Expressway: ಶೀಘ್ರ ಹೊಸ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ.. ಬೆಂಗಳೂರಿನಿಂದ ಈ ಊರಿಗೆ 3 ಗಂಟೆ ಪ್ರಯಾಣ!
ಬೆಂಗಳೂರು ಮತ್ತು ಚೆನ್ನೈ ನಡುವೆ ಸಂಚಾರ ನಡೆಸುವವರಿಗೆ ಶೀಘ್ರದಲ್ಲಿಯೇ ಸಿಹಿಸುದ್ದಿಯೊಂದು ಲಭ್ಯವಾಗಲಿದೆ. ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway) ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ವಾಹನ ಸಂಚಾರಕ್ಕೆ ಮುಕ್ತಾಯವಾಗಲಿದೆ ಎಂದು ತಿಳಿದುಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ಉದ್ಘಾಟನೆ ಸಂಬಂಧ ಅಧಿಕೃತ ಮಾಹಿತಿ ಸಿಗಲಿದೆ. ಹೊಸ ಎಕ್ಸ್‌ಪ್ರೆಸ್‌ವೇಯಿಂದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಜನರಿಗೆ ದೊಡ್ಡಮಟ್ಟ ಅನುಕೂಲವಾಗಲಿದೆ. ಈ ಹೆದ್ದಾರಿ ಹಲವು ವಿಶೇಷತೆಗಳಿಗೂ ಸಾಕ್ಷಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ದೇಶದ ಎರಡು ಪ್ರಮುಖ ವಾಣಿಜ್ಯ ನಗರಗಳಾಗಿರುವ ಬೆಂಗಳೂರು ಹಾಗೂ ಚೆನ್ನೈ ನಡುವೆ ಸಾರಿಗೆ ಸಂಪರ್ಕ ಜಾಲವನ್ನು ಸುಧಾರಿಸಲು ಎನ್‍ಹೆಚ್‍ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ), ಈ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸುತ್ತಿದೆ. 2022ರ ಮೇ 26 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೂತನ ಹೆದ್ದಾರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಸದ್ಯ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಚೆನ್ನೈಗೆ ಹೊರಟರೆ, ಹತ್ತಿರತ್ತಿರ 6 ಗಂಟೆವರೆಗೆ ಪ್ರಯಾಣ ಮಾಡಬೇಕಾಗಿದೆ. ಬರೋಬ್ಬರಿ 262 ಕಿಲೋಮೀಟರ್ ಉದ್ದದ ನೂತನ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಂಡ ಬಳಿಕ, ಅದು ಕೇವಲ 3 ಗಂಟೆಗೆ ಇಳಿಕೆಯಾಗಲಿದೆ ಎನ್ನಲಾಗದೆ. ಈ ಹೆದ್ದಾರಿ, ಕರ್ನಾಟಕದ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಮತ್ತು ಶ್ರೀಪೆರಂಬದೂರನ್ನು ಕೂಡ ಸಂಪರ್ಕಿಸುತ್ತದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಎಲ್ಲ ವಿಧದ ವಾಹನಗಳಿಗೆ ಗಂಟೆಗೆ 120 ಕಿಲೋಮೀಟರ್ ವೇಗಮಿತಿಯನ್ನು ನಿಗದಿಪಡಿಸಬಹುದು ಎಂದು ವರದಿಯಾಗಿದೆ. ಈ ಹೆದ್ದಾರಿಯನ್ನು ರೂ.17,000 ಕೋಟಿ ವೆಚ್ಚದಲ್ಲಿ 4 ಪಥಗಳಲ್ಲಿ (ಲೈನ್) ನಿರ್ಮಾಣ ಮಾಡಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ 8 ಪಥಗಳಿಗೂ ವಿಸ್ತರಣೆ ಮಾಡಲು ಸಾಧ್ಯವಾಗಲಿದೆ.
ಹೊಸ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 33 ಕಿ.ಮೀ ಅರಣ್ಯ ಪ್ರದೇಶದಲ್ಲಿ ಮಾತ್ರವೇ ಹಾದು ಹೋಗಲಿದ್ದು, ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಮರಗಳನ್ನು ಕಡಿದಿಲ್ಲ. ಜೊತೆಗೆ ಈ ರಸ್ತೆ ಸರಿ ಸುಮಾರು 17 ಮೇಲ್ಸೇತುವೆಗಳು & 41 ವಾಹನ ಕೆಳಸೇತುವೆಗಳನ್ನು ಒಳಗೊಂಡಿರಲಿದೆ. ನೂತನ ಎಕ್ಸ್‌ಪ್ರೆಸ್‌ವೇ ಹೊಸಕೋಟೆ ಬಳಿ ಆರಂಭವಾಗುತ್ತದೆ. ಚೆನ್ನೈಗೆ ಸಮೀಪದಲ್ಲಿರುವ ಶ್ರೀಪೆರಂಬದೂರಿನಲ್ಲಿ ಮುಕ್ತಾಯವಾಗಲಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮಾತ್ರವಲ್ಲದೆ, ದಕ್ಷಿಣ ಭಾರತದ ಐಟಿ ಹಬ್‌ಗಳಾಗಿರುವ ಬೆಂಗಳೂರು ಮತ್ತು ಹೈದರಾಬಾದ್‌ಗೆ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ - 44 ಅನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಕೆಲವೇ ತಿಂಗಳ ಹಿಂದೆ ವರದಿಯಾಗಿತ್ತು. ಪ್ರಸ್ತುತವಿರುವ 4 ಪಥದ ರಸ್ತೆಯನ್ನು 12 ಪಥದ ಎಕ್ಸ್‌ಪ್ರೆಸ್‌ವೇಯಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ ಎಂದು ತಿಳಿದುಬಂದಿತ್ತು.
ನೆಲಮಂಗಲ ಹಾಗೂ ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಎಕ್ಸ್‌ಪ್ರೆಸ್‌ವೇಯಾಗಿ ಅಭಿವೃದ್ಧಿಪಡಿಸುವ ಕೆಲಸದಲ್ಲಿ ಎನ್‍ಹೆಚ್‍ಎಐ ನಿರತವಾಗಿದೆ. ಬಹುತೇಕ ಕಡೆಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. 700 ಕಿಲೋಮೀಟರ್ ಉದ್ದದ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೂ ಎನ್‍ಹೆಚ್‍ಎಐ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ಹೇಳಿವೆ. ಮುಂಬರುವ ದಿನಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications