ಬೆಂಗಳೂರಿಗೆ ಮತ್ತೊಂದು ಕುಖ್ಯಾತಿ.. ಟ್ರಾಫಿಕ್‌ನಲ್ಲಿ ಏಷ್ಯಾದ ಅತ್ಯಂತ ಕೆಟ್ಟ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ!
ಬೆಂಗಳೂರು (Bengaluru) ಐಟಿ ಹಬ್ ಆಗಿದ್ದು, ವೇಗವಾಗಿ ಬೆಳೆಯುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶದ ನಾನಾ ಭಾಗಗಳಿಂದ ಜನರು ಇಲ್ಲಿಗೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ನಿಧಾನಗತಿಯಲ್ಲಿದ್ದು, ವಾಹನಗಳ ಸಂಖ್ಯೆಯು ಅಧಿಕಗೊಂಡಿದೆ. ಸವಾರರಿಗೆ ಟ್ರಾಫಿಕ್ ಎಂಬುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆ, ಬೆಂಗಳೂರು ಮತ್ತೊಂದು ಕುಖ್ಯಾತಿಗೂ ಪಾತ್ರವಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
'ಸ್ಟ್ಯಾಟಿಸ್ಟಾ' ಸಂಸ್ಥೆ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ 'ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ 2023'ರ ವರದಿಯನ್ನು ಪ್ರಕಟಿಸಿದೆ. ಇದರನ್ವಯ ಸಂಚಾರ ದಟ್ಟಣೆಯಲ್ಲಿ ಏಷ್ಯಾದ ಅತ್ಯಂತ ಕೆಟ್ಟ ನಗರಗಳ ಪಟ್ಟಿಯಲ್ಲಿ 'ಬೆಂಗಳೂರು' ಅಗ್ರಸ್ಥಾನದಲ್ಲಿದೆ. ನಗರದಲ್ಲಿ ವಾಹನ ಸವಾರರಿಗೆ 10 ಕಿಲೋಮೀಟರ್ ಕ್ರಮಿಸಲು ಸರಿ ಸುಮಾರು 28 ನಿಮಿಷ 10 ಸೆಕೆಂಡುಗಳು ಬೇಕಾಗುತ್ತದೆ. ಈ ಮೂಲಕ ಮಹಾನಗರಿ ನಿವಾಸಿಗಳು ಹೆಚ್ಚುವರಿಯಾಗಿ ವಾರ್ಷಿಕ 132 ಗಂಟೆಗಳು (ಐದೂವರೆ ದಿನ) ಟ್ರಾಫಿಕ್‌ನಲ್ಲಿಯೇ ಸಮಯ ಕಳೆಯಬೇಕಾಗಿದೆ.

ಟ್ರಾಫಿಕ್‌ನಲ್ಲಿ ಏಷ್ಯಾದ ಅತ್ಯಂತ ಕೆಟ್ಟ ನಗರಗಳ ಪಟ್ಟಿಯಲ್ಲಿ ಭಾರತದ ಮತ್ತೊಂದು ನಗರ ಕೂಡ ಇದ್ದು, ಮಹಾರಾಷ್ಟ್ರದ ಪುಣೆಯಲ್ಲಿಯೂ ವಾಹನ ಸವಾರರು ಟ್ರಾಫಿಕ್‌ನಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬೇಕಾಗಿದೆ. ಇಲ್ಲಿ 10 ಕಿಲೋಮೀಟರ್ ಪ್ರಯಾಣಿಸಲು ಬರೋಬ್ಬರಿ 27 ನಿಮಿಷ 50 ನಿಮಿಷ ಬೇಕಾಗುತ್ತದೆ.
ಮೂರನೇ ಸ್ಥಾನದಲ್ಲಿ ಫಿಲಿಪೈನ್ಸ್ ರಾಜಧಾನಿ ಮನಿಲಾ ಇದೆ. ಈ ನಗರದಲ್ಲಿ ವಾಹನ ಸವಾರರು ಟ್ರಾಫಿಕ್‌ನಲ್ಲಿ 10 ಕಿಲೋಮೀಟರ್ ಕ್ರಮಿಸಲು 27 ನಿಮಿಷ 20 ಸೆಕೆಂಡುಗಳು ಸಮಯಾವಕಾಶ ಬೇಕಾಗುತ್ತದೆ. ತೈವಾನ್‌ನ ತೈಚುಂಗ್ ನಗರ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ 10 ಕಿಲೋಮೀಟರ್ ದೂರ ಪ್ರಯಾಣಿಸಲು 26 ನಿಮಿಷ 50 ಸೆಕೆಂಡುಗಳು ಬೇಕು.

ಪ್ರಪಂಚದ 6 ಖಂಡಗಳು 55 ದೇಶಗಳ 387 ನಗರಗಳನ್ನು ನಿರ್ದಿಷ್ಟ ಮಾನದಂಡಗಳ ಅನ್ವಯ ಅಧ್ಯಯನ ಮಾಡಿ, ಈ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿಯನ್ನು ಸಿದ್ದಪಡಿಸಲಾಗುತ್ತದೆ. ಇದು ಸರಾಸರಿ ಪ್ರಯಾಣದ ಸಮಯ, ಇಂಧನ ವೆಚ್ಚ ಮತ್ತು ಇಂಗಾಲದ (CO2) ಹೊರಸೂಸುವಿಕೆ ಸೇರಿದಂತೆ ಇನ್ನಿತರೇ ಅಂಶಗಳನ್ನು ಒಳಗೊಂಡಿದೆ.
ಬೆಂಗಳೂರಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ದಟ್ಟಣೆ (Traffic) ಸಮಸ್ಯೆ ನಿರ್ವಹಿಸಲು ರಾಜ್ಯ ಸರ್ಕಾರ ಕೂಡ ಶ್ರಮಿಸುತ್ತಿದೆ. ವಿವಿಧ ಭಾಗಗಳಲ್ಲಿ ಮೆಟ್ರೋ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರೊಟ್ಟಿಗೆ ಸುರಂಗ ರಸ್ತೆ (Tunnel Road) ನಿರ್ಮಿಸಲು ಉದ್ದೇಶಿಸಿದೆ. ಅದಕ್ಕೆ ಸಂಬಂಧಿಸಿದಂತೆ ತಯಾರಿಯನ್ನು ಆರಂಭಿಸಿದೆ ಎಂದು ವರದಿಯಾಗಿದೆ.

ಈ ಹಿಂದೆ, 40 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣದ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ಡಿಪಿಆರ್ ಸಿದ್ಧಪಡಿಸಿದೆ ಎಂದು ತಿಳಿದುಬಂದಿತ್ತು. ಈ ಸುರಂಗ ರಸ್ತೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. 18 ಕಿಲೋಮೀಟರ್ ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ನ್ನು ಬೆಸೆಯುತ್ತಿದೆ. ಪೂರ್ವ-ಪಶ್ಚಿಮ ಕಾರಿಡಾರ್ ಕೆ.ಆರ್ ಪುರಂನಿಂದ ಮೈಸೂರು ರಸ್ತೆಯನ್ನು ಸಂಪರ್ಕಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications