ಬೆಂಗಳೂರಿನಲ್ಲಿ ಒಬ್ಬನೇ ಪ್ರಯಾಣಿಸುವ ಕಾರುಗಳಿಗೆ ತೆರಿಗೆ.. ಡಿಕೆಶಿ ಹೇಳಿದ್ದೇನು?
ಬೆಂಗಳೂರು (Bengaluru) ಐಟಿ ಹಬ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಜನರು ಬಂದು ನೆಲೆಸಿದ್ದಾರೆ. ರಸ್ತೆಗಳು ಇಕ್ಕಟ್ಟಾಗಿದ್ದು, ವಾಹನಗಳ ಸಂಖ್ಯೆ ವಿಪರೀತವಾಗಿ ಅಧಿಕಗೊಂಡಿದೆ. ಸಂಚಾರ ದಟ್ಟಣೆ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಶ್ರಮಿಸುತ್ತಿದೆ. ಸದ್ಯ, ಪೀಕ್ ಅವರ್‌ನಲ್ಲಿ ಒಬ್ಬರೇ ಕಾರಿನಲ್ಲಿ ಸಂಚರಿಸಿದರೆ ತೆರಿಗೆ ವಿಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸೆ.24 ರಂದು ಸಂಚಾರ ದಟ್ಟಣೆ, ಗುಂಡಿ ಸಮಸ್ಯೆ ಹಾಗೂ ನಗರದ ಇತರೆ ಅಭಿವೃದ್ಧಿ ಕುರಿತು ಚರ್ಚಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದಿತ್ತು. ವಿವಿಧ ಇಲಾಖೆಯ ಅಧಿಕಾರಿಗಳು ಪ್ರಮುಖ ಉದ್ಯಮಿಗಳು ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು. ಈ ವೇಳೆ ತಜ್ಞರು ಔಟರ್ ರಿಂಗ್ ರೋಡ್‌ನಲ್ಲಿ ಪ್ರಯಾಣಿಸುವ ಏಕ ವ್ಯಕ್ತಿ ಕಾರುಗಳ ಮೇಲೆ ಸಂಚಾರ ತೆರಿಗೆ ವಿಧಿಸುವಂತೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

ಉದ್ದೇಶಿತ ಪ್ರಸ್ತಾವನೆಯಡಿ ಒಬ್ಬನೇ ಪ್ರಯಾಣಿಸುವ ಕಾರುಗಳು ಮಾತ್ರ ನಿಗದಿಪಡಿಸಿರುವ ತೆರಿಗೆ ಶುಲ್ಕವನ್ನು ಪಾವತಿಸಬೇಕು. ಆದರೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಸುವ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ವಿಶೇಷವಾಗಿ ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಕಡಿತಗೊಳಿಸಲು ಯೋಜಿಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಅವರು, ಬೆಂಗಳೂರಿನಲ್ಲಿ ಒಬ್ಬನೇ ಪ್ರಯಾಣಿಸುವ ಕಾರುಗಳಿಗೆ ತೆರಿಗೆ ವಿಧಿಸುವ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದಿಲ್ಲ. ನಗರದ ಹಿತದೃಷ್ಟಿಯಿಂದ ಕೆಲವು ಉದ್ಯಮಿಗಳು ಸಲಹೆ ನೀಡಿದ್ದಾರೆ. ಅದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸಹ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು 'ತುಘಲಕ್ ಸರ್ಕಾರ ಎಂದು ಟೀಕಿಸಿದ್ದಾರೆ. ಮೊದಲು ಮೊದಲು ರಸ್ತೆಗಳನ್ನು ರಿಪೇರಿ ಮಾಡಿ, ಆಗ ಎಲ್ಲವು ಸರಿಯಾಗುತ್ತದೆ. ಮುಖ್ಯಮಂತ್ರಿ ಹಾಗೂ ಸಚಿವರು ಒಂಟಿಯಾಗಿ ಪ್ರಯಾಣಿಸಿದರೆ, ಅವರ ಕಾರುಗಳಿಗೂ ಸಂಚಾರ ತೆರಿಗೆ ಅನ್ವಯವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕಂಜೆಸ್ಚನ್ ಟಾಕ್ಸ್ ಅಥವಾ ಸಂಚಾರ ದಟ್ಟಣೆ ತೆರಿಗೆ ವಿಧಿಸುವ ಸಂಬಂಧ ಚರ್ಚೆಯಾಗುತ್ತಿರುವುದು ಇದೇ ಮೊದಲೇನು ಅಲ್ಲ. 2023ರಲ್ಲಿಯೇ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಹಾಗೂ ಆದಾಯ ಹೆಚ್ಚಿಸುವ ಸಲುವಾಗಿ ಪೀಕ್ ಅವರ್‌ನಲ್ಲಿ ನಗರ ಪ್ರವೇಶಿಸುವ ವಾಹನಗಳ ಮೇಲೆ ಶುಲ್ಕ ವಿಧಿಸುವಂತೆ ಸಮಿತಿಯೊಂದು ಶಿಫಾರಸ್ಸು ಮಾಡಿತ್ತು.
ಬೆಂಗಳೂರು ನಿಧಾನಗತಿಯ ನಗರ:
ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ, 2024ರ ವಿಶ್ವದ ಅತ್ಯಂತ ನಿಧಾನಗತಿಯ ನಗರಗಳ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ ಕೊಲಂಬಿಯಾದ ಬ್ಯಾರಂಕ್ವಿಲ್ಲಾ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಪ್ರತಿ 10 ಕಿಲೋಮೀಟರ್‌ಗೆ ಸರಾಸರಿ ಪ್ರಯಾಣದ ಸಮಯವು 34 ನಿಮಿಷ 10 ಸೆಕೆಂಡುಗಳಾಗಿದೆ. 2023ಕ್ಕೆ ವಿಶ್ಲೇಷಿಸಿದರೆ 2024ರಲ್ಲಿ ನಗರದಲ್ಲಿ ಪ್ರತಿ ಕಿಲೋಮೀಟರ್‌ಗೆ ಪ್ರಯಾಣದ ಸಮಯವು ಬರೋಬ್ಬರಿ 10 ಸೆಕೆಂಡುಗಳಷ್ಟು ಅಧಿಕಗೊಂಡಿದೆ. ಇದು ಮಾತ್ರವಲ್ಲದೆ, ಏಷ್ಯಾದಲ್ಲಿಯೇ ಬೆಂಗಳೂರು ಅತಿ ಹೆಚ್ಚು ಜನದಟ್ಟಣೆಯೊಂದಿರುವ 2ನೇ ನಗರವಾಗಿದೆ. ಅಗ್ರ ಸ್ಥಾನದಲ್ಲಿ ಕೋಲ್ಕತ್ತಾ ಇದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲು ಏನು ಮಾಡಬೇಕು:
ಶ್ರೀಸಾಮಾನ್ಯರು ಸಾರ್ವಜನಿಕ ಸಾರಿಗೆಗಳಾದ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋ ಸೇವೆಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಸ್ವಂತ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಸರ್ಕಾರವು ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಬೇಕು. ಮೆಟ್ರೋ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಜೊತೆಗೆ ಬಸ್‌ಗಳ ಸಂಖ್ಯೆಯನ್ನು ಅಧಿಕಗೊಳಿಸಬೇಕು.


Click it and Unblock the Notifications








