದಿನಿಂದ ಕಾರ್ಯಾಚರಣೆಯನ್ನು ಶುರು ಮಾಡಲಿದೆ, ಟಿಕೆಟ್ ದರ ಎಷ್ಟಿರಲಿದೆ ಎನ್ನುವುದರ ಬಗ್ಗೆ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಟಿಕೆಟ್ ವೊಂದಕ್ಕೆ ಸುಮಾರು 1500 ರೂಪಾಯಿ ಬೆಲೆ ಇರಬಹುದು ಎಂದು ಹೇಳಲಾಗಿದೆ.
ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್, ಬೆಳಗಾವಿ ನಿಲ್ದಾಣಕ್ಕೆ ಬರುತ್ತಿದ್ದಂತೆ, ಜನರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಗಡಿ ಜಿಲ್ಲೆಯಾಗಿರುವ ಬೆಳಗಾವಿಗೆ ರಾಜಧಾನಿ ಬೆಂಗಳೂರಿನಿಂದ ಈ ರೈಲನ್ನು ಬಿಡಬೇಕೆಂದು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಒತ್ತಾಯವಾಗಿತ್ತು. ಕಡೆಗೆ ರೈಲ್ವೆ ಇಲಾಖೆ ಸ್ಪಂದಿಸಿ, ಬೆಂಗಳೂರು - ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಳಗಾವಿವರೆಗೆ ವಿಸ್ತರಿಸಲು ತೀರ್ಮಾನಿಸಲಾಯಿತು.

ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುವುದರಿಂದ ಹುಬ್ಬಳ್ಳಿ ಹಾಗೂ ಧಾರವಾಡ ಜನರಿಗೂ ದೊಡ್ಡಮಟ್ಟದ ಅನುಕೂಲವಾಗಲಿದ್ದು, ಪ್ರಯಾಣದ ಅವಧಿಯೂ ಕಡಿಮೆಯಾಗಲಿದೆ. ಈ ರೈಲಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಲು 5 ಗಂಟೆ 5 ನಿಮಿಷ, ಧಾರವಾಡಕ್ಕೆ 5 ಗಂಟೆ 35 ನಿಮಿಷ ಬೇಕಾಗಲಿದೆ. ಅದೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರಲು 5 ಗಂಟೆ 20 ನಿಮಿಷ ಆಗಲಿದೆ.
ಕರ್ನಾಟಕದಲ್ಲಿ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಮಾರ್ಗದೊಂದಿಗೆ ಚೆನ್ನೈ-ಬೆಂಗಳೂರು-ಮೈಸೂರು, ಹೈದರಾಬಾದ್ ಹಾಗೂ ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಕೆಲವೇ ದಿನಗಳಲ್ಲಿ ಮಂಗಳೂರು-ಗೋವಾ ನಡುವೆಯೂ ಈ ರೈಲಿನ ಸಂಚಾರ ಆರಂಭವಾಗುವ ನೀರಿಕ್ಷೆಯಿದೆ. ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಕಲಬುರಗಿ ಮಧ್ಯೆಯು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸಬೇಕೆಂದು ಅಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗದ ರೈಲು ಎಂದು ಹೆಸರುವಾಸಿಯಾಗಿದೆ. ಸುರಕ್ಷತೆಯ ಸಲುವಾಗಿ ಇವುಗಳ ವೇಗವನ್ನು ಗಂಟೆಗೆ 130 ಕಿ.ಮೀಗೆ ಸೀಮಿತಗೊಳಿಲಾಗಿದೆ. ಈ ರೈಲುಗಳು ಅತ್ಯಾಧುನಿಕ ಸೌಕರ್ಯವನ್ನು ಹೊಂದಿದ್ದು, ಸೀಟುಗಳು ಹೆಚ್ಚು ಆರಾಮದಯವಾಗಿವೆ. ಸಂಪೂರ್ಣ ಹವಾ ನಿಯಂತ್ರಣ ಬೋಗಿಗಳು ಇದ್ದು, ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಒಳಗೊಂಡಿದೆ.
ಕೆಲವೇ ದಿನಗಳಲ್ಲಿ ಬೆಂಗಳೂರು - ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲಿದ್ದು, ಪ್ರಯಾಣದ ಅವಧಿ ಕಡಿಮೆಯಾಗಿರುವುದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಶೈಕ್ಷಣಿಕ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಉತ್ತಮವಾಗಿ ಬೆಳವಣಿಗೆಯಾಗಲಿವೆ. ಮುಂದಿನ ವರ್ಷ ರಾಜ್ಯದಲ್ಲಿ ವಿವಿಧ ಮಾರ್ಗದಲ್ಲೂ ಹಲವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಪ್ರಾರಂಭಿಸುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications