5 ದಿನಗಳಾಗಿವೆ, ಈ BMW ನಿಮ್ಮದೇ? ಅಲ್ಲೇ ಬಿಸಾಡಿ ಪರವಾಗಿಲ್ಲ ಎಂದ ಮಾಲಿಕ: ದಿಗ್ಬ್ರಮೆಗೊಂಡ ಪೊಲೀಸರು!
ಕೇರಳದ ಕೋಝಿಕ್ಕೋಡ್‌ನಲ್ಲಿ BMW 5-ಸಿರೀಸ್ ಮಾಲೀಕರೊಬ್ಬರು ತಮ್ಮ ಕಾರನ್ನು ಫುಟ್‌ಪಾತ್‌ನಲ್ಲಿ ಬಿಟ್ಟುಹೋದ ಘಟನೆ ನಡೆದಿದೆ. ಈ ಬಗ್ಗೆ ಅಲ್ಲಿನ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಮಾಲೀಕ ತನ್ನ ಬಳಿ ಸಾಕಷ್ಟು ಕಾರುಗಳಿವೆ. ಆ ಬಿಎಂಡಬ್ಲ್ಯು ನನಗೆ ಬೇಕಿಲ್ಲ, ಅಲ್ಲೇ ಬಿಡಿ ಎಂದು ಹೇಳಿ ಪೊಲೀಸರಿಗೆ ಷಾಕ್ ನೀಡಿದ್ದಾನೆ.
ಕೋಝಿಕ್ಕೋಡ್‌ನ ಕುನ್ನಮಂಗಲಂ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ, ಈ ಐಷಾರಾಮಿ ಸೆಡಾನ್ ಮಾಲೀಕರು ಕಾರನ್ನು ರಸ್ತೆಬದಿಯಲ್ಲಿ ಬಿಟ್ಟು 5 ದಿನಗಳು ಕಳೆದರೂ ಹಿಂತಿರುಗಿಲ್ಲ. ಈ ಕಾರು ನಿಲ್ಲಿಸಿರುವ ಜಾಗದಲ್ಲಿ ಒಂದೆರಡು ಅಂಗಡಿಗಳಿದ್ದು, ಅಲ್ಲಿಗೆ ಭೇಟಿ ನೀಡುವವರಿಗೆ ನಿರ್ಬಂಧಿಸಿದಂತಾಗಿದೆ. ಅಂಗಡಿಗೆ ಬರುವ ಗ್ರಾಹಕರು ಆಗಾಗ್ಗೆ ಹಾಗೆ ಮಾಡುತ್ತಾರೆ ಎಂದುಕೊಂಡ ಮಾಲೀಕ ಮೊದಲೆರಡು ದಿನ ಸುಮ್ಮನಿದ್ದರು.

ಐದು ದಿನ ಕಳೆದರು ಚಾಲಕ ಹಿಂತಿರುಗಿ ಬಾರದೇ ಇದ್ದುದರಿಂದ ಅಂಗಡಿ ಮಾಲೀಕನಿಗೆ ಅನುಮಾನ ಬಂದಿದೆ. ಅಲ್ಲದೇ ಕಾರು ಇತರ ರಸ್ತೆ ಬಳಕೆದಾರರಿಗೆ ಹಾಗೂ ಅಂಗಡಿ ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಹಾಗಾಗಿ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ಗಂಭೀರವೆಂದು ತಿಳಿದ ಪೊಲೀಸರು ಕಾರನ್ನು ಹೊತ್ತೊಯ್ಯಲು ಟೋವ್ ಟ್ರಕ್ ಅನ್ನು ಸಹ ಸ್ಥಳಕ್ಕೆ ತಂದಿದ್ದರಾದರೂ ಕಾರಣಾಂತರಗಳಿಂದ ಕ್ರಮಕ್ಕೆ ಮುಂದಾಗಿಲ್ಲ.
ನಮ್ಮ ಪ್ರಕಾರ ಇದು ದುಬಾರಿ ಕಾರಾಗಿದ್ದರಿಂದ ದೊಡ್ಡ ವ್ಯಕ್ತಿಗಳ ಕಾರಾಗಿರಬಹುದು ಎಂದು ಪೊಲೀಸರು ಹಿಂದೇಟು ಹಾಕಿರಬಹುದು. ನಂತರ ಪೊಲೀಸರು ಕಾರಿನ ಮಾಲೀಕನನ್ನು ಸಂಪರ್ಕಿಸಲು ಪ್ರಯತ್ನಿಸಿ ಆತನಿಂದ ಬಂದ ಉತ್ತರ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ನನ್ನ ಗ್ಯಾರೇಜ್‌ನಲ್ಲಿ ಇನ್ನೂ ಹಲವು ಕಾರುಗಳಿವೆ, ಈ ಕಾರಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಾರಿನ ಮಾಲೀಕ ಪೊಲೀಸರಿಗೆ ಹೇಳಿದ್ದಾನೆ.

ಅಂಗಡಿ ಮಾಲೀಕನಿಗೆ ಭಯ: ಅಂಗಡಿ ಮಾಲೀಕನಿಗೆ ಕಾರಿನಲ್ಲಿರುವ ಸಾಮಾನುಗಳ ಬಗ್ಗೆ ಭಯವಿದ್ದು, ಕಾರನ್ನು ಅಪರಾಧಿಗಳು ಕಳ್ಳಸಾಗಣೆ ಮಾಡಲು ಬಳಸುತ್ತಿದ್ದಾರೆಯೇ ಎಂದು ಆತಂಕಗೊಂಡಿದ್ದರು. ಹಾಗಾಗಿ ಕಾರಿನ ಮುಂಭಾಗದ ವಿಂಡ್‌ಶೀಲ್ಡ್ ಮೇಲೆ ಅಂಗಡಿ ಮಾಲೀಕ ಬ್ಯಾನರ್‌ಗಳನ್ನು ಹಾಕಿದ್ದಾರೆ. ಕಾರಿನ ಬಗ್ಗೆ ವಿವರವಾಗಿ ಬರೆದು ಗ್ರಾಹಕರಿಗೆ ಕಾರು ಅಡ್ಡಿಪಡಿಸಿ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಂಗಡಿ ಮಾಲೀಕ ಬ್ಯಾನರ್ ಹಾಕಿದ್ದಾರೆ.
ಕಾರು ಮಾಲೀಕ ಮತ್ತೆ ಬಂದಿದ್ದ!: ಈ ಕಾರಿನ ಮಾಲೀಕ ಕಾರನ್ನು ನಿಲ್ಲಿಸಿದ ಸ್ಥಳಕ್ಕೆ ಮತ್ತೆ ಬಂದಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆತ ಮುಂಜಾನೆ ಯಾರೂ ಇಲ್ಲದ ಸಮಯದಲ್ಲಿ ಬಂದು ಕಾರಿನಲ್ಲಿದ್ದ ತನ್ನ ವಸ್ತುಗಳನ್ನು ತೆಗೆದುಕೊಂಡು ಪುನಾಃ ಕಾರನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಈ ಪ್ರದೇಶದಲ್ಲಿನ ಅಂಗಡಿ ಮಾಲೀಕರೊಂದಿಗಿನ ಜಗಳವನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಹಾರ್ನ್ ಮಾಡಿದ್ದಕ್ಕೆ ಬಿಟ್ಟು ಹೋದ: ವೀಡಿಯೊದಲ್ಲಿ ಉಲ್ಲೇಖಿಸಲಾದ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಮಾಲೀಕ ತನ್ನ ಕಾರಿನ ಹಿಂದೆ ಇದ್ದ ಇತರ ಕಾರುಗಳು ಹಾರ್ನ್ ಮಾಡಿದ್ದರಿಂದ ಸಿಟ್ಟಿಗೆದ್ದರು, ಆದ್ದರಿಂದ ಕಾರನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಇದನ್ನು ಪರಿಶೀಲಿಸುತ್ತಿದ್ದು, ವ್ಯಕ್ತಿಯ ಮಾನಸಿಕ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇಲ್ಲಿ ಕಾಣಸಿಗುವ ಕಾರು ದೆಹಲಿಯಲ್ಲಿ ನೋಂದಣಿ ಮಾಡಿರುವುದನ್ನು ನಾವು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಮಾಲೀಕರು ಈ ಬಳಸಿದ BMW 5-ಸರಣಿಯನ್ನು ಅತ್ಯಂತ ಅಗ್ಗದ ಬೆಲೆಗೆ ಪಡೆದಂತೆ ತೋರುತ್ತಿದೆ. ಇತ್ತೀಚೆಗೆ Mercedes-Benz, BMW, ಅಥವಾ Audi ನಂತಹ ಬ್ರ್ಯಾಂಡ್‌ಗಳಿಂದ ಐಷಾರಾಮಿ ಕಾರುಗಳು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುತ್ತವೆ.
ಇದಕ್ಕೂ ಕಾರಣವಿದೆ ದೆಹಲಿ NCR ನಲ್ಲಿನ ಡೀಸೆಲ್ ಕಾರುಗಳು 10 ವರ್ಷಗಳ ಮೇಲೆ ಓಡಿಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಹಾಗಾಗಿ ದೆಹಲಿಯಲ್ಲಿ ನೋಂದಿಣಿಯಾಗಿರುವ ಕಾರುಗಳು ಇತರ ರಾಜ್ಯಗಳಲ್ಲಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ತುಂಬಾ ಅಗ್ಗವಾಗಿ ಮಾರಾಟವಾಗುತ್ತಿವೆ. ಇಲ್ಲೂ ನಾವು ಕಾಣುವುದು ದೆಹಲಿ ನೋಂದಣಿಯ ಕಾರಾಗಿರುವುದರಿಂದ ಮಾಲೀಕ ಬೇಕಾಬಿಟ್ಟಿಯಾಗಿ ವರ್ತಿಸಿದ್ದಾನೆ ಎಂಬುದು ನಮ್ಮ ಅಭಿಪ್ರಾಯ. ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications