Bangalore-Mysore Expressway: ವೇಗಮಿತಿ ಜಾರಿ, ನಿಯಮ ಮೀರಿದವರ ವಿರುದ್ಧ ಕೇಸ್ ದಾಖಲು
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ (Bangalore Mysore Expressway)ಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮಹ್ವತದ ಹೆಜ್ಜೆ ಇಟ್ಟಿದೆ. ನಿಗದಿತ ವೇಗ ಮಿತಿ ಮೀರಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ ಎಕ್ಸ್‌ಪ್ರೆಸ್‌ವೇಯನ್ನು ಕಳೆದ ಮಂಗಳವಾರ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲಿಸಿದ್ದರು. ಆ ವೇಳೆ, 100 kmph ವೇಗ ಮಿತಿ ದಾಟುವ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದರು. ತಕ್ಷಣ ಕಾರ್ಯಪ್ರವೃತರಾದ ರಾಮನಗರ ಪೊಲೀಸರು, ಜುಲೈ 4ರಿಂದ ಮೂರು ಮೊಬೈಲ್ ಸ್ಪೀಡ್ ರಾಡಾರ್‌ಗಳನ್ನು ನಿಯೋಜಿಸಿದ್ದು, ಒಟ್ಟು 44 ಕೇಸ್ ಹಾಕಿದ್ದಾರೆ.

ಈ ಬಗ್ಗೆ ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದು, 'ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತಿ ವೇಗದ ಚಾಲನೆ ಮಾಡುವವರ ವಿರುದ್ಧ ಸ್ಪೀಡ್ ರಾಡಾರ್ ಗನ್ ಬಳಸಿ, ಪ್ರಕರಣ ದಾಖಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಮನಗರ ಎಸ್ಪಿ ಹಾಗೂ ಅವರ ತಂಡದ ಕಾರ್ಯ ಶ್ಲಾಘನೀಯ. ಜೀವ ಉಳಿಸಲು ಸಂಚಾರ ನಿಯಮ ಪಾಲಿಸಿ. ದಂಡದ ಮೊತ್ತ ಉಳಿಸಲು ಅಲ್ಲ' ಎಂದು ಹೇಳಿದ್ದಾರೆ.
ಮೊಬೈಲ್ ಸ್ಪೀಡ್ ರಾಡಾರ್‌ಗಳನ್ನು ಸದ್ಯ, ರಾಮನಗರ ಜಿಲ್ಲೆಯಲ್ಲಿ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ಮಾತ್ರವೇ ನಿಯೋಜಿಸಲಾಗಿದೆ. ಆದರೆ, ಮಂಡ್ಯ ಹಾಗೂ ಮೈಸೂರು ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಅಲ್ಲಿನ ಪೊಲೀಸರು, ಇನ್ನೂ ಸ್ಪೀಡ್ ರಾಡಾರ್‌ಗಳನ್ನು ಬಳಸುತ್ತಿಲ್ಲ ಎಂದು ವರದಿಯಾಗಿದ್ದು, ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ರಾಮನಗರ ಪೊಲೀಸರು ತೆಗೆದುಕೊಂಡಿರುವ ಕ್ರಮಕ್ಕೆ ಹಲವರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ 118 ಕಿಮೀ ಉದ್ದದ ಬೆಂಗಳೂರು ಮೈಸೂರು ನಡುವಿನ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12ರಂದು ಲೋಕಾರ್ಪಣೆ ಮಾಡಿದ್ದರು. ಉದ್ಘಾಟನೆಯಾದಾಗಿನಿಂದ ಈ ರಸ್ತೆಯಲ್ಲಿ ನಡೆದ ವಿವಿಧ ಅಪಘಾತ ಪ್ರಕರಣಗಳಲ್ಲಿ 100 ಜನರು ಪ್ರಾಣ ಕಳೆದುಕೊಂಡು, 350 ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಲು, ವಾಹನಗಳು ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವುದೇ ಕಾರಣ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ, ಎಡಿಜಿಪಿ ಅಲೋಕ್ ಕುಮಾರ್ ಕಳೆದ ವಾರ ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಿ, ಅಪಘಾತಗಳ ಸಂಖ್ಯೆ ಕಡಿಮೆಗೊಳಿಸಲು ಇರುವ ಮಾರ್ಗಗಳ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು ಎಂಬುದು ಗಮನಾರ್ಹ ಅಂಶವಾಗಿದೆ.

ಇನ್ನು, ಪೊಲೀಸ್ ಇಲಾಖೆಯು, ಈ ದಶಪಥ ಹೆದ್ದಾರಿಯಲ್ಲಿ ಕನಿಷ್ಠ 25% ಅಪಘಾತಗಳ ಸಂಖ್ಯೆ ಕಡಿಮೆ ಮಾಡಬೇಕೆಂಬ ಗುರಿ ಹಾಕಿಕೊಂಡಿದೆ. ಅದರ ಭಾಗವಾಗಿ ರಾಮನಗರ ವ್ಯಾಪ್ತಿಯಲ್ಲಿ ನಿನ್ನೆಯಿಂದ ಮೂರು ಮೊಬೈಲ್ ಸ್ಪೀಡ್ ರಾಡಾರ್ ನಿಯೋಜಿಸಿ, ಒಟ್ಟು 44 ಪ್ರಕರಣ ದಾಖಲಿಸಿರುವುದು. ಇದಿಷ್ಟೇ ಅಲ್ಲದೆ, ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತದ ಪ್ರಮಾಣ ಇಳಿಸಲು ಸ್ಕೈವಾಕ್ ಕಾಮಗಾರಿ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರವು ಸ್ಥಳವನ್ನು ಗುರುತಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications