ಆಂಬ್ಯುಲೆನ್ಸ್ ಗೆ ತಡೆಯೊಡ್ಡಿದ ಬಿಜೆಪಿ ಮುಖಂಡ
ಇತ್ತೀಚಿಗೆ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ರ್‍ಯಾಲಿಯೊಂದನ್ನು ಹಮ್ಮಿಕೊಂಡಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ದಿಲೀಪ್ ಘೋಶ್‍ರವರು ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ರ್‍ಯಾಲಿ ಆಯೋಜಿಸಿದ್ದ ಮಾರ್ಗವಾಗಿ ಆಂಬ್ಯುಲೆನ್ಸ್ ಒಂದು ಬಂದಿತ್ತು.

ದಿಲೀಪ್ ಘೋಶ್‍ರವರು ಆಂಬ್ಯುಲೆನ್ಸ್ ಗೆ ದಾರಿ ಬಿಡದೇ ಹೆಚ್ಚು ಹೊತ್ತು ಕಾಯಿಸಿದರು. ಜೊತೆಗೆ ಆಂಬ್ಯುಲೆನ್ಸ್ ಅನ್ನು ಬೇರೆ ಮಾರ್ಗವಾಗಿ ತೆರಳುವಂತೆ ಸೂಚಿಸಿದರು. ಈ ಘಟನೆಗೆ ಸಂಬಂಧಪಟ್ಟ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಮುಖಂಡರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಬೆಂಗಾಲಿ ಭಾಷೆಯಲ್ಲಿ ಮಾತನಾಡಿರುವ ಘೋಶ್‍ರವರು ಆಂಬ್ಯುಲೆನ್ಸ್ ಗೆ ಹಿಂದಕ್ಕೆ ಹೋಗಲು ಹೇಳಿ. ಇದು ಆಂಬ್ಯುಲೆನ್ಸ್ ಹೋಗುವ ದಾರಿಯಲ್ಲ. ಇಲ್ಲಿ ಪಕ್ಷದ ಕಾರ್ಯಕರ್ತರು ಕುಳಿತಿದ್ದಾರೆ ಎಂದು ಹೇಳಿದ್ದಾರೆ. ಭಾರತದಲ್ಲಿರುವ ಸಂಚಾರಿ ನಿಯಮಗಳ ಪ್ರಕಾರ ಆಂಬ್ಯುಲೆನ್ಸ್ ಗಳಿಗೆ ತಕ್ಷಣವೇ ದಾರಿಯನ್ನು ಬಿಡಬೇಕಾಗುತ್ತದೆ.

ಆಂಬ್ಯುಲೆನ್ಸ್ ಗಳಿಗೆ ದಾರಿ ಬಿಡದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಘೋಶ್‍ರವರ ವಿರುದ್ಧ ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಸಾರ್ವಜನಿಕರು ಈ ರೀತಿಯಾಗಿ ವರ್ತಿಸಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳದೇ ಬಿಡುತ್ತಿರಲಿಲ್ಲ.

ಈ ಘಟನೆಗೆ ಘೋಶ್‍ರವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ದೂರಿದ್ದಾರೆ. ಆಂಬ್ಯುಲೆನ್ಸ್ ಅನ್ನು ರ್‍ಯಾಲಿಯನ್ನು ಹಾಳು ಮಾಡುವ ಉದ್ದೇಶದಿಂದ ಬೇಕಂತಲೇ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಆಂಬ್ಯುಲೆನ್ಸ್ ಸಾಗಲು ಹಲವಾರು ಮಾರ್ಗಗಳಿದ್ದರೂ, ಪಕ್ಷದ ಕಾರ್ಯಕರ್ತರು ಸೇರಿದ್ದ ಮಾರ್ಗವಾಗಿಯೇ ಏಕೆ ಕಳುಹಿಸಲಾಯಿತು? ಉಳಿದವರು ಇದೇ ರೀತಿಯಾಗಿ ಆಂಬ್ಯುಲೆನ್ಸ್ ಗಳನ್ನು ಕಳುಹಿಸಿದರೆ ರ್‍ಯಾಲಿ ಹಾಳಾಗುವುದಿಲ್ಲವೇ? ಎಂದು ಹೇಳಿದರು.

ಬಿಜೆಪಿ ಮುಖಂಡರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಮುಖಂಡರಿಗೆ ಈ ರೀತಿಯಾಗಿ ನಡೆದುಕೊಳ್ಳುವುದು ಫ್ಯಾಷನ್ ಆಗಿದ್ದು, ಜನರ ಪ್ರಾಣ ಉಳಿಸುವುದಕ್ಕಿಂತ ರ್‍ಯಾಲಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇತ್ತೀಚಿಗೆ ಕೇರಳದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಿಎಎ ಕಾಯ್ದೆಯ ವಿರುದ್ಧ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಆಂಬ್ಯುಲೆನ್ಸ್ ಒಂದು ಈ ಮಾರ್ಗವಾಗಿ ಬಂದಿತ್ತು. ಪ್ರತಿಭಟನಾಕಾರರು ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಗೆ ಅಲ್ಲಿನ ಮುಖ್ಯಮಂತ್ರಿಯವರನ್ನು ಈ ಘಟನೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ.

ಆಂಬ್ಯುಲೆನ್ಸ್ ಗಳು ಜನರನ್ನು ಆಸ್ಪತ್ರೆಗೆ ಸೇರಿಸಲು ವೇಗವಾಗಿ ಚಲಿಸುವ ಅವಶ್ಯಕತೆಯಿರುತ್ತದೆ. ಈ ಕಾರಣಕ್ಕೆ ಆಂಬ್ಯುಲೆನ್ಸ್ ಗಳು ಸೈರನ್ ಹಾಕಿರುತ್ತವೆ. ಸೈರನ್ ಕೇಳಿಸಿಕೊಳ್ಳುವ ಜನರು ಆಂಬ್ಯುಲೆನ್ಸ್ ಗಳಿಗೆ ದಾರಿ ಮಾಡಿಕೊಡಲಿ ಎಂಬುದು ಇದರ ಹಿಂದಿರುವ ಉದ್ದೇಶ.

ಆದರೆ ಕೆಲವು ಜನರು ಮಾನವೀಯತೆಯನ್ನು ಮರೆತು ಆಂಬ್ಯುಲೆನ್ಸ್ ಗಳಿಗೆ ದಾರಿಯನ್ನು ಮಾಡಿಕೊಡುವುದೇ ಇಲ್ಲ. ಆಂಬ್ಯುಲೆನ್ಸ್ ಗಳು ಸಿಗ್ನಲ್‍ಗಳಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಇದರ ಲಾಭ ಪಡೆಯುವ ವಾಹನ ಚಾಲಕರು ಆಂಬ್ಯುಲೆನ್ಸ್ ಗಳ ಹಿಂದೆಯೇ ಹೋಗುತ್ತಾರೆ.

ಆಂಬ್ಯುಲೆನ್ಸ್ ಗಳು ತಮ್ಮ ಹಿಂದೆ ಬಂದರೆ ಪಕ್ಕಕ್ಕೆ ಸರಿದು ಅವುಗಳಿಗೆ ದಾರಿ ಮಾಡಿಕೊಡಿ, ಇದರಿಂದಾಗಿ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಆಸ್ಪತೆಗೆ ತಲುಪಿ, ಆಂಬ್ಯುಲೆನ್ಸ್ ನಲ್ಲಿರುವವರ ಪ್ರಾಣ ಉಳಿಸಬಹುದು.


Click it and Unblock the Notifications