Chandrayaan 3: ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ.. ನಾಳೆ ಚಂದ್ರಯಾನ -3 ಲ್ಯಾಂಡಿಂಗ್‌ಗೆ ಕ್ಷಣಗಣನೆ
ಚಂದ್ರಯಾನ-3 (Chandrayaan-3) ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ನಾಳೆ (ಆಗಸ್ಟ್ 23) ಸಂಜೆ 5.27ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಕಲ ಸಿದ್ಧತೆ ನಡೆಸುತ್ತಿದೆ. ಆ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.
ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದ್ದು, ಪ್ರಗ್ಯಾನ್ ರೋವರ್ ವಿಕ್ರಂ ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲೆ ಅಧ್ಯಯನ ನಡೆಸಲಿದೆ. ನೀವು ಕೂಡ ಮನೆಯಲ್ಲಿ ಕುಳಿತುಕೊಂಡು, ಈ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಇಸ್ರೋ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಅಥವಾ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು. ಈಗಾಗಲೇ, ದೇಶದ ವಿವಿಧ ರಾಜ್ಯಗಳಲ್ಲಿ ಇದನ್ನು ನೋಡಲು ಅಲ್ಲಿನ ಸ್ಥಳೀಯಾಡಳಿತಗಳು ಸೂಕ್ತ ವ್ಯವಸ್ಥೆಯನ್ನು ಮಾಡಿವೆ.

ಆಗಸ್ಟ್ 11ರಂದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು 'ರಷ್ಯಾ' ಲೂನಾ 25 ಹೆಸರಿನ ಬ್ಯಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅದು ಪತನವಾಗಿತ್ತು. ಇದರಿಂದ ಅಲರ್ಟ್ ಆಗಿರುವ ಇಸ್ರೋ, ವಿಕ್ರಮ್ ಲ್ಯಾಂಡರ್ ಅನ್ನು ಯಾವುದೇ ಅಡೆತಡೆ ಇಲ್ಲದೇ ಇಳಿಸಲು ಸಜ್ಜಾಗಿದೆ. ಮಾಜಿ ವಿಜ್ಞಾನಿಗಳು ಹೇಳುವಂತೆ ಈ ಬಾರಿ ಚಂದ್ರನ ಮೇಲೆ ನೀರಿರುವ ಕುರಿತು ಇಸ್ರೋ ಸಂಶೋಧನೆ ನಡೆಸಬಹುದು.
ವಿಕ್ರಂ ಲ್ಯಾಂಡರ್, ನಾಳೆ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆದ ಕೂಡಲೇ ಅಮೆರಿಕ, ರಷ್ಯಾ, ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಅಲ್ಲದೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ವಿಶ್ವದ ಏಕೈಕ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ ವಿಕ್ರಮ್ ಲ್ಯಾಂಡರ್ ಕ್ಯಾಮೆರಾ, ಲ್ಯಾಂಡ್ ಆಗುವ 1 ದಿನ ಮೊದಲೇ ಚಂದ್ರನ ಹೊಸ ಚಿತ್ರಗಳನ್ನು ಕಳುಹಿಸಿದ್ದು, ಇದು ಇಸ್ರೋ ವಿಶ್ವಾಸವನ್ನು ಹೆಚ್ಚಿಸಿದೆ.

ಜುಲೈ 14ರಂದು, ಚಂದ್ರಯಾನ -3 ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಲ್ಯಾಂಡರ್ ಮತ್ತು ರೋವರ್ ಹೊತ್ತ ರಾಕೆಟ್ ಅನ್ನು ಉಡಾವಣೆ ಮಾಡುವಲ್ಲಿ ಇಸ್ರೋ ಯಶಸ್ವಿಯಾಗಿತ್ತು. ಅಂದು, ಮಧ್ಯಾಹ್ನ 2:35ರ ಸುಮಾರಿಗೆ ನಭಕ್ಕೆ ಹಾರಿದ್ದ ಲ್ಯಾಂಡರ್ ಮತ್ತು ರೋವರ್, ಬರೋಬ್ಬರಿ 40 ದಿನದ ಬಳಿಕ ಅಂದರೇ ನಾಳೆ ಇಳಿಯಲಿದೆ.
ಚಂದ್ರಯಾನ -3 ಮೂಲಕ ಇಸ್ರೋ, ಚಂದ್ರನ ಮಣ್ಣು ಹಾಗೂ ಮೇಲ್ಮೈಯನ್ನು ಅಧ್ಯಯನ ಮಾಡುವ ಯೋಜನೆಯನ್ನು ಹೊಂದಿದೆ. 2019ರಲ್ಲಿ ಚಂದ್ರಯಾನ -2 ಕಡೆ ಕ್ಷಣದಲ್ಲಿ ವೈಪಲ್ಯವಾಗಿತ್ತು. ಇದರಿಂದ ಎಚ್ಚೆತ್ತು ಕೊಂಡಿರುವ ವಿಜ್ಞಾನಿಗಳು, ಚಂದ್ರನ ಮೇಲೆ ಗುರುತ್ವಾಕರ್ಷಣ ಶಕ್ತಿ ಕಡಿಮೆಯಿರುವುದರಿಂದ ಈ ಬಾರಿ, ಲ್ಯಾಂಡರ್‌ನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ.
ಚಂದ್ರಯಾನ 3 ಯೋಜನೆಗೆ ರೂ.630 ಕೋಟಿಯನ್ನು ಇಸ್ರೋ ವ್ಯಯಿಸಿದೆ. ಚಂದ್ರಯಾನ 2ಕ್ಕೆ ರೂ.978 ಕೋಟಿ ಖರ್ಚು ಮಾಡಲಾಗಿತ್ತು. ಚಂದ್ರಯಾನ ಮಿಷನ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು. ಅದು ಸಾಕಾರಗೊಂಡಿದ್ದು 2008ರಲ್ಲಿ. ಅದೇ ವರ್ಷದ ಅಕ್ಟೋಬರ್ ನಲ್ಲಿ ಚಂದ್ರಯಾನ 1 ಪ್ರಾರಂಭವಾಗಿ, 2009ರ ಆಗಸ್ಟ್ ವರೆಗೆ ಕಾರ್ಯನಿರ್ವಹಿಸಿತ್ತು. ಆದರೆ, ಚಂದ್ರಯಾನ -2 ವಿಫಲವಾಗಿತ್ತು. ಇವತ್ತಿಗೂ ಆರ್ಬಿಟರ್ ಚಂದ್ರನ ಸುತ್ತ ತಿರುಗುತ್ತಿದೆ.
ಇನ್ನು, ನಾಳೆ ಸಂಜೆ 5.27ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಸಲು ಇಸ್ರೋ ವಿಜ್ಞಾನಿಗಳು ಎಲ್ಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದು, ದೇಶವೇ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಭಾರತದ ಇತಿಹಾಸದಲ್ಲಿ ಇದು ಮಹತ್ತರ ದಿನವಾಗಲಿದ್ದು, ಈ ಕಾರ್ಯದಲ್ಲಿ ಇಸ್ರೋ ಯಶಸ್ವಿಯಾಗಲಿ ಎಂದು ಆಶಿಸೋಣ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications