Bengaluru: ಶ್ರಮಕ್ಕೆ ತಕ್ಕ ಪ್ರತಿಫಲ, ಬೆಂಗಳೂರಿನಲ್ಲಿ ಪ್ರತಿನಿತ್ಯ ರೂ.3,000-4,000 ದುಡಿಯುವ ಕ್ಯಾಬ್ ಡ್ರೈವರ್..!
ಬೆಂಗಳೂರು (Bengaluru) ಐಟಿ ಹಬ್ ಆಗಿದ್ದು, ನೂರಾರು ಕಂಪನಿಗಳು ಇಲ್ಲಿವೆ. ಪ್ರತಿನಿತ್ಯ ಸಾವಿರಾರು ಉದ್ಯೋಗಿಗಳು ಕೆಲಸಕ್ಕೆ ತೆರಳಲು ಕ್ಯಾಬ್‌ಗಳ ಮೊರೆಹೋಗುತ್ತಾರೆ. ಕ್ಯಾಬ್ (Cab) ಓಡಿಸುವ ಮೂಲಕ ಎಷ್ಟೋ ಚಾಲಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸದ್ಯ ಕ್ಯಾಬ್ ಚಾಲಕನೊಬ್ಬನ ತಿಂಗಳ ಗಳಿಕೆಯ ಕುರಿತು ರೆಡ್ಡಿಟ್ (Reddit)ನಲ್ಲಿ ಮಾಡಿರುವ ಪೋಸ್ಟ್‌ವೊಂದು ಭಾರೀ ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಪ್ರತಿದಿನ ಕ್ಯಾಬ್ ಡ್ರೈವರ್‌ರೊಬ್ಬರು ಎಷ್ಟು ಸಂಪಾದಿಸುತ್ತಾರೆ ಎಂಬ ಶೀರ್ಷಿಕೆಯೊಂದಿಗೆ ರೆಡ್ಡಿಟ್ ಬಳಕೆದಾರರೊಬ್ಬರು ಮಾಡಿರುವ ಪೋಸ್ಟ್ ಇದಾಗಿದೆ. ಅವರು, 'ನಾನು ಕಾರ್ಯಕ್ರಮದಿಂದ ಹಿಂದಿರುಗುವಾಗ ಕ್ಯಾಬ್ ಬುಕ್ ಮಾಡಿದ್ದೆ.. ಆ ಚಾಲಕನೊಂದಿಗೆ ಮಾತನಾಡುವಾಗ ಸಂಪಾದನೆ ಬಗ್ಗೆ ಕೇಳಿದೆ. ಆತ ದಿನವೊಂದಕ್ಕೆ ರೂ.3000 ರಿಂದ ರೂ.4000 ಗಳಿಸುತ್ತೇನೆ ಎಂದರು. ನಾನು ಗಾಬರಿಯಾದೆ, ಕ್ಯಾಬ್ ಚಾಲಕ ಪ್ರತಿನಿತ್ಯ ರೂ.3 ಸಾವಿರದಂತೆ ತಿಂಗಳಿಗೆ 25 ದಿನ ದುಡಿದರೂ ಒಟ್ಟಾರೆ ರೂ.75,000 ಆಗುತ್ತದೆ' ಎಂದು ಹೇಳಿದ್ದಾರೆ.

'ಪೆಟ್ರೋಲ್ ಹಾಕಿಸಲು ಮಾಡುವ ಖರ್ಚನ್ನು ಕಳೆದರೂ ನನಗೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಜೊತೆಗೆ ಮತ್ತೊಂದು ಕ್ಯಾಬ್‌ನ್ನು ಓಲಾಗೆ ಬಿಡಲಾಗಿದ್ದು, ಅದು ಆದಾಯವನ್ನು ತಂದುಕೊಡುತ್ತಿದೆ. ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದೇನೆ ಎಂದು ಆ ಚಾಲಕ ಹೆಮ್ಮೆಯಿಂದ ಹೇಳಿದರು. ಎಷ್ಟು ವರ್ಷದಿಂದ ಕ್ಯಾಬ್ ಓಡಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಹಿಂದಿನ ಕೆಲಸವನ್ನು ಕಳೆದುಕೊಂಡ ಬಳಿಕ 2019ರಿಂದ ಚಾಲನೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದರು' ಎಂದು ರೆಡ್ಡಿಟ್ ಬಳಕೆದಾರ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರ ಪ್ರತಿಕ್ರಿಯೆ ಏನು?: ನೆಟ್ಟಿಗರೊಬ್ಬರು, 'ಇದನ್ನು ನಂಬಬಹುದು. ನನಗೆ ಗೊತ್ತಿರುವ ವ್ಯಕ್ತಿಯೊಬ್ಬರು ಓಲಾ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆತರುವುದು ಹಾಗೂ ಬಿಡುವುದನ್ನು ಮಾಡುತ್ತಾರೆ. ಎಲ್ಲ ವೆಚ್ಚ ಹೋಗಿ (ಇಂಧನ, ಇಎಂಐ, ನಿರ್ವಹಣೆ ಹಾಗೂ ವಿಮೆ) ಸುಮಾರು ರೂ.80 ಸಾವಿರವನ್ನು ಮನೆಗೆ ತರುತ್ತಾರೆ' ಎಂದಿದ್ದಾರೆ.
ಮುಂದುವರಿದು, 'ಆ ಚಾಲಕ ಆರಾಮದಾಯಕ ಜೀವನವನ್ನು ನಡೆಸುತ್ತಿದ್ದು, ಯಲಹಂಕದಲ್ಲಿ 30/40 ಮನೆಯನ್ನು ಹೊಂದಿದ್ದಾರೆ. ಅವರು ಕ್ಯಾಬ್ ಚಾಲನೆಯಿಂದ ಬಂದ ಆದಾಯದಲ್ಲಿ ಹುಟ್ಟೂರಿನಲ್ಲಿ ಒಂದೆರಡು ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ನೀವು ಕಷ್ಟಪಟ್ಟು ದುಡಿಯುವುದರೊಂದಿಗೆ ಜನರಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸಿದರೆ, ಯಾವುದೇ ವ್ಯವಹಾರದಲ್ಲಿ ಬೇಕಾದರೂ ಉತ್ತಮವಾದ ಆದಾಯವನ್ನು ಗಳಿಸಬಹುದು' ಎಂದು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರೊಬ್ಬರು, 'ಓಲಾ - ಉಬರ್ ಸೇವೆಗಳು ಆರಂಭಗೊಂಡ ದಿನಗಳಲ್ಲಿ ಕ್ಯಾಬ್ ಚಾಲಕರು ತಿಂಗಳಿಗೆ ರೂ.1 ಲಕ್ಷ ಆದಾಯವನ್ನು ಗಳಿಸುತ್ತಿದ್ದರು. ಇದನ್ನು ಬಹುತೇಕರು ಕೂಡಿಟ್ಟುಕೊಂಡು ತಮ್ಮ ಊರುಗಳಲ್ಲಿ ಕೃಷಿ ಜಮೀನನ್ನು ತೆಗೆದುಕೊಂಡಿದ್ದಾರೆ. ಈಗ ಅವರು ಉತ್ತಮವಾದ ಬದುಕನ್ನು ಕಟ್ಟಿಕೊಂಡಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ.
ಇನೋರ್ವ ಸಾಮಾಜಿಕ ಜಾಲತಾಣ ಬಳಕೆದಾರೊಬ್ಬರು, 'ಇದು ಕ್ಯಾಬ್ ಚಾಲಕರ ಬಗ್ಗೆ ಮಾತ್ರವಲ್ಲ.. ಈಚೆಗೆ ಹಣ್ಣಿನ ಗಾಡಿಯೊಂದರ ಸಮೀಪ ನನ್ನ ಸ್ನೇಹಿತನಿಗಾಗಿ ಕಾಯುತ್ತಿದ್ದೆ. ಇಬ್ಬರು ಹಣ್ಣು ಮಾರುವವರ ಮಾತನ್ನು ಆಲಿಸಿದೆ.. ಅವರಿಬ್ಬರೂ ತಮ್ಮಲ್ಲಿರುವ ದುಡ್ಡನ್ನು ಯಾವ ಆಸ್ತಿ ಮೇಲೆ ಹೂಡಿಕೆ ಮಾಡಬೇಕೆಂದು ಚರ್ಚಿಸುತ್ತಿದ್ದರು. ಆ ಹಣದ ಮೊತ್ತವು ಕೋಟಿಯಲ್ಲಿತ್ತು' ಎಂದು ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications