ಬೆಂಗಳೂರಿನಲ್ಲಿ ಮಾತ್ರ: ಸ್ಕೂಟರ್ ಓಡಿಸುವಾಗಲೇ ವಿಡಿಯೋ ಕಾನ್ಫರೆನ್ಸ್.. ಸುರಕ್ಷತೆ ಬಗ್ಗೆ ಕಳವಳ!
ಬೆಂಗಳೂರು (Bengaluru) ಐಟಿ - ಬಿಟಿ ಹಬ್ ಆಗಿದ್ದು, ಕರ್ನಾಟಕ ಮಾತ್ರವಲ್ಲದೆ ದೇಶದ ನಾನಾ ಭಾಗಗಳಿಂದಲೂ ಇಲ್ಲಿಗೆ ಹಲವಾರು ಉದ್ಯೋಗ ಅರಸಿ ಬರುತ್ತಾರೆ. ಜನರ ಆಗಮ ಹೆಚ್ಚಳವಾದಂತೆ ವಾಹನಗಳ ಸಂಖ್ಯೆಯೂ ದ್ವಿಗುಣಗೊಂಡಿದ್ದು, ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಸಮಸ್ಯೆಗೆ ನೇರವಾದ ಕಾರಣವಾಗಿದೆ.
ಸದ್ಯ, ವ್ಯಕ್ತಿಯೋರ್ವ ಸ್ಕೂಟರ್ ಓಡಿಸುವಾಗಲೇ ತನ್ನ ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ವಿಡಿಯೋ ಕಾನ್ಫರೆನ್ಸ್ (Video Conference)ಗೆ ಹಾಜರಾಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 'ಪೀಕ್ ಬೆಂಗಳೂರು' ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 'ಬೆಂಗಳೂರು ಆರಂಭಿಕರಿಗಲ್ಲ' ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಈ ವಿಡಿಯೋಗೆ ನೆಟ್ಟಿಗರು ಕೂಡ ತರಹೆವಾರಿಯಾಗಿ ಪ್ರತಿಕ್ರಿಯೆ ನೀಡಿದ್ದು, ಆತ ಹಾಗೂ ರಸ್ತೆಯಲ್ಲಿ ಓಡಾಡುವ ಇತರರ ಸುರಕ್ಷತೆ ಬಗ್ಗೆಯೂ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ, 'ಬ್ರೋ ಅವರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕು. ಅವರಿಗೆ ವಾರಕ್ಕೆ 70 ಗಂಟೆಗಳ ಸಾಲುತ್ತಿಲ್ಲವೇನೋ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ನಾವು ಕೆಲಸ-ಜೀವನದ ಸಮತೋಲನದ ಕುರಿತು ಕೇಳಿದ್ದೇವೆ. ಈಗ ಕೆಲಸ-ಬೈಕ್ ಬ್ಯಾಲೆನ್ಸ್' ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ನೆಟ್ಟಿಗ, 'ವರ್ಕ್ ಫ್ರಮ್ ಹೋಂ (WFH) - ಹೋಂಡಾದಿಂದ ಕೆಲಸ' ಎಂದು ಹೇಳಿದ್ದಾರೆ. ಮತೋರ್ವ ಸಾಮಾಜಿಕ ಜಾಲತಾಣ ಬಳಕೆದಾರ, 'ಈ ಕೆಲಸವನ್ನು ಬಿಟ್ಟು ಬೇರೆ ಕೆಲಸ ಸೇರಿ' ಎಂದು ಸಲಹೆಯನ್ನು ನೀಡಿದ್ದಾರೆ. ಹಾಗೆಯೇ ಇನ್ನೋರ್ವರು, 'ಆತ ಹಾಗೂ ಸುತ್ತಮುತ್ತಲಿನ ಇತರರ ಪ್ರಾಣಕ್ಕೂ ಅಪಾಯವನ್ನುಂಟು ಮಾಡುವುದಕ್ಕಾಗಿ ಆ ವ್ಯಕ್ತಿಯ ಚಾಲನಾ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು' ಎಂದಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಲಿಸುತ್ತಿರುವ ಬೈಕ್‌ನ ಹಿಂದಿನ ಆಸನದಲ್ಲಿ ಕುಳಿತುಕೊಂಡು ಮಹಿಳೆಯೊಬ್ಬರು ಲ್ಯಾಪ್‌ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ (Social Media)ದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದ ಬಹುತೇಕ ನೆಟ್ಟಿಗರು ಮಹಿಳೆಗೆ ಸುರಕ್ಷತೆಯ ಕುರಿತಾಗಿಯೂ ಆತಂಕವನ್ನು ವ್ಯಕ್ತಪಡಿಸಿದ್ದರು.
2023ರ ಫೆಬ್ರವರಿಯಲ್ಲಿ '2022'ರಲ್ಲಿ ಪ್ರಪಂಚದ ಅತ್ಯಂತ ಜನದಟ್ಟಣೆ ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿ ಲಂಡನ್ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿತ್ತು. ಈ ವರದಿ ಪ್ರಕಾರ, ಬೆಂಗಳೂರಿನ ಹೃದಯ ಭಾಗದಲ್ಲಿರುವ ರಸ್ತೆಯಲ್ಲಿ ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ 29 ನಿಮಿಷ 10 ಸೆಕೆಂಡ್‌ಗಳು ಬೇಕಾಗುತ್ತದೆ ಎಂದು ತಿಳಿದುಬಂದಿತ್ತು.
ಬೆಂಗಳೂರಿನಂತಹ ಟ್ರಾಫಿಕ್ ಜಾಮ್ ಹೆಚ್ಚಿರುವ ನಗರಗಳಲ್ಲಿ ಅಲ್ಲಿನ ಜನರು ಮೆಟ್ರೋ ಹಾಗೂ ಸಿಟಿ ಬಸ್ ಬಳಸಿದರೆ ಸ್ವಲ್ಪ ಮಟ್ಟಿಗೆಯಾದರೂ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯುತ್ತದೆ. ಪ್ರತಿನಿತ್ಯ ಸಾರ್ವಜನಿಕ ಸಾರಿಗೆಗಳ ಉಪಯೋಗ ಮಾಡದಿದ್ದರೂ ವಾರಕ್ಕೆ ಎರಡು ದಿನ ಬಳಕೆ ಮಾಡಿದರೂ ಎಷ್ಟೋ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯುತ್ತದೆ. ಇನ್ನು.. ಮನೆಯಿಂದ ಕಚೇರಿಗೆ ಆ ವ್ಯಕ್ತಿ ಕೊಂಚ ಬೇಗ ಹೊರಟ್ಟಿದ್ದರೆ ರಸ್ತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಹಾಜರಾಗುವ ಸಂದರ್ಭ ಬರುತ್ತಿರಲಿಲ್ಲವೇನೋ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications