ಯೆಮನ್, ನೇಪಾಳದಲ್ಲಿ ಭಾರತದ ಹೆಮ್ಮೆಯಾದ ಬೋಯಿಂಗ್ ವಿಮಾನ
ಇದೀಗಷ್ಟೇ ನೇಪಾಳದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಯೆಮನ್ ನಲ್ಲಿ ಸೃಷ್ಟಿಯಾಗಿರುವ ಕಲಹದಲ್ಲಿ ಸಾವಿರಾರು ಮಂದಿ ಭಾರತೀಯರು ಪ್ರಾಣಪಾಯದಿಂದ ಪಾರಾಗಿದ್ದರು.
ಈ ಎರಡೂ ಅತ್ಯಂತ ಕಠಿಣ ಹಾಗೂ ಸವಾಲಿನ ಪರಿಸ್ಥಿತಿಯಲ್ಲಿ ದೇಶದ ಹೆಮ್ಮೆಯಾಗಿ ಹೊರಹೊಮ್ಮಿದ್ದ ಭಾರತೀಯ ವಾಯುಪಡೆಯ ಬೋಯಿಂಗ್ ವಿಮಾನವು ತ್ವರಿತ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ವಾಯುಪಡೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಬೋಯಿಂಗ್ ವಿಮಾನದ ಯಾವ ದೇಶದಿಂದ ಖರೀದಿಸಲಾಗಿತ್ತು? ಇದರ ವಿಶೇಷತೆಗಳನೇನು? ಎಂಬಿತ್ಯಾದಿ ಕುತೂಹಲ ವಿಚಾರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಕೊಡಲಿದ್ದೇವೆ.

ನೇಪಾಳ ಸೇರಿದಂತೆ ಯೆಮನ್ ನಲ್ಲಿ ಮಿಲಟರಿ ಸಾರಿಗೆ ವಿಮಾನವಾಗಿ ಸಿ-17 ಬೋಯಿಂಗ್ ವಿಮಾನ ಭಾರತೀಯ ವಾಯುಪಡೆಗೆ (ಐಎಎಪ್) ತ್ವರಿತ ವೇಗದಲ್ಲಿ ಮಾನವೀಯ ನೆರವು ಕಾರ್ಯಾಚರಣೆಯನ್ನು ನಡೆಸಲು ನೆರವಾಗಿತ್ತು.

ಅಂದ ಹಾಗೆ 2011ರಲ್ಲಿ ಅಮೆರಿಕದಿಂದ 10 ಬೋಯಿಂಗ್ ವಿಮಾನಗಳ ಖರೀದಿಗಾಗಿ ಭಾರತ ಆರ್ಡರ್ ನೀಡಿತ್ತು. ಇದರಂತೆ ಭಾರತೀಯ ವಾಯುಪಡೆಯನ್ನು 2013 ಹಾಗೂ 2014ರಲ್ಲಿ ಬೋಯಿಂಗ್ ವಿಮಾನ ಬಂದು ಸೇರಿತ್ತು. ಅಂದಿನ ಒಪ್ಪಂದದಂತೆ ಭಾರತಕ್ಕಿನ್ನು ಆರು ಇಂತಹ ಬೋಯಿಂಗ್ ವಿಮಾನಗಳನ್ನು ಖರೀದಿಸಬಹುದಾಗಿದೆ.

1980ರಿಂದ 1990ರ ದಶಕದ ಆರಂಭಿಕ ಕಾಲಘಟ್ಟದಲ್ಲಿ ಅಮೆರಿಕ ವಾಯುಸೇನೆಗಾಗಿ ಬೋಯಿಂಗ್ ಸಿ-17 ಗ್ಲೋಬ್ ಮಾಸ್ಟರ್ III ವಿಮಾನಗಳನ್ನು ಮೆಕ್ ಡೋನಾಲ್ಡ್ ಡಗ್ಲಾಸ್ ಸಂಸ್ಥೆಯು ಅಭಿವೃದ್ಧಿಪಡಿಸಿತ್ತು.

ಇದನ್ನು ಪ್ರಮುಖವಾಗಿಯೂ ವಾಯು ಸೇನೆಯ ಕಾರ್ಯಾಚರಣೆಯ ವೇಳೆ ಮಿಲಟರಿ ಹಾಗೂ ಸಾಮಾಗ್ರಿಗಳ ಸಾಗಾಣೆಗಾಗಿ ಕಾರ್ಗೊ ವಿಮಾನಗಳಾಗಿ ಬಳಕೆ ಮಾಡಲಾಗುತ್ತದೆ. ತುರ್ತು ವೈದ್ಯಕೀಯ ನೆಲೆ ಸ್ಥಾಪಿಸಲು ಇದು ನಿಸ್ಸೀಮವೆನಿಸಿದೆ.

ಅಮೆರಿಕ ಹಾಗೂ ಭಾರತೀಯ ವಾಯುಪಡೆಯಲ್ಲದೆ ಬ್ರಿಟನ್, ಆಸ್ಟ್ರೇಲಿಯಾ, ಖತಾರ್, ಕೆನೆಡಾ, ಯುಎಇ, ಕುವೈಟ್ ಹಾಗೂ ನ್ಯಾಟೋ ಹೆವಿ ಏರ್ ಲಿಫ್ಟ್ ವಿಂಗ್ ನಲ್ಲೂ ಬೋಯಿಂಗ್ ಸಿ-17 ವಿಮಾನ ತನ್ನ ಸೇವೆ ಸಲ್ಲಿಸುತ್ತಿದೆ.

ನಿಮ್ಮ ಮಾಹಿತಿಗಾಗಿ, ದೇಶದಲ್ಲಿ ಅನೇಕ ಸಾರಿಗೆ ವಿಮಾನಗಳ ಬದಲಿ ವ್ಯವಸ್ಥೆಯಾಗಿ 2009ರಲ್ಲಿ ಪ್ರಮುಖವಾಗಿಯೂ ವಿಮಾನ ಸಾರಿಗೆ ಅವಶ್ಯಕತೆಗಳಿಗಾಗಿ ಭಾರಿ ಗಾತ್ರದ ಸಾಮಾಗ್ರಿಗಳನ್ನು ಹೊತ್ತಯ್ಯಬಲ್ಲ ಬೋಯಿಂಗ್ ಸಿ-17 ವಿಮಾನವನ್ನು ಖರೀದಿಸಲು ಭಾರತೀಯ ವಾಯುಪಡೆಯು ನಿರ್ಧರಿಸಿತ್ತು.

ಬಳಿಕ 2010ರಲ್ಲಿ ನಡೆದ ಯಶಸ್ವಿ ಪರೀಕ್ಷೆಯ ಬಳಿಕ 10 ಯುನಿಟ್ ಗಳ ಖರೀದಿಗೆ ಆದೇಶ ಹೊರಡಿಸಿತ್ತು. ಇದರಂತೆ 2011ರಲ್ಲಿ ಭಾರತದ ಬೇಡಿಕೆಯನ್ನು ಈಡೇರಿಸುವುದಾಗಿ ಅಮೆರಿಕದ ಬೋಯಿಂಗ್ ತಿಳಿಸಿಲ್ಲದೆ 2013ರಿಂದ 2014ರ ವರೆಗೆ ವಿತರಣೆ ಪ್ರಕ್ರಿಯೆ ಹಮ್ಮಿಕೊಂಡಿತ್ತು.

ದೇಶದ ತುರ್ತು ಪರಿಸ್ಥಿತಿಯಲ್ಲಿ ವಿಶೇಷ ಸೇನಾ ನೆಲೆ ಸ್ಥಾಪಿಸುವ ಹಾಗೂ ಯುದ್ಧತಂತ್ರವನ್ನು ರೂಪಿಸುವ ಸಾಮರ್ಥ್ಯವನ್ನು ಬೋಯಿಂಗ್ ಸಿ-17 ಹೊಂದಿರುತ್ತದೆ.

ಅಷ್ಟೇ ಯಾಕೆ ಉತ್ತರ ಭಾರತದಲ್ಲಿರುವ 4,000 ಮೀಟರ್ ಎತ್ತರದ ಹಿಮಾಲಯದಿಂದ ಹಿಡಿದು ದಕ್ಷಿಣ ಭಾರತದ ಹಿಂದೂ ಮಹಾಸಾಗರ ವಾಯು ನೆಲೆಯಲ್ಲೂ ಕಾರ್ಯಾಚರಣೆಯನ್ನು ನಡೆಸುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.

ಜಗತ್ತಿನ ಎಂಟನೇ ಹಾಗೂ ಏಷ್ಯಾದ ಅತಿ ದೊಡ್ಡ ವಾಯುನೆಲೆಯಾಗಿರುವ ಭಾರತೀಯ
ವಾಯುಪಡೆಯ ಭಾಗವಾಗಿರುವ ಹಿಂಡಾನ್ ಏರ್ ಫೋರ್ಸ್ ಸ್ಟೇಷನ್ (ಪಶ್ಚಿಮ ಏರ್ ಕಮಾಂಡ್) ನೆಲೆಯಲ್ಲಿರುವ ಬೋಯಿಂಗ್ ಸಿ-17 ವಿಮಾನವನ್ನು ನಂ.81 ಸ್ಕ್ವಾಡ್ರನ್ ಸ್ಕೈಲಾರ್ಡ್ಸ್ ( Squadron Skylords) ಕಾರ್ಯ ನಿರ್ವಹಿಸುತ್ತಿದೆ.

ಲೇಹ್ ನಂತಹ ಎತ್ತರದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೋಯಿಂಗ್ ಸಿ-17 ವಿಮಾನವನ್ನು ಮೊದಲ ಬಾರಿಗೆ ಇನ್ಫಾಂಟ್ರಿ ಬೆಟಾಲಿಯನ್ ಉಪಕರಣಗಳೊಂದಿಗೆ 2013 ಜುಲೈ 01ರಂದು ಅಂಡಾಮಾನ್ ದ್ವೀಪಕ್ಕೆ ಪಯಣ ಬೆಳೆಸಿತ್ತು.

ಬಳಿಕ ಆಗಸ್ಟ್ 2013ರಲ್ಲಿ ತಜಕಿಸ್ತಾನಕ್ಕೆ ಹಾರುವ ಮೂಲಕ ಮೊದಲ ವಿದೇಶ ಪಯಣವನ್ನು ಹಮ್ಮಿಕೊಂಡಿತ್ತು. ಬಳಿಕ ಶಾಂತಿ ದೂತರಾಗಿ ರಿಪಬ್ಲಿಕ್ ಆಫ್ ರುವಾಂಡಾ ದೇಶಕ್ಕೂ ಪಣಯ ಬೆಳೆಸಿತ್ತು.

ಒಡಿಸ್ಸಾಗೆ ಬೀಸಿದ ಭೀಕರ ಚಂಡಮಾರುತ ವೇಳೆಯಲ್ಲೂ ಪರಿಹಾರ ಸಾಮಾಗ್ರಿಗಳೊಂದಿಗೆ ಸಾಗಿದ ಬೋಯಿಂಗ್ ಸಿ-17 ಅತಿ ಹೆಚ್ಚು ಪರಿಣಾಮಕಾರಿಯೆನಿಸಿಕೊಂಡಿತ್ತು.

ಇದೀಗ ಇತ್ತೀಚೆಗಷ್ಟೇ ಪ್ರಕ್ಷುಬ್ಧ ಯಮೆನ್ ನಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದಾಗಿ ಅತಂತ್ರಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ 'ಆಪರೇಷನ್ ರಾಹಾತ್' ಕಾರ್ಯಾಚರಣೆಗೂ ನೇತೃತ್ವ ವಹಿಸಿದ್ದ ಬೋಯಿಂಗ್ ಸಿ-17 4,500ರಷ್ಟು ಭಾರತೀಯರು ಸೇರಿದಂತೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನೆಡಾ, ಈಜಿಪ್ಟ್ ಸೇರಿದಂತೆ 41 ವಿದೇಶ ರಾಷ್ಟ್ರಗಳಿಗೆ ಸೇರಿದ 960 ವಿದೇಶ ಪ್ರಜೆಗಳನ್ನು ರಕ್ಷಿಸುವಲ್ಲಿಯೂ ಯಶಸ್ವಿಯಾಗಿತ್ತು.

ಈಗ 2015 ನೆರೆಯ ನೇಪಾಳದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದಿಂದಾಗಿ ಸಂತ್ರಸ್ತಕ್ಕೀಡಾದವರ ರಕ್ಷಣೆಯ ಹೊಣೆಯನ್ನು ಬೋಯಿಂಗ್ ಸಿ-17 ವಿಮಾನ ಹೊತ್ತುಕೊಂಡಿದೆ.

ಇವೆಲ್ಲದ್ದರಿಂದ ಉತ್ತೇಜನಗೊಂಡಿರುವ ಭಾರತೀಯ ವಾಯುಪಡೆಯು ದೇಶದಲ್ಲಿ ಬೋಯಿಂಗ್ ಸಿ-17 ವಿಮಾನವನ್ನು ಇನ್ನಷ್ಟು ಬಲಪಡಿಸಲು ಯೋಜನೆ ಹೊಂದಿದ್ದು, 8,7000 ಕೋಟಿ ರು. ವೆಚ್ಚದಲ್ಲಿ ಇನ್ನಷ್ಟು ಮೂರು ವಿಮಾನಗಳನ್ನು ಸದ್ಯದಲ್ಲೇ ಖರೀದಿಸಲು ನಿರ್ಧರಿಸಿದೆ.


Click it and Unblock the Notifications








