ವಿಜಯಪುರಕ್ಕೆ ವಂದೇ ಭಾರತ್ ಓಡಿಸಲು ಪ್ರಸ್ತಾವ.. ಪ್ರಯಾಣದ ಅವಧಿ 10 ಗಂಟೆಗೆ ಇಳಿಸಲು ಕ್ರಮ: ಎಂ.ಬಿ.ಪಾಟೀಲ್
ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಮುಕ್ತಾಯಗೊಂಡ ಬಳಿಕ, ಬೆಂಗಳೂರು ಹಾಗೂ ವಿಜಯಪುರ ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಓಡಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ (MB Patil) ಅವರು ಹೇಳಿದ್ದಾರೆ.
ಬೆಂಗಳೂರಿನ ಖನಿಜ ಭವನದಲ್ಲಿ ಶುಕ್ರವಾರ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದ್ದಾರೆ. ಸದ್ಯ ಬೆಂಗಳೂರಿನಿಂದ ವಿಜಯಪುರ ಹಾಗೂ ಬಾಗಲಕೋಟೆಗೆ ರೈಲುಗಳಲ್ಲಿ ಸುಮಾರು 14 ಗಂಟೆ ಪ್ರಯಾಣಿಸಬೇಕಾಗಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಿಂದಾಗಿ, ವಾಯವ್ಯ ಕರ್ನಾಟಕದ ಜನರು ಬೆಂಗಳೂರಿಗೆ ಬಂದುಹೋಗಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ವಿಶೇಷ ರೈಲುಗಳನ್ನು ಓಡಿಸಬೇಕಾದ ಅಗತ್ಯವಿದೆ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಗಿದರೆ ವಿಜಯಪುರ, ಬಾಗಲಕೋಟೆಗೆ ವಂದೇ ಭಾರತ್' ಎಕ್ಸಪ್ರೆಸ್ (Vande Bharat Express) ರೈಲು ಸೇವೆ ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಕೋರಲಾಗುವುದು. ರಾಜ್ಯದಲ್ಲಿ ರೈಲ್ವೆ ಇಲಾಖೆಯೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ 9 ಯೋಜನೆಗಳು ಪ್ರಗತಿಯಲ್ಲಿವೆ. ನಿಗದಿತ ಕಾಲಮಿತಿಯೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುನಿರಾಬಾದ್ - ಮಹಬೂಬ್‌ನಗರ ರೈಲು ಮಾರ್ಗ 2026ರ ಮಾರ್ಚ್, ತುಮಕೂರು - ರಾಯದುರ್ಗ 2027ರ ಡಿಸೆಂಬರ್, ಚಿಕ್ಕಮಗಳೂರು - ಬೇಲೂರು 2026 ಹಾಗೂ ಬಾಗಲಕೋಟೆ - ಕುಡಚಿ ರೈಲು ಮಾರ್ಗ 2027ರೊಳಗೆ ಸಿದ್ಧವಾಗಬೇಕು ಎಂದು ಹೇಳಿದ್ದಾರೆ. ತುಮಕೂರು - ದಾವಣಗೆರೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಜೊತೆಗೆ ಗದಗ - ವಾಡಿ ಮಾರ್ಗದಲ್ಲಿ ತಲೆದೂರಿರುವ ಭೂಸ್ವಾಧೀನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸೆಪ್ಟೆಂಬರ್ ವೇಳೆಗೆ ಬಾಗಲಕೋಟೆ ಹಾಗೂ ಆಲಮಟ್ಟಿ ನಡುವಿನ ಎರಡನೇ ಹಳಿ ನಿರ್ಮಾಣದ ಕಾಮಗಾರಿಯು ಪೂರ್ಣಗೊಳ್ಳಲಿದೆ. ಆಲಮಟ್ಟಿ ಮತ್ತು ವಂಡಾಲ್ ಮಧ್ಯೆ 9 ಕಿಲೋಮೀಟರ್ ರೈಲು ಮಾರ್ಗವನ್ನು 2025ರ ಆಗಸ್ಟ್ ತಿಂಗಳಷ್ಟರಲ್ಲಿ ದ್ವಿಗುಣಗೊಳಿಸಲಾಗುವುದು. 2027ರ ವೇಳೆಗೆ ವಿಜಯಪುರ (Vijayapura) ಮತ್ತು ಬಾಗಲಕೋಟೆ (Bagalkot) ನಡುವೆ ರೈಲು ಮಾರ್ಗ ದ್ವಿಗುಣಗೊಳ್ಳಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಈ ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್ ಮಂಜುಳಾ, ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂ.ಡಿ ಸತೀಶ್, ನೈರುತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ್, ರೈಲ್ವೆಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮೂರ್ತಿ ರಾಜು, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸೇರಿದಂತೆ ಇತರರು ಹಾಜರಿದ್ದರು.
ಇನ್ನು, ಬೆಂಗಳೂರು ಮತ್ತು ಕಲಬುರಗಿ ನಡುವೆಯು ಕೆಲವೇ ದಿನಗಳ ಹಿಂದೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಆರಂಭಿಸಿದೆ. ಈ ರೈಲು ಮಾರ್ಗ ಮಧ್ಯೆ ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್ ಮತ್ತು ರಾಯಚೂರು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. ಇವೆರೆಡು ನಗರಗಳ ನಡುವೆ 543 ಕಿಲೋಮೀಟರ್ ದೂರವನ್ನು ಸುಮಾರು 8.45 ಗಂಟೆಗಳಲ್ಲಿ ಕ್ರಮಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications