ಸ್ಕೂಟರ್‌ನಲ್ಲಿ ಸೀಟ್ ಬೆಲ್ಟ್ ಹಾಕಿಲ್ಲವೆಂದು ಪೊಲೀಸರಿಂದ 1000 ರೂಪಾಯಿ ದಂಡ!
ದೇಶದಲ್ಲಿ ರಸ್ತೆಗಳಲ್ಲಿ ಪ್ರತಿದಿನ ಪೊಲೀಸರು ಒಂದಿಲ್ಲೊಂದು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ವಾಹನ ಸವಾರರಿಗೆ ದಂಡ ವಿಧಿಸುತ್ತಲೇ ಇರುತ್ತಾರೆ. ಕಾಲ ಬದಲಾಗುತ್ತಿದ್ದು, ಜನರ ಕೆಲಸ ಸುಲಭಗೊಳಿಸಲು ತಂತ್ರಜ್ಞಾನ ಪ್ರಧಾನವಾಗಿದ್ದು, ಅದರ ದೋಷಗಳೇ ಸದ್ಯ ತಲೆನೋವಾಗಿ ಬಿಟ್ಟಿವೆ. ಬಿಹಾರದಲ್ಲೂ ಅಂತಹದೇ ಘಟನೆ ನಡೆದಿದೆ.
ಅಲ್ಲಿನ ದ್ವಿಚಕ್ರ ವಾಹನ ಮಾಲೀಕರೊಬ್ಬರು, ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ರೂ.1000 ದಂಡ ಪಾವತಿಸಿವಂತೆ ಟ್ರಾಫಿಕ್ ಪೊಲೀಸರಿಂದ ರಶೀದಿ (challan) ಪಡೆದಿದ್ದು, ಅದರಿಂದ ಕ್ಷಣಕಾಲ ಗಾಬರಿಗೊಂಡಿದ್ದಾರೆ. ಅಷ್ಟಕ್ಕೂ ಈ ಘಟನೆ 2020 ರಲ್ಲಿ ಸಮತಿಪುರ ಎಂಬಲ್ಲಿ ನಡೆದಿದ್ದು, ಆ ಸಮಯದಲ್ಲಿ ಅವರು ಸ್ಕೂಟಿಯಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ. ಆದರೆ, ಸೀಟ್ ಬೆಲ್ಟ್ ಹಾಕಿಲ್ಲವೆಂದು ದಂಡ ವಿಧಿಸಲಾಗಿದೆ.

ಈ ಬಗ್ಗೆ ಸ್ವತಃ ಸ್ಕೂಟಿ ಮಾಲೀಕ ಕೃಷ್ಣ ಕುಮಾರ್ ಝಾ ಅವರೇ ಪ್ರತಿಕ್ರಿಯೆ ನೀಡಿದ್ದು, 'ನನ್ನ ಹತ್ತಿರ ಸ್ಕೂಟಿ ಇದೆ. ಕಳೆದ ತಿಂಗಳ (ಏಪ್ರಿಲ್) 27ರಂದು ವಾರಣಾಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆಗ ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿಸುವಂತೆ ಮೆಸೇಜ್ ಬಂತು. ಅದರ ವಿವರಗಳನ್ನು ಪರಿಶೀಲಿಸಿದಾಗ ಅಕ್ಟೋಬರ್ 2020ರಲ್ಲಿ ಸೀಟ್‌ಬೆಲ್ಟ್ ಧರಿಸಿರಲಿಲ್ಲ ಅದಕ್ಕಾಗಿ ಫೈನ್ ಹಾಕಲಾಗಿದೆ ಎಂಬ ಅಂಶವನ್ನು ನಮೂದಿಸಲಾಗಿತ್ತು' ಎಂದು ಹೇಳಿದ್ದಾರೆ.
ಮತ್ತೊಂದು ವಿಪರ್ಯಾಸವೆಂದರೆ, ಈಗಾಗಲೇ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ಮೆಸೇಜ್ ನಲ್ಲಿ ಉಲ್ಲೇಖಿಸಲಾಗಿದೆ ಅಂತ ಕೃಷ್ಣ ಕುಮಾರ್ ಹೇಳುತ್ತಾರೆ. ಬಹುಶಃ ಸ್ಕೂಟರ್ ಸಂಖ್ಯೆಯನ್ನು ಕಾರಿನ ಸಂಖ್ಯೆಯೆಂದು ತಪ್ಪಾಗಿ ನಮೂದಿಸಿರುವ ಹಿನ್ನೆಲೆ, ಈ ಎಡವಟ್ಟು ಆಗಿರಬಹುದು. 'ಈ ಮೊದಲು ದಂಡದ ರಶೀದಿಯನ್ನು (challan) ಅಲ್ಲೇ ಸ್ಥಳದಲ್ಲಿ ಬರೆದುಕೊಡಲಾಗುತ್ತಿತ್ತು. ಈಗ ಎಲ್ಲವೂ ಆನ್ ಲೈನ್ ಆಗಿದ್ದು, ಇ-ಚಲನ್‌ಗಳಾಗಿ ಪರಿವರ್ತಿಸಲಾಗುತ್ತಿದ್ದು, ಅಲ್ಲಿ ದೋಷವಾಗಿರಬೇಕು' ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಇಂತಹದ್ದೇ ಘಟನೆಯೊಂದು ಒಡಿಶಾದಲ್ಲಿ ವರದಿಯಾಗಿದೆ. ಅಭಿಷೇಕ್ ಕರ್ ಎಂಬುವವರಿಗೆ ದ್ವಿಚಕ್ರ ವಾಹನದಲ್ಲಿ ಸೀಟ್ ಬೆಲ್ಟ್ ಹಾಕಿಲ್ಲವೆಂದು 1,000 ರೂಪಾಯಿ ಫೈನ್ ವಿಧಿಸಿ, ಇ-ಚಲನ್ ಕಳುಹಿಸಲಾಗಿತ್ತು. ಆದರೆ, ಅದರಲ್ಲಿದ್ದ ಫೋಟೋ ಬೇರೊಬ್ಬ ವ್ಯಕ್ತಿಯದ್ದು ಎಂದು ತಿಳಿದ ಅಭಿಷೇಕ್, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.
ಕೆಲದಿನಗಳ ಹಿಂದೆಯಷ್ಟೇ ಕೇರಳದಲ್ಲೂ ಈ ರೀತಿಯಲ್ಲಿಯೇ ನಡೆದಿದ್ದು, ಮಲಪ್ಪುರಂ ತಿರೂರ್ ಮೂಲದ ಮೊಹಮ್ಮದ್ ಸಾಲಿಹ್ ಎಂಬವವರಿಗೆ KL 55 V 1610 ನೋಂದಣಿ ಸಂಖ್ಯೆಯ ವಾಹನದಲ್ಲಿ ಹೆಲ್ಮೆಟ್ ಹಾಕದೆ ಪ್ರಯಾಣಿಸಿದ್ದಕ್ಕಾಗಿ ರೂ.500 ರೂಪಾಯಿ ದಂಡ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಆದರೆ, ಈ ಸಂಖ್ಯೆಯಲ್ಲಿ ಅವರ ಬಳಿ ಇರುವುದು ಆಲ್ಟೋ ಕಾರು.
ಕೇರಳದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಡಲು ರಾಜ್ಯಾದ್ಯಂತ ಕೃತಕ ಬುದ್ದಿಮತ್ತೆ (AI) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಕೆಲವೊಂದು ತಾಂತ್ರಿಕ ಕಾರಣದಿಂದ ವಾಹನ ಸವಾರರು ಇಂತಹ ತೊಂದರೆ ಎದುರಿಸಬೇಕಾಗಿದೆ. ಈ ಘಟನೆಯಲ್ಲೂ ಅಷ್ಟೇ, ಆ ದಿನ ಸಂಚಾರಿ ನಿಯಮ ಉಲ್ಲಂಘನೆ ನಡೆದಿದೆ ಎಂಬ ಬಾವಪಾಡಿಗೆ ಮೊಹಮ್ಮದ್ ಸಾಲಿಹ್ ಪ್ರಯಾಣಿಸಿರಲಿಲ್ಲ. ಇಬ್ಬರು ಯುವಕರು ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ಹೋಗುತ್ತಿರುವ ಫೋಟೋಗಳೊಂದಿಗೆ ಈ ಕಾರಿನ ಸಂಖ್ಯೆಗೆ ತಪ್ಪಾಗಿ ನೋಟೀಸ್ ಕಳುಹಿಸಲಾಗಿದೆ.
ಇನ್ನು, ತಕ್ಷಣ ಕಾರ್ಯಪ್ರವೃತರಾದ ಸಂಬಂಧಪಟ್ಟ ಅಧಿಕಾರಿಗಳು, ಕಾರು ಮಾಲೀಕನಿಗೆ ದಂಡ ಪಾವತಿಸದಂತೆ ಹೇಳಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ದೇಶಾದ್ಯಂತ ಎಲ್ಲ ರಾಜ್ಯಗಳ ಪೊಲೀಸ್ ಹಾಗೂ ರಸ್ತೆ ಸಾರಿಗೆ ಇಲಾಖೆಗಳು ತಂತ್ರಜ್ಞಾನದ ಮೊರೆ ಹೋಗಿವೆ. ಆದರೆ, ಅವುಗಳಲ್ಲಿರುವ ಕೆಲವೊಂದು ದೋಷಗಳಿಂದ ಆಗಾಗ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಸಮಸ್ಯೆಯನ್ನು ಬಗೆಹರಿಸಬೇಕು.


Click it and Unblock the Notifications