BMTC: ಶೀಘ್ರ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಎಸಿ ಬಸ್‌ಗಳು, ಹೆಚ್ಚಾಗಲಿದೆ ಬೆಂಗಳೂರಿನ ಅಂದ..!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ - BMTC) ತನ್ನ ಪ್ರಯಾಣಿಕರಿಗೆ ಶೀಘ್ರದಲ್ಲಿಯೇ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲಿದೆ. ನಗರದ ರಸ್ತೆಯಿಂದ ಕಣ್ಮರೆಯಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳನ್ನು ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲು ಬಹಳಷ್ಟು ತಯಾರಿಯನ್ನು ನಡೆಸುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಡಬಲ್ ಡೆಕ್ಕರ್ ಬಸ್‌ಗಳಿಗೆ ಸಂಬಂಧಿಸಿದ ಟೆಂಡರ್‌ನ್ನು ಬಿಎಂಟಿಸಿ ವಾರದೊಳಗೆ ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ. ಫೆಬ್ರವರಿಯಲ್ಲಿ ನೂತನ 10 ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಎಸಿ ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದ (Gross Cost Contract - GCC) ಮಾದರಿಯಲ್ಲಿ ಪಡೆಯಲು ಬಿಎಂಟಿಸಿ ಟೆಂಡರ್ ಆಹ್ವಾನಿಸಿತ್ತು. ಅದರ ಕಡೆಯ ದಿನಾಂಕವು ಮುಗಿದಿದ್ದು, ಸದ್ಯದಲ್ಲಿಯೇ ಬಸ್‌ಗಳನ್ನು ಪೂರೈಸಲು ಕಂಪನಿಯನ್ನು ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ.

ಬಿಎಂಟಿಸಿ ಹೊಸ ಡಬಲ್ ಡೆಕ್ಕರ್ ಬಸ್‌ಗಳನ್ನು ಎಲ್ಲ ಕಡೆ ಓಡಿಸುವುದಿಲ್ಲ. ವಿವಿಧ ಕಾರಣಗಳಿಗೆ ಕೆಲವು ಆಯ್ದ ಮಾರ್ಗದಲ್ಲಿ ಮಾತ್ರ ಬಿಡಲು ಯೋಜಿಸಿದೆ. ಪ್ರಮುಖವಾಗಿ ಮೆಜೆಸ್ಟಿಕ್‌ನಿಂದ (ಕೆಂಪೇಗೌಡ ಬಸ್ ನಿಲ್ದಾಣ) ಶಿವಾಜಿನಗರ, ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಮತ್ತು ವಿಜಯನಗರದಿಂದ ಕಲಾಸಿಪಾಳ್ಯ ಮಾರ್ಗವಾಗಿ ಸಂಚರಿಸುವ ಸಾಧ್ಯತೆಯಿದೆ. ಇವುಗಳ ನಿರ್ವಹಣೆಯನ್ನು ಸುಭಾಷ್‌ನಗರ ಡಿಪೋದಲ್ಲಿ ಮಾಡಲಾಗುತ್ತದೆ ಎನ್ನಲಾಗಿದೆ.
ಈ ಮೊದಲು ಬಿಎಂಟಿಸಿ (BMTC) ಡಬಲ್ ಡೆಕ್ಕರ್ ಬಸ್‌ಗಳನ್ನು ನೇರವಾಗಿ ಕೊಂಡುಕೊಳ್ಳಲು ಆಲೋಚಿಸಿತ್ತು. ಆದರೆ, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಜಿಸಿಸಿ ಮಾದರಿಯಲ್ಲಿ ಬಸ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಹೊಸ ಟೆಂಡರ್ ಕರೆದಿತ್ತು. ಮೂಲಗಳ ಪ್ರಕಾರ, ಈ ಜಿಸಿಸಿ ಮಾದರಿಯಲ್ಲಿ ಪ್ರತಿ ಕಿಲೋಮೀಟರ್ ಆಧಾರದ ಮೇಲೆ ಬಸ್ ಸೇವೆ ಒದಗಿಸುವ ಖಾಸಗಿ ಸಂಸ್ಥೆಗೆ ಬಿಎಂಟಿಸಿ ಮಾಸಿಕ ಇಂತಿಷ್ಟು ಹಣವನ್ನು ಪವತಿಸಬೇಕಾಗುತ್ತದೆ.

ಹೊಸ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳು 65 ಆಸನಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದ್ದು, ಸಾರ್ವಜನಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದು. 90ರ ದಶಕದಲ್ಲಿ ಬಿಎಂಟಿಸಿ ಶಿವಾಜಿನಗರ, ಜಯನಗರ, ಎಂಜಿ ರಸ್ತೆ ಮತ್ತು ಸಿಟಿ ಮಾರ್ಕೆಟ್‌ಗಳಿಗೆ ಡಬಲ್ ಡೆಕ್ಕರ್ ಬಸ್‌ಗಳನ್ನು ಓಡಿಸುತ್ತಿತ್ತು. ಕಡೆಯದಾಗಿ 2014 ರವರೆಗೆ ಈ ಬಸ್‌ಗಳು ನೋಡಲು ಸಿಕ್ಕವು. ಆ ಬಳಿಕ ನಿಧಾನವಾಗಿ ಕಣ್ಮರೆಯಾದವು.
ಕಳೆದ ತಿಂಗಳು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ನಲ್ಲಿ ಬಿಎಂಟಿಸಿಗೆ ಭರಪೂರ ಕೊಡುಗೆಯನ್ನು ಘೋಷಿಸಿದ್ದರು. ಮುಂದಿನ ದಿನಗಳಲ್ಲಿ 1,334 ಹೊಸ ಎಲೆಕ್ಟ್ರಿಕ್ ಬಸ್, 820 ಬಿಎಸ್-6 ಆಧಾರಿತ ಡೀಸೆಲ್ ಬಸ್‌ಗಳನ್ನು ಪರಿಚಯಿಸಲಾಗುವುದು. ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಅದಕ್ಕಾಗಿ ವೆಹಿಕಲ್ ಟ್ರ್ಯಾಕಿಂಗ್ ಹೊಂದಿರುವ ಮೊಬೈಲ್ ಆಪ್ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದರು.
ಇನ್ನು, ಬಿಎಂಟಿಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಎಸಿ ಬಸ್ (Double decker AC buses)ಗಳನ್ನು ಕಾರ್ಯಾಚರಣೆಗೆ ನಿಯೋಜಿಸುವುದರಿಂದ ಬೆಂಗಳೂರಿನ ಅಂದ ಮತ್ತಷ್ಟು ಹೆಚ್ಚಾಗುತ್ತದೆ. ಜೊತೆಗೆ ಪ್ರಯಾಣಿಕರಿಗೂ ತುಂಬಾ ಅನುಕೂಲವಾಗುತ್ತದೆ. 90 ದಶಕದಲ್ಲಿ ಈ ಬಸ್‌ಗಳಲ್ಲಿ ಓಡಾಟ ನಡೆಸಿದ್ದವರೂ ಮತ್ತೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಲು ಸಾಧ್ಯವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications