Bengaluru Mysuru Expressway: ಎಚ್ಚರವಿರಲಿ.. ಹೆದ್ದಾರಿಯಲ್ಲಿ AI ಕ್ಯಾಮೆರಾ ಅಳವಡಿಕೆ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru Mysuru Expressway)ಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದ್ವಿಚಕ್ರ ವಾಹನ, ಆಟೋ ಹಾಗೂ ಟ್ರಾಕ್ಟರ್ ಸಂಚಾರವನ್ನು ನಿಷೇಧಿಸಿದೆ. ಇದೀಗ, ರಾಜ್ಯ ಪೊಲೀಸ್ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದ್ದು, ಹೆದ್ದಾರಿಯಲ್ಲಿ ಕೃತಕ ಬುದ್ದಿಮತ್ತೆ (AI) ಕ್ಯಾಮೆರಾ ಅಳವಡಿಸಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಕಾರ್ಯಪ್ರವೃತರಾಗಿರುವ ಸಂಚಾರಿ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು, ಮಂಗಳವಾರ ಎರಡನೇ ಬಾರಿಗೆ ಹೆದ್ದಾರಿಯನ್ನು ಪರಿಶೀಲಿಸಿದ್ದಾರೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಅವರು, ವಾಹನಗಳ ಅತಿ ವೇಗದ ಚಾಲನೆಯನ್ನು ಪತ್ತೆ ಹಚ್ಚಲು ಪ್ರಾಯೋಗಿಕವಾಗಿ ಕೃತಕ ಬುದ್ದಿಮತ್ತೆ (AI) ಕ್ಯಾಮೆರಾ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

'ಮೈಸೂರು ನಗರದಲ್ಲಿ ಶೀಘ್ರದಲ್ಲೇ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಪರಿಚಯಿಸಲಾಗುವುದು. ಈ ನಿಟ್ಟಿನಲ್ಲಿ ನಾಗರಿಕರ ಯಾವುದೇ ಸಲಹೆಗಳಿಗೆ ಸ್ವಾಗತ ಎಂದಿದ್ದಾರೆ. ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಪೊಲೀಸರ ಕೆಲಸವನ್ನು ಶ್ಲಾಘಿಸಿದ ಅವರು, ಎಕ್ಸ್‌ಪ್ರೆಸ್‌ವೇಯಲ್ಲಿ ಸಾವು - ನೋವನ್ನು ಕಡಿಮೆ ಮಾಡಲು ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಹೇಳಿದ್ದಾರೆ.
ಜುಲೈ 1 ರಿಂದ ಜುಲೈ 24 ರವರೆಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಪಥ ಶಿಸ್ತು (Lane discipline) ಉಲ್ಲಂಘಿಸಿದ್ದಕ್ಕೆ 1000ಕ್ಕೂ ಹೆಚ್ಚು ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಟ್ವೀಟ್ ನಲ್ಲಿ ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ. ಇದಿಷ್ಟೇ ಅಲ್ಲದೆ, ಪದೇ ಪದೇ ಸಂಚಾರಿ ನಿಮಯ ಉಲ್ಲಂಘಿಸುವ 27 ಜನರ ಡ್ರೈವಿಂಗ್ ಲೆಸೆನ್ಸ್ ರದ್ದುಗೊಳಿಸಲು ಶಿಫಾರಸ್ಸು ಮಾಡಲಾಗಿದೆ ಎಂಬ ಮಾಹಿತಿಯನ್ನು ಹೆದ್ದಾರಿ ಪರಿಶೀಲನೆ ವೇಳೆ ನೀಡಿದ್ದಾರೆ.
ಪೊಲೀಸರ ಸತತ ಪರಿಶ್ರಮದಿಂದ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಾವಿನ ಸಂಖ್ಯೆ ಒಂದಕ್ಕಿಗೆ ಇಳಿದಿದೆ. ಜುಲೈ 24 ರವರೆಗೆ 30 ಅಪಘಾತ ಪ್ರಕರಣಗಳು ವರದಿಯಾಗಿ, 3 ಮಂದಿ ಸಾವನ್ನಪ್ಪಿದ್ದಾರೆ. 40 ಮಂದಿ ಗಾಯಗೊಂಡಿದ್ದಾರೆ. ಅದಕ್ಕೂ ಮೊದಲು ಮಾರ್ಚ್ ನಲ್ಲಿ ಉದ್ಘಾಟನೆಗೊಂಡ ಈ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಹಲವು ಅಪಘಾತಗಳಲ್ಲಿ 100ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡು, ಸಾವಿನ ಹೆದ್ದಾರಿಯೆಂದು ಸುದ್ದಿಯಾಗಿತ್ತು.
ಇದರೊಟ್ಟಿಗೆ, ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೂಡ ಮಹತ್ವದ ತೀರ್ಮಾನ ಕೈಗೊಂಡಿದೆ. ಸುರಕ್ಷತೆಯ ಸಲುವಾಗಿ ಈ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ, ಆಟೋ, ಮೋಟಾರ್ ರಹಿತ ವಾಹನಗಳು, ಟ್ರಾಕ್ಟರ್ ಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್ ವಾಹನ ಹಾಗೂ ಕ್ವಾಡ್ರಿ ವಾಹನಗಳ ಸಂಚಾರವನ್ನು ನಿಷೇಧಿಸಿ, ಜುಲೈ 12ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಸ್ಟ್ 1ರಿಂದ ಈ ವಾಹನ ಸಂಚಾರ ನಿರ್ಬಂಧವಿರಲಿದೆ. ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಮೊದಲು ಬೈಕ್ ಸೇರಿದಂತೆ ದ್ವಿಚಕ್ರ ವಾಹನ ಹಾಗೂ ಆಟೋ ಸಂಚಾರಕ್ಕೆ ನಿಷೇಧ ಹೇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಎಕ್ಸ್‌ಪ್ರೆಸ್‌ವೇ ಪರಿಶೀಲನೆಗೆ ಹೆದ್ದಾರಿ ಪ್ರಾಧಿಕಾರ ವಿಶೇಷ ಸಮಿತಿ ರಚಿಸಿತ್ತು.
ಇನ್ನು, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪೊಲೀಸರ ನಿರಂತರ ಪ್ರಯತ್ನದಿಂದ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಸಾವಿನ ಸಂಖ್ಯೆ ಒಂದಕ್ಕಿಗೆ ಇಳಿಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಜೊತೆಯಲ್ಲಿ ಈ ಸಂಖ್ಯೆಯಲ್ಲಿ ಮತ್ತಷ್ಟು ಕಡಿಮೆ ಮಾಡಲು ಕೃತಕ ಬುದ್ದಿಮತ್ತೆ (AI) ಕ್ಯಾಮೆರಾ ಅಳವಡಿಸಲಾಗಿದ್ದು, ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕೆ ತರುವ ವಿಶ್ವಾಸವನ್ನು ಪೊಲೀಸ್ ಇಲಾಖೆ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications