ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಶೀಘ್ರ ಲೋಕಾರ್ಪಣೆ: 2:30 ಗಂಟೆ ಪ್ರಯಾಣ, ವಿಶೇಷತೆಗಳೇನು?
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂಲ ಸೌಕರ್ಯ ಅಭಿವೃದ್ಧಿಗೆ ಹೆದ್ದಾರಿಗಳನ್ನು ಶರವೇಗದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಈ ಎಕ್ಸ್‌ಪ್ರೆಸ್‌ವೇ ವಿಶೇಷತೆಗಳ ಬಗ್ಗೆ ತಿಳಿಯೋಣ.
ಚೆನ್ನೈ - ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ (Chennai - Bangalore Greenfield Expressway) ಪ್ರಸ್ತುತ ಭಾರತದಲ್ಲಿ ನಿರ್ಮಾಣವಾಗುತ್ತಿರುವ 36 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದ್ದು, ಹೊಸಕೋಟೆಯಿಂದ ಶ್ರೀಪೆರಂಬದೂರಿಗೆ ಸಂಪರ್ಕ ಕಲ್ಪಿಸಲಿದೆ. ಈ ಹೆದ್ದಾರಿಗೆ ರೂ.17,930 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ನಡೆಸುತ್ತಿದೆ.

262 ಕಿಮೀ ಉದ್ದದ ಈ ಹೆದ್ದಾರಿ ನಿರ್ಮಾಣಗೊಂಡ ನಂತರ, ಬೆಂಗಳೂರು - ಚೆನ್ನೈ ಮಧ್ಯೆ ಈಗಿರುವ 5 - 6 ಗಂಟೆ ಪ್ರಯಾಣ ಅವಧಿ 2 ಗಂಟೆ 30 ನಿಮಿಷಗಳಿಗೆ ಕಡಿಮೆಯಾಗುವ ಸಾಧ್ಯತೆಯಿದೆ. ನೂತನ ಎಕ್ಸ್‌ಪ್ರೆಸ್‌ವೇ, ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರಿನ ಮೂಲಕ ಹಾದು ಹೊಗಲಿದೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ವೇಗಮಿತಿಯನ್ನು ಗಂಟೆಗೆ 120 ಕಿಮೀ.ಗೆ ಅನುಮತಿಸಬಹುದು ಎಂದು ಹೇಳಲಾಗಿದೆ. ಇದರಿಂದ ಎರಡು ನಗರಗಳ ನಡುವಿನ ಅಂತರ 80 ಕಿಲೋಮೀಟರ್ ಕಡಿಮೆಯಾಗಲಿದೆ. ಪ್ರಸ್ತುತ, 4 ಪಥದ ಹೆದ್ದಾರಿಯಾಗಿರಲಿದ್ದು, ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಣೆಗೊಳಿಸುವಷ್ಟು ಸ್ಥಳಾವಕಾಶವನ್ನು ಹೊಂದಿದೆ.
ಈ ಎಕ್ಸ್‌ಪ್ರೆಸ್‌ವೇ 17 ಫ್ಲೈಓವರ್‌ಗಳು, 41 ವೆಹಿಕಲ್ ಅಂಡರ್‌ಪಾಸ್, 52 ಪಾದಚಾರಿ ಅಂಡರ್‌ಪಾಸ್, 162 ಸೇತುವೆ ಮತ್ತು 4 ರೈಲ್ವೆ ಕ್ರಾಸಿಂಗ್ ಒಳಗೊಂಡಿರಲಿದೆ. ಸದ್ಯ, ಬೆಂಗಳೂರಿನಿಂದ ಚೆನ್ನೈಗೆ ಎರಡು ಹೆದ್ದಾರಿಗಳು ಸಂಪರ್ಕಿಸುತ್ತಿವೆ. 335 ಕಿಮೀ ಉದ್ದದ ಹಳೆಯ ಮದ್ರಾಸ್ ರೋಡ್ (Old Madras Road - NH-75), ಮತ್ತೊಂದು 372 ಕಿಲೋಮೀಟರ್ ಉದ್ದದ ರಸ್ತೆಯಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಶ್ರೀಪೆರಂಬದೂರು ಮಾರ್ಗವಾಗಿ ಚೆನ್ನೈಗೆ ಹೋಗಬಹುದು.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway)ಯಿಂದ ಜನರಿಗೆ ದೊಡ್ಡ - ಮಟ್ಟದ ಅನುಕೂಲವಾಗಲಿದ್ದು, ಪ್ರಯಾಣದ ಅವಧಿಯು ಕಡಿಮೆಯಾಗಲಿದೆ. ಈ ಹೆದ್ದಾರಿ ಹಾದು ಹೋಗುವ ರಸ್ತೆಗಳಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ವೇಗಗೊಳ್ಳಲಿದ್ದು, ಅಲ್ಲಿ ಆಸ್ತಿಯ ಬೆಲೆಗಳು ಹೆಚ್ಚಳವಾಗುವ ನಿರೀಕ್ಷೆಯಿದೆ. ಕರ್ನಾಟಕದ ಆಟೋಮೊಬೈಲ್ ಹಬ್ ಖ್ಯಾತಿಯ 'ಹೊಸಕೋಟೆ' ಸುತ್ತ - ಮುತ್ತ ಎಕ್ಸ್‌ಪ್ರೆಸ್‌ವೇಯಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಈ ಹೆದ್ದಾರಿಯಿಂದ ರಫ್ತು ಚಟುವಟಿಕೆಗಳು ಹೆಚ್ಚಳಗೊಂಡ ಕರ್ನಾಟಕದ ಉದ್ಯಮಗಳು ಬೆಳವಣಿಗೆಯಾಗುತ್ತದೆ. ಜೊತೆಗೆ ಚೆನ್ನೈ ಕಡಲ ಕಿನಾರೆಯನ್ನು ಹೊಂದಿದ್ದು, ಸುತ್ತಲೂ ಪ್ರವಾಸಿ ತಾಣಗಳಿರುವುದರಿಂದ ಪ್ರವಾಸೋದ್ಯಮ ಉತ್ತೇಜನಗೊಳ್ಳಲಿದ್ದು, ಬಹುತೇಕ ಮುಂದಿನ ವರ್ಷ, ಅದರಲ್ಲೂ ಲೋಕಸಭಾ ಚುನಾವಣೆಗೂ ಮೊದಲೇ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications