Budget 2026: ಕನ್ನಡಿಗರಿಗೆ ಭರ್ಜರಿ ಗುಡ್‌ನ್ಯೂಸ್.. ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೂ ನೆಮ್ಮದಿ!
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), 2026 - 2027ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಅವರು 9ನೇ ಬಾರಿಗೆ ಬಜೆಟ್‌ನ್ನು ಯಶಸ್ವಿಯಾಗಿ ಮಂಡಿಸಿದ್ದು, ಬಜೆಟ್ ಗಾತ್ರ ಬರೋಬ್ಬರಿ ರೂ.53.5 ಲಕ್ಷ ಕೋಟಿಯಿದೆ. ಕೇಂದ್ರ ಸರ್ಕಾರವು ಸಾರಿಗೆ ಹಾಗೂ ವಾಹನೋದ್ಯಮಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದು, ಕರ್ನಾಟಕದ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸುವವರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೈ-ಸ್ಪೀಡ್ ರೈಲು ಕಾರಿಡಾರ್‌ಗಳ ಅಭಿವೃದ್ಧಿ:
ದೇಶದ ಪ್ರಮುಖ ನಗರಗಳನ್ನು ಬೆಸೆಯುವ ಸಲುವಾಗಿ 7 ಹೈ-ಸ್ಪೀಡ್ ರೈಲು (High-Speed Rail) ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ. ಈ ರೈಲು ಮಾರ್ಗವು ಮುಂಬೈ - ಪುಣೆ, ಪುಣೆ - ಹೈದರಾಬಾದ್, ಹೈದರಾಬಾದ್ - ಬೆಂಗಳೂರು, ಹೈದರಾಬಾದ್ - ಚೆನ್ನೈ, ಚೆನ್ನೈ - ಬೆಂಗಳೂರು ಹಾಗೂ ದೆಹಲಿ - ವಾರಣಾಸಿ ನಡುವೆ ನಿರ್ಮಾಣಗೊಳ್ಳಲಿದೆ.

ಹೈ-ಸ್ಪೀಡ್ ರೈಲು ಕಾರಿಡಾರ್, ದೇಶದ ಹಣಕಾಸು, ತಂತ್ರಜ್ಞಾನ ಹಾಗೂ ಉತ್ಪಾದನಾ ಕ್ಲಸ್ಟರ್‌ಗಳಿಗೆ ಸಂಪರ್ಕ ಕೊಂಡಿಯಾಗಿದೆ. ಇದರೊಂದಾಗಿ ಪ್ರಯಾಣದ ಸಮಯವು ಉಳಿತಾಯವಾಗಲಿದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಹಾಗೂ ಉತ್ತರಪ್ರದೇಶ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೂ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಬಳಸುವ ಕಚ್ಚಾವಸ್ತುಗಳ ಮೇಲೆ ಸುಂಕ ವಿನಾಯಿತಿ:
ಈ ಬಾರಿಯ ಬಜೆಟ್‌ನಲ್ಲಿ ದೇಶದ 'ಇವಿ' ಉದ್ಯಮವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬ್ಯಾಟರಿಗಳಲ್ಲಿನ ಲಿಥಿಯಂ-ಐಯಾನ್ ಸೆಲ್‌ಗಳನ್ನು ತಯಾರಿಸಲು ಉಪಯೋಗಿಸುವ ಬಂಡವಾಳ ಸರಕುಗಳ (ಕಚ್ಚಾವಸ್ತು) ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ ಮುಂದುವರಿಸುವುದಾಗಿ ಹಣಕಾಸು ಸಚಿವರು ಹೇಳಿದ್ದಾರೆ.

ಇದು 'ಇವಿ' ವಾಹನೋದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ (ಬೈಕ್ & ಸ್ಕೂಟರ್) ಹಾಗೂ ಕಾರುಗಳ ಬೆಲೆಯಲ್ಲಿಯೂ ಯಾವುದೇ ರೀತಿಯಲ್ಲಿ ಅಧಿಕಗೊಳ್ಳದೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಹೊಸ ವಾಹನ ಖರೀದಿಸುವವರಿಗೂ ಹೆಚ್ಚಿನ ಅನುಕೂಲವಾಗಲಿದೆ.
ಶುದ್ಧ ಇಂಧನಗಳಿಗೆ ಉತ್ತೇಜನ:
ಕೇಂದ್ರ ಬಜೆಟ್‌ನಲ್ಲಿ ಇಂಧನ ವಲಯಕ್ಕೂ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಜೈವಿಕ ಅನಿಲ (Bio Gas) ಮಿಶ್ರಿತ ಸಿಎನ್‌ಜಿ (CNG) ಮೇಲೆ ಅಬಕಾರಿ ಸುಂಕದ ಪಾವತಿಯನ್ನು ಲೆಕ್ಕಾಚಾರ ಮಾಡುವಾಗ, ಅದರಿಂದ ಸರ್ಕಾರವು ಜೈವಿಕ ಅನಿಲವನ್ನು ಹೊರಗಿಟ್ಟಿದೆ.
ಮೋಟಾರು ಅಪಘಾತ ಸಂದರ್ಭದಲ್ಲಿ ಪರಿಹಾರ ವಿಮೆ ಹಣಕ್ಕೆ ತೆರಿಗೆ ವಿನಾಯಿತಿ ಘೋಷಣೆ:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮೋಟಾರು ಅಪಘಾತ ಸಂದರ್ಭದಲ್ಲಿ ಪರಿಹಾರ ವಿಮೆ ಹಣಕ್ಕೆ ತೆರಿಗೆ ವಿನಾಯಿತಿ ನೀಡಿ, ಮಹತ್ವದ ಘೋಷಣೆ ಮಾಡಿದ್ದಾರೆ. ವಿಶೇಷವಾಗಿ ದ್ವಿಚಕ್ರ ವಾಹನ ಅಪಘಾತ ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ.
ಹೊಸ ಜಲಮಾರ್ಗಗಳ ಅಭಿವೃದ್ಧಿ:
ಮುಂದಿನ 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಸಮುದ್ರ ಮಾರ್ಗದ ಮೂಲಕ ಸರಕು ಸಾಕಾಣಿಕೆಯನ್ನು ಅಧಿಕಗೊಳಿಸಲು 'ಕರಾವಳಿ ಕಾರ್ಗೋ ಸ್ಕೀಮ್'ನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
ಈ ರಾಜ್ಯಗಳಿಗೆ 4,000 ಎಲೆಕ್ಟ್ರಿಕ್ ಬಸ್‌ಗಳು:
ಮಿಷನ್ 'ಪೂರ್ವೋದಯ'ದಡಿ ಪ್ರಮುಖ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳನ್ನು ಸಂಪರ್ಕಿಸಲು 4,000 ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಬಿಹಾರ, ಜಾರ್ಖಂಡ್, ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳದ ರಾಜ್ಯದ ಜನರು ಪ್ರಯೋಜವನ್ನು ಪಡೆಯಲಿದ್ದಾರೆ. ಪೂರ್ವದ ಡಂಕುನಿ (ಪಚ್ಛಿಮ ಬಂಗಾಲ) ಹಾಗೂ ಪಶ್ಚಿಮದ ಸೂರತ್ (ಗುಜರಾತ್) ಮಧ್ಯೆ 'ಸರಕು ಸಾಗಣೆ ಕಾರಿಡಾರ್'ನ್ನು ಸ್ಥಾಪಿಸುವುದಾಗಿ ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಮಾಹಿತಿ ನೀಡಿದ್ದಾರೆ.


Click it and Unblock the Notifications








