Bengaluru - Mysuru Expressway: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರ ಗಮನಕ್ಕೆ..
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru - Mysuru Expressway)ಯಲ್ಲಿ ಅತಿ ವೇಗದಲ್ಲಿ ಚಲಿಸಿ, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಪತ್ತೆಹಚ್ಚಲು ಒಟ್ಟು 60 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವು ನಿಗದಿಪಡಿಸಿದ್ದಕ್ಕಿಂತ ಗರಿಷ್ಠ ವೇಗದಲ್ಲಿ ಹೋಗುವ ವಾಹನಗಳನ್ನು ಗುರುತಿಸಿ, ಸ್ವಯಂಚಾಲಿತವಾಗಿ ದಂಡದ ಚಲನ್‌ನ್ನು ಕೂಡ ಸಂಬಂಧಪಟ್ಟವರಿಗೆ ರವಾನಿಸುತ್ತವೆ.
ಕರ್ನಾಟಕ ಪೊಲೀಸ್ ಇಲಾಖೆಯ ಸಂಚಾರ ಮತ್ತು ಸುರಕ್ಷತಾ ವಿಭಾಗವು 60 ಕ್ಯಾಮೆರಾಗಳಲ್ಲಿ 48 ಎಎನ್‌ಪಿಆರ್ (ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್) ಕ್ಯಾಮೆರಾಗಳನ್ನು ಎಕ್ಸ್‌ಪ್ರೆಸ್‌ವೇನ ಪ್ರತಿದಿಕ್ಕಿನ 6 ಕಡೆಗಳಲ್ಲಿ ಹಾಕಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ - NHAI), ಇತರೆ ಮೂರು ಕಡೆಗಳಲ್ಲಿ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಿದೆ.

ಈ ಬಗ್ಗೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು, 'ಎಕ್ಸ್‌ಪ್ರೆಸ್‌ವೇಯ ಎರಡು ಪಾಯಿಂಟ್‌ಗಳ ನಡುವೆ ವಾಹನ ಸಂಚರಿಸಲು ತೆಗೆದುಕೊಳ್ಳುವ ಸಮಯವನ್ನು ಕ್ಯಾಮೆರಾಗಳು ಲೆಕ್ಕ ಹಾಕುತ್ತವೆ. ಆ ಸಮಯವು ನಿಗದಿಪಡಿಸಿದ ವೇಗಮೀತಿಗಿಂತ ಕಡಿಮೆಯಿದ್ದರೆ, ಹೆಚ್ಚಿನ ವೇಗದಲ್ಲಿ ವಾಹನವು ಚಲಿಸಿರುವುದನ್ನು ಸೂಚಿಸುತ್ತದೆ. ಜೊತೆಗೆ ಸ್ವಯಂಚಾಲಿತವಾಗಿ ಚಲನ್‌ನ್ನು ಕಳುಹಿಸಲಾಗುತ್ತದೆ' ಎಂದು ಹೇಳಿದ್ದಾರೆ.
ಉದಾಹರಣೆಗೆ ಕ್ಯಾಮೆರಾವನ್ನು 20 ಕಿಲೋಮೀಟರ್ ಅಂತರದಲ್ಲಿ ಹಾಕಿದ್ದು, ಅನುಮತಿಸಲಾದ ಗರಿಷ್ಠ ವೇಗ 100 ಕೆಎಂಪಿಹೆಚ್ ಇದ್ದರೆ, ಆ ದೂರವನ್ನು ಕ್ರಮಿಸಲು ವಾಹನಗಳು ಸುಮಾರು 12 ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬೇಕು. ಆದರೆ, 12 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ವಾಹನವು ಮುಂದಿನ ಕ್ಯಾಮೆರಾವನ್ನು ದಾಟಿದರೆ ಅತಿವೇಗದ ಚಾಲನೆ ಎಂದು ನಿರ್ಣಯಿಸಲಾಗುತ್ತದೆ.

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಓಡಾಟ ನಡೆಸುವ ವಾಹನಗಳಿಗೆ 100 ಕೆಎಂಪಿಹೆಚ್ ಗರಿಷ್ಠ ವೇಗವನ್ನು ನಿಗದಿಪಡಿಸಲಾಗಿದ್ದು, ಕಾರು ಸೇರಿದಂತೆ ಇತರೆ ವಾಹನ ಸವಾರರು ಈ ವೇಗಮಿತಿಯನ್ನು ಮೀರುವಂತಿಲ್ಲ. ಈ ಕ್ಯಾಮೆರಾಗಳು ಅತಿವೇಗದ ಚಾಲನೆ ಮಾತ್ರವಲ್ಲದೆ, ಸೀಟ್ ಬೆಲ್ಟ್ ಹಾಕಿಕೊಳ್ಳದಿರುವುದು, ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ, ಪಥ (ಲೈನ್) ಬದಲಾವಣೆಯ ಉಲ್ಲಂಘನೆ, ದಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಅನಧಿಕೃತ ಪ್ರವೇಶವನ್ನು ಗುರುತಿಸುತ್ತವೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಹ ಕ್ಯಾಮೆರಾಗಳ ಅಳವಡಿಕೆ ನಂತರ, ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತ ಅಂಕಿಅಂಶವನ್ನು ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದೆ. 'ಬೆಂಗಳೂರು-ಮೈಸೂರು ಹೈವೇನಲ್ಲಿ ನಮ್ಮ ಪೊಲೀಸ್ ಕ್ಯಾಮೆರಾಗಳು ತಮ್ಮ ಕೆಲಸ ಮಾಡುತ್ತಿವೆ. 15 ದಿನದಲ್ಲಿ 12192 ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತವಾದರೆ, ಅದನ್ನು ಕುಟುಂಬದವರು ಸಹಿಸಿಕೊಳ್ಳಲು ಸಾಧ್ಯವೇ, ಒಮ್ಮೆ ಯೋಚಿಸಿ' ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಬೆಂಗಳೂರು - ಮೈಸೂರು ರಸ್ತೆಯು ದಕ್ಷಿಣ ಭಾರತದ ಮೊದಲ ಎಕ್ಸ್‌ಪ್ರೆಸ್‌ವೇ ಆಗಿದ್ದು, ಕಳೆದ ವರ್ಷದ ಮಾರ್ಚ್‌ನಲ್ಲಿ 119 ಕಿಮೀ ಉದ್ದದ ಈ ದಶಪಥದ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಇದರಲ್ಲಿ ಆರು ಪಥದ ಎಕ್ಸ್‌ಪ್ರೆಸ್‌ವೇ ಹಾಗೂ ತಲಾ ಎರಡು ಪಥದ ಸರ್ವಿಸ್ ರಸ್ತೆಯಿದ್ದು, ರೂ.8,408 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹೆದ್ದಾರಿಯು ಉದ್ಘಾಟನೆಗೊಂಡ ಕೆಲ ತಿಂಗಳ ಬಳಿಕ, ನಾನಾ ಕಾರಣಗಳಿಗೆ ಸಂಭವಿಸಿದ ಅಪಘಾತಗಳಿಂದಲೂ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








