Bengaluru-Chennai Expressway: ಬೆಂಗಳೂರು-ಚೆನ್ನೈ 2 ಗಂಟೆ 30 ನಿಮಿಷ ಅಷ್ಟೇ, ದೇಶದಲ್ಲೇ ಮೊದಲು..!
ನೂತನ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಲೋಕಸಭೆ ಚುನಾವಣೆಗೂ ಮೊದಲೇ ಉದ್ಘಾಟನೆಗೊಳ್ಳಲು ಸಿದ್ದವಾಗುತ್ತಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯು ಈಗಿರುವುದಕ್ಕಿಂತ ಅರ್ಧದಷ್ಟು ಕಡಿಮೆಯಾಗಲಿದೆ. ಆ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಯೋಣ ಬನ್ನಿ.
ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು 2011ರಲ್ಲಿ ರೂಪಿಸಲಾಯಿತು. ಆದರೆ, ಕಾರಣಾಂತರಗಳಿಂದ ಅದು ವಿಳಂಬವಾಗಿತ್ತು. 2022ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಈ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದ್ದರು. ಬಹುತೇಕ, ಮಾರ್ಚ್ 2024ರ ವೇಳೆಗೆ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳುವ ನೀರಿಕ್ಷೆಯಿದೆ. ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯನ್ನು ನಿರ್ಮಾಣ ಮಾಡುತ್ತಿದೆ.

262 ಕಿಮೀ ಉದ್ದದ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಇವೆರೆಡು ನಗರಗಳ ಜನರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ. ಈಗಿರುವ 5 - 6 ಗಂಟೆ ಪ್ರಯಾಣ ಸಮಯ, 2 ಗಂಟೆ 30 ನಿಮಿಷಗಳಿಗೆ ಇಳಿಕೆಯಾಗುವ ನೀರಿಕ್ಷೆಯಿದೆ. ಹೆದ್ದಾರಿ ನಿರ್ಮಾಣಕ್ಕೆ ಬರೋಬ್ಬರಿ ರೂ.17,000 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ರಸ್ತೆಯು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಮೂಲಕ ಹಾದುಹೋಗಲಿದೆ.
ಪ್ರಮುಖವಾಗಿ, ಬೆಂಗಳೂರು ಚೆನ್ನೈ ನಡುವೆ ನಿರ್ಮಾಣಗೊಳ್ಳುತ್ತಿರುವ ಹೊಸ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿಯೊಂದು ವಾಹನಗಳ ವೇಗ ಮಿತಿಯನ್ನು 120 kmph ಸೀಮಿತಗೊಳಿಸಬಹುದು ಎನ್ನಲಾಗಿದೆ. ಇದರಿಂದಲೇ ಎರಡು ನಗರಗಳ ಪ್ರಯಾಣದ ಅವಧಿಯು ಕಡಿಮೆಯಾಗಲಿದೆ. ಈ ರಸ್ತೆಯು ದೇಶದ ಮೊದಲ ಹಸಿರು ಹೆದ್ದಾರಿ ಎಂಬ ಹಿರಿಮೆಗೂ ಪಾತ್ರವಾಗಲಿದೆ. ಯೋಜನೆಗಾಗಿ ಸುಮಾರು 33 ಕಿಲೋಮೀಟರ್ ಅರಣ್ಯ ಜಾಗವನ್ನು ಮಾತ್ರ ಬಳಸಲಾಗುತ್ತಿದೆ.

ಜೊತೆಯಲ್ಲಿ ಎರಡು ಸಾವಿರ ಮರಗಳಿಗೆ ಕೊಡಲಿ ಬೀಳಲಿದೆ. ಇದಕ್ಕೆ ಪರಿಹಾರವಾಗಿ ಹೆದ್ದಾರಿ ಪಕ್ಕದಲ್ಲಿ ಹೆಚ್ಚಿನ ಮರಗಳನ್ನು ಬೆಳೆಸಲು ಯೋಜಿಸಲಾಗಿದೆ. ಇದರೊಟ್ಟಿಗೆ, ಅಕ್ಕಪಕ್ಕದ ಕೆರೆಗಳನ್ನು ಅಮೃತ ಯೋಜನೆಯಡಿ ಪುನಶ್ಚೇತನಗೊಳಿಸಲಾಗುತ್ತದೆ. ಪಕ್ಷಿಧಾಮವನ್ನು ನಿರ್ಮಿಸಲಾಗುತ್ತದೆ ಎಂದು ವರದಿಯಾಗಿದೆ. ಸದ್ಯ, ಬೆಂಗಳೂರು - ಚೆನ್ನೈ ನಡುವೆ ಎರಡು ಹೆದ್ದಾರಿಗಳಿವೆ. ಮೊದಲನೆಯದು 335 ಕಿಮೀ ಉದ್ದದ ಹಳೆಯ ಮದ್ರಾಸ್ ರೋಡ್ (NH - 75).
ಇನ್ನೊಂದು, 372 ಕಿಲೋಮೀಟರ್ ಉದ್ದದ ರಸ್ತೆಯಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೊಸೂರು, ಕೃಷ್ಣಗಿರಿ, ಅಂಬೂರು, ವಾಣಿಯಂಬಾಡಿ, ವೆಲ್ಲೂರು, ರಾಣಿಪೇಟೆ, ಕಾಂಚಿಪುರಂ, ಶ್ರೀಪೆರಂಬದೂರು ಮಾರ್ಗವಾಗಿ ಚೆನ್ನೈ ತಲುಪುತ್ತದೆ. ಪ್ರಸ್ತುತ ಹೊಸದಾಗಿ ನಿರ್ಮಿಸುತ್ತಿರುವ ಎಕ್ಸ್‌ಪ್ರೆಸ್‌ವೇ, ಇವೆರೆಡು ಹೆದ್ದಾರಿಗಳ ನಡುವೆ ಹಾದುಹೋಗಲಿದ್ದು, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ.
ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯು ಕೆಲವೆಡೆ ಶೇಕಡ 15 - 80% ಮುಕ್ತಾಯವಾಗಿದೆ. ಈ ಹೆದ್ದಾರಿ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಯಲ್ಲಿ. ಆಂಧ್ರದ ಚಿತ್ತೂರು ಹಾಗೂ ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರಿನ ಮೂಲಕ ಹಾದುಹೊಗಲಿದೆ. ಸದ್ಯ, ನಾಲ್ಕು ಪಥದ ಹೆದ್ದಾರಿ ಇದಾಗಿರಲಿದ್ದು, ಮುಂಬರುವ ದಿನಗಳಲ್ಲಿ ಎಂಟು ಪಥಗಳಿಗೆ ವಿಸ್ತರಣೆಯನ್ನು ಮಾಡಬಹುದು.
ಈ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಎರಡು ನಗರಗಳ ನಡುವಿನ ವಿಮಾನಯಾನದ ಒತ್ತಡ ಸಾಕಷ್ಟು ಕಡಿಮೆಯಾಗಲಿದೆ. ಮೂರು ರಾಜ್ಯಗಳ ಕೈಗಾರಿಕಾ ಕ್ಷೇತ್ರದಲ್ಲಿ ಬೃಹತ್ ಪ್ರಗತಿ ಆಗಲಿದೆ. ಇದರೊಂದಿಗೆ, ಚೆನ್ನೈ ಬಂದರಿಗೆ ಹತ್ತಿರವಾಗಿರುವುದರಿಂದ ರಾಜ್ಯದ ರಫ್ತು ಹಾಗೂ ಆಮದು ಚಟುವಟಿಕೆಗಳು ವೇಗವಾಗಲಿದೆ. ಅದರಲ್ಲೂ ಪ್ರಯಾಣಿಕರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications