BMTC: ಮಹಾದೇವನ ಭಕ್ತರಿಗೆ ಸಿಹಿಸುದ್ದಿ.. 500 ರೂಪಾಯಿಯಲ್ಲಿ ಪ್ರವಾಸ, ಎಲ್ಲಿಗೆ?
ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್‌ಗೆ ವಾರಾಂತ್ಯದ ದಿನಗಳಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಸದ್ಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ - BMTC) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಕಡಿಮೆ ದರದಲ್ಲಿ ಹೊಸ ಟೂರ್ ಪ್ಯಾಕೇಜ್‌ನ್ನು ಘೋಷಣೆ ಮಾಡಿದೆ.
ಈ ಬಗ್ಗೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದೆ. ಚಿಕ್ಕಬಳ್ಳಾಪುರ (Chikkaballapur) ಹಾಗೂ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ತೆರಳುವವರ ಅನುಕೂಲಕ್ಕಾಗಿ, ಮಾರ್ಚ್ 8ರಿಂದ ಸಾರ್ವಜನಿಕ ರಜಾದಿನ (Public Holidays) ಮತ್ತು ವಾರಾಂತ್ಯ ದಿನಗಳಲ್ಲಿ 'ಇಶಾ ಫೌಂಡೇಶನ್' ಹೆಸರಿನಲ್ಲಿ ಟೂರ್ ಪ್ಯಾಕೇಜ್‌ನ್ನು ಪರಿಚಯಿಸಿದ್ದು, ಹವಾ ನಿಯಂತ್ರಿತ (ಎಸಿ) ಬಸ್‌ನಲ್ಲಿ ಸೇವೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ದಿಂದ ಮಧ್ಯಾಹ್ನ 12 ಗಂಟೆಗೆ ಹೊರಡುವ ಎಸಿ ಬಸ್, ಅದೇ ದಿನ ರಾತ್ರಿ 9:30ಕ್ಕೆ ಬೆಂಗಳೂರಿಗೆ ಹಿಂದಿರುಗುತ್ತದೆ. ಪ್ರಯಾಣಿಕರನ್ನು ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇಗುಲ, ಸರ್ ಎಂ.ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಮತ್ತು ಸಮಾಧಿ ಸ್ಥಳ, ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಇಶಾ ಫೌಂಡೇಶನ್‌ಗೆ ಕರೆದುಕೊಂಡು ಹೋಗಲಾಗುತ್ತದೆ.
ಈ ಟೂರ್ ಪ್ಯಾಕೇಜ್‌ಗೆ ರೂ.500 ಟಿಕೆಟ್ ದರವನ್ನು ನಿಗದಿಪಡಿಸಲಾಗಿದ್ದು, ಎಲ್ಲ ಸ್ಥಳಗಳಿಗೆ ಒಂದು ದಿನದಲ್ಲಿ ಒಂದು ಬಸ್‌ನಲ್ಲಿ ಮಾತ್ರ ಭೇಟಿ ನೀಡಬಹುದು. ಚಿಕ್ಕಬಳ್ಳಾಪುರದಲ್ಲಿರುವ ಇಶಾ ಫೌಂಡೇಶನ್‌ನಲ್ಲಿ 112 ಅಡಿಗಳ ಆದಿ ಯೋಗಿ ಪ್ರತಿಮೆಯನ್ನು ಜನವರಿ 15, 2023 ರಂದು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅನಾವರಣಗೊಳಿಸಿದ್ದರು. ಇದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿರುವ ಪ್ರತಿಮೆಯ ಪ್ರತಿರೂಪವಾಗಿದೆ.

ಬೆಂಗಳೂರಿನ ಜನರಿಗೆ ಬಿಎಂಟಿಸಿ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಅನುಕ್ಕೂಲಕ್ಕಾಗಿ ಶಿವಾಜಿ ನಗರ, ಆರ್.ಟಿ.ನಗರ, ಹೆಬ್ಬಾಳ, ದಾಸರಹಳ್ಳಿ ಮಾರ್ಗವಾಗಿ ಶ್ರೀರಾಂಪುರಕ್ಕೆ ನೂತನ ಮಾರ್ಗ ಸಂಖ್ಯೆ 286-ಸಿ ಅನ್ನು ಮಾರ್ಚ್ 5ರಂದು ಪರಿಚಯಿಸಿದೆ. ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವಾಗ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ, ಮಾರ್ಚ್ 22ರವರೆಗೆ ಬಿಎಂಟಿಸಿಯ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಸಬಹುದು.
ಈಚೆಗೆ ಬಿಎಂಟಿಸಿ ನಗರದ 40 ಮೆಟ್ರೋ ನಿಲ್ದಾಣದಲ್ಲಿ ಫೀಡರ್ ಬಸ್‌ಗಳ ವೇಳಾಪಟ್ಟಿ ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸಲು ಕ್ಯೂಆರ್ ಕೋಡ್‌ನ್ನು ಸಹ ಪರಿಚಯಿಸಿತ್ತು. ಫೆಬ್ರವರಿ 19 ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಫಲಕ (ಬೋರ್ಡ್) ಅಳವಡಿಸಲಾಗಿದ್ದು, ಪ್ರತಿದಿನ 2000 ರಿಂದ 3000 ಪ್ರಯಾಣಿಕರು ಸ್ಕ್ಯಾನ್ ಮಾಡಿ, ಫೀಡರ್ ಬಸ್‌ಗಳ ಕುರಿತ ವಿವರವನ್ನು ಪಡೆಯುತ್ತಿದ್ದಾರೆ ಎಂದು ಬಿಎಂಟಿಸಿ ಹೇಳಿತ್ತು.

ಬಿಎಂಟಿಸಿ (BMTC) 43 ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸಲು 46 ಮಾರ್ಗಗಳಲ್ಲಿ 158 ಫೀಡರ್ ಬಸ್‌ಗಳನ್ನು ಓಡಿಸುತ್ತಿದೆ. ಪ್ರತಿದಿನ 90 ಸಾವಿರದಿಂದ 1 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವನ್ನು ಕಲ್ಪಿಸಲು ನಿಗಮವು 300 ಹೊಸ ಫೀಡರ್ ಬಸ್‌ಗಳನ್ನು ಬಿಡುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications