Expressway: ಗುಡ್‌ನ್ಯೂಸ್.. ಬೆಂಗಳೂರು-ಹೈದರಾಬಾದ್ ನಡುವಿನ ಎನ್‌ಹೆಚ್-44 ಆಗಲಿದೆ 12-ಪಥದ ಎಕ್ಸ್‌ಪ್ರೆಸ್‌ವೇ!
ದಕ್ಷಿಣ ಭಾರತದ ಪ್ರಮುಖ ನಗರಗಳಾಗಿ ಬೆಂಗಳೂರು (Bengaluru) ಮತ್ತು ಹೈದರಾಬಾದ್ (Hyderabad) ಮುಂಚೂಣಿಯಲ್ಲಿವೆ. ಇಲ್ಲಿ ಹಲವು ಐಟಿ ಕಂಪನಿಗಳಿದ್ದು, ಎರಡು ನಗರಗಳ ನಡುವೆ ಪ್ರತಿದಿನ ಸಾವಿರಾರು ಜನರು ಸಂಚರಿಸುತ್ತಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು-ಹೈದರಾಬಾದ್ ಹೆದ್ದಾರಿ (ಎನ್‌ಹೆಚ್-44)ಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ವರದಿಯಾಗಿದೆ. ನೂತನ ರಸ್ತೆಯಿಂದ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕೈಗಾರಿಕೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಮತ್ತಷ್ಟು ಬೆಳವಣಿಗೆಯಾವ ನಿರೀಕ್ಷೆಯಿದೆ.
ಸದ್ಯ 4 ಪಥಗಳಿರುವ ಬೆಂಗಳೂರು-ಹೈದರಾಬಾದ್ ಹೆದ್ದಾರಿಯನ್ನು 12 ಪಥದ ಎಕ್ಸ್‌ಪ್ರೆಸ್‌ವೇಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸುರುವುದು ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ರಾಯಲಸೀಮಾ ಭಾಗದ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಜನರಿಗೆ ದೊಡ್ಡಮಟ್ಟದಲ್ಲಿ ಪ್ರಯೋಜನವಾಗಲಿದೆ. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆತು ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿವೆ. ಜೊತೆಗೆ ಹೆದ್ದಾರಿ ಅಕ್ಕಪಕ್ಕದ ಭೂಮಿ ಬೆಲೆಯೂ ಹೆಚ್ಚಾಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಬೆಂಗಳೂರು ಹಾಗೂ ಹೈದರಾಬಾದ್ ನಗರಗಳ ಮಧ್ಯೆಯಿರುವ ಈ ರಾಷ್ಟ್ರೀಯ ಹೆದ್ದಾರಿ-44, ಬರೋಬ್ಬರಿ 576 ಕಿ.ಮೀ ಉದ್ದವಿದೆ. ತೆಲಂಗಾಣದಲ್ಲಿ 210 ಕಿ.ಮೀ ಆಂಧ್ರ ಪ್ರದೇಶದಲ್ಲಿ 260 ಕಿ.ಮೀ ಹಾಗೂ ಕರ್ನಾಟಕದಲ್ಲಿ 106 ಕಿ.ಮೀ ಹಾದುಹೋಗುತ್ತದೆ. ಸರಿ ಸುಮಾರು 9 ಗಂಟೆ ಪ್ರಯಾಣಿಸಬೇಕಾಗಿದೆ. ಹೆದ್ದಾರಿಯನ್ನು ವಿಸ್ತರಿಸುವುದರಿಂದ ಈ ಪ್ರಯಾಣದ ಅವಧಿಯು ಸಾಕಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway) ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಇತ್ತೀಚೆಗೆ, ಈ ಹೆದ್ದಾರಿ ಲೋಕಾರ್ಪಣೆ ಸಂಬಂಧ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು. ಬೆಂಗಳೂರಿನಲ್ಲಿ ಮಾತನಾಡಿ, 'ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಡಿಸೆಂಬರ್‌ಗೂ ಮುನ್ನ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ' ಎಂದು ಹೇಳಿದ್ದರು.
ಪ್ರಸ್ತುತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಹಂತದಲ್ಲಿದೆ. ಸರಿ ಸುಮಾರು 258 ಕಿ.ಮೀ. ಉದ್ದವಿರುವ ಈ ಹೆದ್ದಾರಿಯು 3 ರಾಜ್ಯಗಳ 7 ಜಿಲ್ಲೆಗಳನ್ನು ಹಾದುಹೋಗುತ್ತದೆ. ಕರ್ನಾಟಕದ 3 (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ) ಆಂಧ್ರಪ್ರದೇಶದ 1 (ಚಿತ್ತೂರು) ಹಾಗೂ ತಮಿಳುನಾಡಿನ 3 (ವೆಲ್ಲೂರು, ಕಾಂಚೀಪುರಂ, ತಿರುವಳ್ಳೂರು) ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಹೆಚ್‍ಎಐ), ಈ ಎಕ್ಸ್‌ಪ್ರೆಸ್‌ವೇ ನಿರ್ಮಿಸುತ್ತಿದೆ. 4 ಪಥಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಹೊಸ ಹೆದ್ದಾರಿಯು ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು. ಸಂಪೂರ್ಣವಾಗಿ ಕಾಮಗಾರಿ ಮುಗಿದು ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಂಡ ಮೇಲೆ ಬೆಂಗಳೂರಿಂದ ಚೆನ್ನೈಗೆ 2 ಗಂಟೆಗಳಲ್ಲಿ ತಲುಪಲು ಸಾಧ್ಯವಾಗಲಿದೆ ಎನ್ನಲಾಗಿದೆ. ಈಗ 5-6 ಗಂಟೆ ಪ್ರಯಾಣಿಸಬೇಕಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಮೊದಲ 'ಹಸಿರು ಹೆದ್ದಾರಿ' ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ರಸ್ತೆ ನಿರ್ಮಾಣಕ್ಕೆ 33 ಕಿ.ಮೀ. ಅರಣ್ಯ ಜಾಗವನ್ನು ಮಾತ್ರ ಬಳಸಲಾಗುತ್ತಿದ್ದು, 41 ವೆಹಿಕಲ್ ಅಂಡರ್‌ಪಾಸ್‌ಗಳು, 17 ಫ್ಲೈಓವರ್‌ಗಳನ್ನು ಒಳಗೊಂಡಿರಲಿದೆ. ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಲಿದ್ದು, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯಗೊಳ್ಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications