ಚಂದ್ರನ ದಕ್ಷಿಣ ಧೃವದಲ್ಲಿ ಲ್ಯಾಂಡರ್ ಇಳಿದೇ ಇಲ್ಲ: ಚೀನಾ ನಂಬಲ್ಲವಂತೆ, ಅವರ ಕಾರಣ ನೋಡಿ..
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿದೆ ಎಂದು ಚೀನಾ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲ್ಯಾಂಡಿಂಗ್ ಸೈಟ್ ಧ್ರುವದ ಹತ್ತಿರ ಎಲ್ಲೂ ಇರಲಿಲ್ಲ ಎಂದು ಚೀನಾದ ಉನ್ನತ ವಿಜ್ಞಾನಿ ಓಯಾಂಗ್ ಜಿಯುವಾನ್ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಪೈಪೋಟಿ ಬಾಹ್ಯಾಕಾಶಕ್ಕೆ ವಿಸ್ತರಿಸಿದೆ. ಕಳೆದ ತಿಂಗಳು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವುದರೊಂದಿಗೆ ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇರಿಸಿದ ಮೊದಲ ದೇಶವಾಗಿ ದಾಖಲೆ ನಿರ್ಮಿಸಿದೆ. ಆದ್ರೆ ಇದು ಹಲವು ದೇಶಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಭಿತಾಗಿದೆ.

ಇತ್ತೀಚೆಗಷ್ಟೇ ವಿಶ್ವವೇ ತಿರುಗಿ ನೋಡುವಂತೆ ಚಂದ್ರಯಾನ-3 ರಾಕೆಟ್ ಅನ್ನು ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಲಾಗಿದೆ. ಈ ಮಿಷನ್ ಯಶಸ್ವಿಯಾದ ಬೆನ್ನಲ್ಲೇ ಚಂದ್ರಯಾನ-3 ಅವಶೇಷಗಳು ಆಸ್ಟ್ರೇಲಿಯಾದ ಕಡಲ ತೀರದ ಬಳಿ ಸಿಕ್ಕಿರುವುದಾಗಿ ಈ ಹಿಂದೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ಅಲ್ಲಿನ ಬಾಹ್ಯಾಕಾಶ ಸಂಸ್ಥೆಗಳು ನಿರೂಪಿಸಲಾಗಲಿಲ್ಲ.
ಇದೀಗ ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್ ಅನ್ನು ಇಳಿಸಿಲ್ಲ ಎಂದು ಚೀನಾದ ಉನ್ನತ ವಿಜ್ಞಾನಿ ಓಯಾಂಗ್ ಜಿಯುವಾನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಯನ್ನು ವಿವರವಾಗಿ ನೋಡುವುದಾದ್ರೆ, ಚಂದ್ರಯಾನ-3 ಧ್ರುವ ಪ್ರದೇಶದಿಂದ 619 ಕಿಲೋಮೀಟರ್ ದೂರದಲ್ಲಿದೆ ಎಂದು ವಿಜ್ಞಾನಿ ಓಯಾಂಗ್ ಹೇಳಿದ್ದಾರೆ.

ಚೀನಾದ ಚಂದ್ರನ ಪರಿಶೋಧನಾ ಕಾರ್ಯಕ್ರಮದ ಪಿತಾಮಹ ಎಂದು ಕರೆಯಲ್ಪಡುವ ಓಯಾಂಗ್ ಝಿಯುವಾನ್ ಅವರು ಚೈನೀಸ್ ಭಾಷೆಯ ಸೈನ್ಸ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಈ ಹೇಳಿಕೆಗಳನ್ನು ನೀಡಿದ್ದಾರೆ. 69 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿರುವ ಚಂದ್ರಯಾನ-3 ಲ್ಯಾಂಡಿಂಗ್ ಸೈಟ್ ಧ್ರುವಕ್ಕೆ ಹತ್ತಿರದಲ್ಲಿಲ್ಲ, 88.5 ಮತ್ತು 90 ಡಿಗ್ರಿಗಳ ನಡುವೆ ಇಳಿಸಲಾಗಿದೆ ಎಂದು ಜಿಯುವಾನ್ ಹೇಳಿದ್ದಾರೆ.
ಆದರೂ ನಮಗೆ ತಿಳಿದಿರುವಂತೆ ಭಾರತದ ಚಂದ್ರಯಾನ-3 ಇತರ ಬಾಹ್ಯಾಕಾಶ ನೌಕೆಗಳಿಗಿಂತ ಹೆಚ್ಚು ದಕ್ಷಿಣಕ್ಕೆ ಹತ್ತರವಿದೆ. ಈ ಅಪಪ್ರಚಾರಗಳನ್ನು ಮಾಡುತ್ತಿರುವ ಚೀನಾ ವಿಜ್ಞಾನಿಯ ಹೇಳಿಕೆಯನ್ನು ವಿಶ್ವದ ಇನ್ಯಾವುದೇ ದೇಶಗಳು ಸಮ್ಮತಿಸಿಲ್ಲ. ಇದು ಇಸ್ರೋ ವಿಜ್ಞಾನಿಗಳ ಸಾಧನೆಗೆ ಕಪ್ಪು ಚುಕ್ಕೆ ತರುವ ಕುತಂತ್ರವೆಂದು ಹಲವರು ಭಾವಿಸಿದ್ದಾರೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಯಾವೆಲ್ಲಾ ಬೆಳವಣಿಗಗಳು ಆಗಲಿವೆ ಕಾದುನೋಡಬೇಕಿದೆ.

ಪ್ರಸ್ತುತ, ಇಸ್ರೋ ಚಂದ್ರಯಾನ -3 ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನೊಂದಿಗೆ ಸಂಪರ್ಕವನ್ನು ಸಾಧಿಸುವ ಪ್ರಯತ್ನದಲ್ಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್ ಜೊತೆಗಿನ ಸಂಪರ್ಕಕ್ಕಾಗಿ ಚಂದ್ರನ ಮೇಲೆ ಮುಂದಿನ ಸೂರ್ಯಾಸ್ತದವರೆಗೆ ಅಂದರೆ ಅಕ್ಟೋಬರ್ 6 ರವರೆಗೆ ಪ್ರಯತ್ನಗಳನ್ನು ಮುಂದುವರೆಸಲಿದೆ ಎಂದು ಮೂಲಗಳು ತಿಳಿಸಿವೆ.
ಹೆಮ್ಮೆಯ ಮಿಷನ್ ಚಂದ್ರಯಾನ-3: ಚಂದ್ರಯಾನ 1 ಅನ್ನು ಮೊದಲ ಬಾರಿಗೆ 2008 ರಲ್ಲಿ ಉಡಾವಣೆ ಮಾಡಲಾಯಿತು. ಇದು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿ ಚಂದ್ರನ ಮೇಲೆ ಅಧ್ಯಯನ ಮಾಡಿತು. ಇದಾದ ಬಳಿಕ 2019 ರಲ್ಲಿ ಚಂದ್ರಯಾನ 2 ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಆದ್ರೆ ಇದು ಅಂತಿಮ ಹಂತದಲ್ಲಿ ನಿಯಂತ್ರಣ ಕಳೆದುಕೊಂಡು ಚಂದ್ರನಿಗೆ ಅಪ್ಪಳಿಸಿತ್ತು.

ಹಾಗಾಗಿಯೇ ಇಸ್ರೋ ಈಗ ಚಂದ್ರಯಾನ-3 ಅನ್ನು ಸವಾಲಾಗಿ ಸ್ವೀಕರಿಸಿ ವಿಶ್ವ ಅಗ್ರ ದೇಶಗಳೊಂದಿಗೆ ಸಮಾನವಾಗಿ ಈ ಮಿಷನ್ ಅನ್ನು ಕೈಗೊತ್ತಿಕೊಂಡು ಯಶಸ್ವಿಗೊಳಿಸಿದೆ. ಇಸ್ರೋ, ಚಂದ್ರಯಾನ 2ಕ್ಕೆ ಸುಮಾರು 978 ಕೋಟಿ ವೆಚ್ಚಿಸಿತ್ತು. ಚಂದ್ರಯಾನ 3ಗೆ ಬರೋಬ್ಬರಿ 630 ಕೋಟಿ ವ್ಯಯಿಸಿದೆ. ಕಡಿಮೆ ವೆಚ್ಚದಲ್ಲಿ ಯಶಸ್ಸು ಸಾಧಿಸಿದ ಇಸ್ರೋ ಸದ್ಯ ಬಾಹ್ಯಾಕಾಶ ರಂಗದಲ್ಲಿ ಬೆಳೆಯುತ್ತಿರುವುದು ಕೆಲ ದೇಶಗಳಿಗೆ ಸಹಿಸಲಾಗುತ್ತಿಲ್ಲ. ಈ ಬಗ್ಗೆ ನೀವೆಂತೀರಿ...


Click it and Unblock the Notifications