ಇನ್ಮುಂದೆ ಶುಕ್ರವಾರ ಕಚೇರಿಗೆ ಈ ವಾಹನಗಳನ್ನು ತರಬೇಡಿ: ಹೀಗೊಂದು ಸರ್ಕಾರಿ ಆದೇಶ
ಪರಿಸರ ಸಂರಕ್ಷತೆಗೆ ಬಿಹಾರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅಲ್ಲಿನ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ (Department of Environment, Forest and Climate Change - DEFCC) ತನ್ನೆಲ್ಲ ಸಿಬ್ಬಂದಿಗೆ ವಾರದಲ್ಲಿ ಒಂದು ದಿನವಾದರೂ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಬಳಕೆ ಮಾಡದಂತೆ ಸೂಚಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಡಿಇಎಎಫ್‌ಸಿಸಿ ಕಾರ್ಯದರ್ಶಿ ಬಂದಾನ ಪ್ರೇಯಶಿ, 'ಇಲಾಖೆಯ ಕಚೇರಿಯ ಕೆಲಸಕ್ಕೆ ಹಾಜರಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಾರಕ್ಕೊಮ್ಮೆಯಾದರೂ ಎಲೆಕ್ಟ್ರಿಕ್ ವೆಹಿಕಲ್ಸ್, ಬೈಸಿಕಲ್ ಅಥವಾ ಆಟೋರಿಕ್ಷಾಗಳನ್ನು ಬಳಸಬೇಕು. ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಒಂದೊಮ್ಮೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬರಲು ಸಾಧ್ಯವಾಗದಿದ್ದರೆ ನಡೆದುಕೊಂಡು ಬರಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಬಂದಾನ ಪ್ರೇಯಶಿ ಅವರು, 'ನಾವು ಕಚೇರಿಯ ಕೆಲಸಕ್ಕೆ ಬರಲು ಇನ್ಮುಂದೆ ವಾರದಲ್ಲಿ ಒಂದು ದಿನ ಪೆಟ್ರೋಲ್, ಡೀಸೆಲ್ ವಾಹನಗಳನ್ನು ಉಪಯೋಗಿಸದಿರಲು ಒಟ್ಟಾಗಿ ನಿರ್ಧರಿಸಿದ್ದೇವೆ. ಇದು, ಆಗಸ್ಟ್ 4 ರಿಂದ ಅಧಿಕೃತವಾಗಿ ಜಾರಿಯಾಗಲಿದ್ದು, ಪ್ರತಿ ಶುಕ್ರವಾರ ಇದನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತವೆ' ಎಂದು ಹೇಳಿದ್ದಾರೆ.
'ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಏರಿಕೆಯಿಂದ ಪರಿಣಾಮಗಳನ್ನು ಈಗಾಗಲೇ ನಾವು ಅನುಭವಿಸುತ್ತಿದ್ದೇವೆ. ನಮಗಾಗಿ ಹಾಗೂ ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸುವುದು ನಮ್ಮ ಅಗತ್ಯ ಕರ್ತವ್ಯವಾಗಿದೆ. ಈ ರೀತಿಯ ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಭೂಮಿಯನ್ನು ಕಾಪಾಡಬೇಕಾಗಿದೆ. ಇದು, ಮುಂದಿನ ತಲೆಮಾರಿನ ಉಜ್ವಲ ಭವಿಷ್ಯಕ್ಕೆ ನೆರವಾಗುತ್ತದೆ. ಪರಿಸರ ಸಂರಕ್ಷಣೆಗೆ ನಿಮ್ಮ ಜವಾಬ್ದಾರಿಯನ್ನು ಅರಿತುಕೊಂಡರೆ, ಅದುವೇ ನಿಜವಾದ ಸಾಧನೆ' ಎಂದು ಬಂದಾನ ಪ್ರೇಯಶಿ ತಿಳಿಸಿದ್ದಾರೆ.
ಈಗಾಗಲೇ ದೇಶದಲ್ಲಿ ಶುದ್ಧ ಪರಿಸರ ನಿರ್ಮಾಣಕ್ಕೆ ಕೇಂದ್ರ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಮಹತ್ವದ ಹೆಜ್ಜೆ ಇಟ್ಟಿವೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶಾದ್ಯಂತ 2070ರ ವೇಳೆಗೆ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ಈ ಬಾರಿಯ ತನ್ನ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೊಡ್ಡಮಟ್ಟದಲ್ಲಿ ಅನುದಾನವನ್ನು ಮೀಸಲಿಟ್ಟಿದೆ.
ವಾಯುಮಾಲಿನ್ಯ ತಡೆಗೆ ಕರ್ನಾಟಕ ಸರ್ಕಾರ ಸಹ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಪರಿಚಯಿಸುತ್ತಿದೆ. ಈಗಾಗಲೇ, ಬೆಂಗಳೂರು ನಗರದ ಹಲವು ಮಾರ್ಗಗಳಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸಿಸುತ್ತಿದೆ. ಕೆಎಸ್‌ಆರ್‌ಟಿಸಿಯ ಹವಾ ನಿಯಂತ್ರಿತ ಪವರ್ ಪ್ಲಸ್ ಎಲೆಕ್ಟ್ರಿಕ್ ಬಸ್ ಗಳು ಮೈಸೂರು ಹಾಗೂ ಶಿವಮೊಗ್ಗ ಒಳಗೊಂಡಂತೆ ವಿವಿಧ ಮಾರ್ಗದಲ್ಲಿ ಸದ್ಯ ಸಂಚರಿಸುತ್ತಿವೆ.
ಇದಿಷ್ಟೇ ಅಲ್ಲದೆ, ಕಳೆದ ಕೆಲವು ದಿನಗಳ ಹಿಂದೆ, ರಾಜ್ಯಕ್ಕೆ ಭೇಟಿ ನೀಡಿದ್ದ ತೈವಾನ್‌ನ 50ಕ್ಕೂ ಹೆಚ್ಚಿನ ಹೂಡಿಕೆದಾರರ ನಿಯೋಗ, ಬಿಎಂಟಿಸಿಯ ಡೀಸೆಲ್ ಚಾಲಿತ ಬಸ್‌ಗಳನ್ನು ಎಲೆಕ್ಟ್ರಿಕ್ (ಇವಿ) ಬಸ್‌ಗಳಾಗಿ ಪರಿವರ್ತಿಸಲು ಆಸಕ್ತಿ ತೋರಿಸಿವೆ ಎಂದು ವರದಿಯಾಗಿತ್ತು. ಈ ಕುರಿತು ಸ್ವತಃ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದರು.
ಇನ್ನು, ಪರಿಸರ ರಕ್ಷಣೆಗೆ ಬಿಹಾರದ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯು ತನ್ನ ಸಿಬ್ಬಂದಿಗೆ ಕಚೇರಿಯ ಕೆಲಸಕ್ಕೆ ಹಾಜರಾಗುವಾಗ ವಾರಕ್ಕೊಮ್ಮೆಯಾದರೂ ಎಲೆಕ್ಟ್ರಿಕ್ ವೆಹಿಕಲ್ಸ್ ಬಳಕೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಕೊಂಚ ಮಟ್ಟಿಗೆ ವಾಯುಮಾಲಿನ್ಯ ಕಡಿಮೆಯಾಗಬಹುದು. ಮುಂಬರುವ ದಿನಗಳಲ್ಲಿ ಎಲ್ಲ ರಾಜ್ಯಗಳು ಈ ಕ್ರಮವನ್ನು ಅನುಸರಿಸಿದರೆ, ತುಂಬಾ ಒಳ್ಳೆಯದು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications