ನೇತಾಜಿ ಸುಭಾಷ್ ಚಂದ್ರ ಬೋಸ್ 'ಗ್ರೇಟ್ ಎಸ್ಕೇಪ್' ಕಾರಿಗೆ ಮರುಜೀವ
ಭಾರತದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಾರಿಗೆ ಮರು ಜೀವ ತುಂಬಲಾಗುತ್ತಿದೆ. ಸ್ವಾಂತತ್ರ್ಯ ಹೋರಾಟದ ವೇಳೆ ಬ್ರಿಟಿಷ್ ಬೇಟೆಯಿಂದ ತಪ್ಪಿಸಿಕೊಳ್ಳಲು ನೇತಾಜಿ ಇದೇ ಕಾರನ್ನು ಬಳಕೆ ಮಾಡಿದ್ದರು.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ನೇತಾಜಿ ರಿಸರ್ಚ್ ಬ್ಯುರೋ (ಎನ್ ಆರ್ ಬಿ) ಅಧಿಕೃತರು, ಜರ್ಮನಿಯ ನಾಲ್ಕು ಬಾಗಿಲುಗಳ ವಾಂಡರರ್ ಸೆಡಾನ್ ಕಾರನ್ನು ನವೀಕರಿಸಲು ಆಡಿ ಸಂಸ್ಥೆಗೆ ಜವಾಬ್ದಾರಿ ವಹಿಸಿಕೊಡಲಾಗಿದೆ ಎಂದಿದ್ದಾರೆ.

1941ರಲ್ಲಿ ಬ್ರಿಟಿಷ್ ಬಂಧನ ಭೀತಿಯಿಂದ ಪೂರ್ವಜರ ಮನೆಯಿಂದ ತಪ್ಪಿಸಿಕೊಳ್ಳಲು ನೇತಾಜಿ ವಾಂಡರರ್ ಸೆಡಾನ್ ಕಾರನ್ನು ಬಳಕೆ ಮಾಡಿದ್ದರು. ಈಗ ಇದೇ ಮನೆಯಲ್ಲಿ ಕಾರಿಗೆ ಮರು ಜೀವ ನೀಡಲಾಗುತ್ತಿದೆ.

ರಾಷ್ಟ್ರೀಯ ಮಹತ್ವ ಹೊಂದಿರುವ ನೇತಾಜಿ ಕಾರಿನ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಕಾರಿಗೆ ಬಣ್ಣ ಹಚ್ಚಲಾಗುತ್ತಿದ್ದು, ಹಳೆಯ ಬಿಡಿಭಾಗಗಳನ್ನು ಬದಲಾಯಿಸಲಾಗುತ್ತಿದೆ. ರಾಷ್ಟ್ರೀಯ ಮಹತ್ವ ಪಡೆದಿರುವ ಕಾರಿನ ಬಾಳ್ವಿಕೆಯನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಕನಿಷ್ಠ 100ರಿಂದ 200 ಕೀ.ಮೀ. ದೂರದ ವರೆಗೆ ಓಡುವಂತಾಗಬೇಕು ಎಂದು ಎನ್ಆರ್‌ಬಿ ಕಾರ್ಯದರ್ಶಿ ಕಾರ್ತಿ ಚಕ್ರಬೋರ್ತಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಾರು 'ಬಿಎಲ್‌ಎ 7169' ಎಂಬ ನಂಬರ್ ಪ್ಲೇಟ್ ಗಿಟ್ಟಿಸಿಕೊಂಡಿದ್ದು, 1941ರಲ್ಲಿ ಸೋದರಳಿಯ ಸಿಸಿರ್ ಕುಮಾರ್ ಬೋಸ್ ಜೊತೆ ಕೋಲ್ಕತ್ತಾದಿಂದ ಜಾರ್ಖಂಡ್ ನ ಗೋಮೊ ವರೆಗೆ ಪ್ರಯಾಣಿಸಿದ್ದರು.

ಬಳಿಕ 1971ರಲ್ಲಿ ಚಲನಚಿತ್ರಗಳ ವಿಭಾಗದ ಸಾಕ್ಷ್ಯಚಿತ್ರವೊಂದರ ಶೂಟಿಂಗ್ ಗಾಗಿ ನೇತಾಜಿ ಮಗ ಸಿಸಿರ್ ಬೋಸ್ ಹಾಗೂ ಹಿರಿಯ ಮಗ ಶರತ್ ಚಂದ್ರ ಬೋಸ್ ಕಾರನ್ನು ಮಗದೊಮ್ಮೆ ಚಾಲನೆ ಮಾಡಿದ್ದರು.

ಪ್ರಸ್ತುತ ಕಾರನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿದ್ದು, ಯಾವತ್ತೂ ರಸ್ತೆಗಿಳಿಸಿಲ್ಲ. ಸದ್ಯ ಪೂರ್ವಜನ ಮನೆ 'ನೇತಾಜಿ ಭವನ್' ನಲ್ಲಿ ಕೃಷ್ಣ ಬೋಸ್ ಮತ್ತು ಮಗ ಸುಗಟ ಎನ್‌ಆರ್ ಬಿಯನ್ನು ನಡೆಸಿಕೊಳ್ಳುತ್ತಿದ್ದಾರೆ.


Click it and Unblock the Notifications








