Vande Bharat Express: ಬೆಂಗಳೂರು - ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರಾತ್ರಿ ಸಂಚಾರ, ವೇಳಾಪಟ್ಟಿ
ದೀಪಾವಳಿ ರಜೆ ಅವಧಿಯ ಪ್ರಯಾಣಿಕರ ದಟ್ಟಣಿಯನ್ನು ಕಡಿಮೆಗೊಳಿಸಲು ದಕ್ಷಿಣ ರೈಲ್ವೆ (Southern Railway) ಮುಂದಾಗಿದೆ. ಚೆನ್ನೈ - ಬೆಂಗಳೂರು ನಡುವೆ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಓಡಿಸಲು ನಿರ್ಧರಿಸಿದೆ. ಈ ರೈಲು ರಾತ್ರಿ ವೇಳೆ ಸಂಚಾರ ನಡೆಸಲಿದ್ದು, ಇಲ್ಲಿದೆ ವೇಳಾಪಟ್ಟಿ ಒಳಗೊಂಡಂತೆ ಸಂಪೂರ್ಣ ಮಾಹಿತಿ.
8 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು, ಇಂದು (ನವೆಂಬರ್ 20) ಯಶವಂತಪುರ/ ಎಸ್‌ಎಂವಿಟಿ ಬೆಂಗಳೂರಿನಿಂದ (SMVT Bengaluru) ಸಂಜೆ 5.15ಕ್ಕೆ ಹೊರಡಲಿದ್ದು, ರಾತ್ರಿ 10 ಗಂಟೆಗೆ ಚೆನ್ನೈ ಸೆಂಟ್ರಲ್ (Chennai Central) ತಲುಪಲಿದೆ. ಹಾಗೆಯೇ, ಮಂಗಳವಾರ (ನವೆಂಬರ್ 21) ರಾತ್ರಿ 11 ಗಂಟೆಗೆ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಟಲಿದೆ.

ಬುಧವಾರ ಬೆಳಗ್ಗೆ 4.30ಕ್ಕೆ ಎಸ್‌ಎಂವಿಟಿ ಬೆಂಗಳೂರಿಗೆ ಬರಲಿದ್ದು, ಎರಡು ನಗರಗಳ ನಡುವೆಯಿರುವ ಅಂತರವನ್ನು ಕ್ರಮಿಸಲು 5.30 ಗಂಟೆ ತೆಗೆದುಕೊಳ್ಳಲಿದೆ. ಸದ್ಯ, ದೇಶದಲ್ಲಿರುವ ಎಲ್ಲ 34 ವಂದೇ ಭಾರತ್ ರೈಲುಗಳು ಹಗಲಿನಲ್ಲಿ ಮಾತ್ರ ಸಂಚರಿಸುತ್ತವೆ. ಆದರೆ, ದಕ್ಷಿಣ ರೈಲ್ವೆ ಪ್ರಯಾಣಿಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ತಿಳಿಸಲು ರಾತ್ರಿ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ.
ಕಳೆದ ವಾರ, ದೀಪಾವಳಿ ಹಬ್ಬದ ಅವಧಿಯ ಪ್ರಯಾಣಿಕರ ದಟ್ಟಣಿಯನ್ನು ತಪ್ಪಿಸಲು ದಕ್ಷಿಣ ರೈಲ್ವೆ, ಚೆನ್ನೈ, ಎಗ್ಮೋರ್ ಮತ್ತು ತಿರುನಲ್ವೇಲಿ ಮಧ್ಯೆ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಶಸ್ವಿಯಾಗಿ ಓಡಿಸಿತ್ತು. ಈ ಬಗ್ಗೆ ಮಾತನಾಡಿರುವ ದಕ್ಷಿಣ ರೈಲ್ವೆ ಅಧಿಕಾರಿಯೊಬ್ಬರು, 'ಯಾವುದೇ ರೈಲ್ವೆ ವಲಯವು ಇದುವರೆಗೆ ವಂದೇ ಭಾರತ್ ರೈಲುಗಳ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿಲ್ಲ. ಆದರೆ, ನಾವು ರಾತ್ರಿ ಪ್ರಯಾಣಿಕರ ಪ್ರತಿಕ್ರಿಯೆ ಪಡೆಯಲು ಬಯಸಿದ್ದೇವೆ' ಎಂದಿದ್ದಾರೆ.

'ಸಾಮಾನ್ಯವಾಗಿ ರೈಲ್ವೆ ಇಲಾಖೆಯು ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸಲು ರಾತ್ರಿ ಸಮಯದಲ್ಲಿ ಸ್ಲೀಪರ್ ಮತ್ತು ಎಸಿ ಕೋಚ್‌ಗಳನ್ನು ಒಳಗೊಂಡ ರೈಲುಗಳನ್ನು ಓಡಿಸುತ್ತದೆ. ಬೆಂಗಳೂರು-ಚೆನ್ನೈ ನಡುವೆ ಮೊದಲ ಬಾರಿಗೆ ಸಂಚರಿಸುವ ಈ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರಿಂದ ಹೇಗೆ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಮಂಗಳವಾರ ತಿಳಿಯಲಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂಬರುವ ರಜೆ ಅವಧಿಯಲ್ಲಿ ವಂದೇ ಭಾರತ್‌ನ ವಿಶೇಷ ವಿಶೇಷ ಕಾರ್ಯಾಚರಣೆ ನಡೆಯಬೇಕೇ, ಇಲ್ಲವೇ ಎಂಬುದನ್ನು ತೀರ್ಮಾನಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ, ಚೆನ್ನೈ ಮತ್ತು ಬೆಂಗಳೂರು ನಡುವೆ ಹಗಲಿನಲ್ಲಿ ವಂದೇ ಭಾರತ್, ಶತಾಬ್ದಿ ಎಕ್ಸ್‌ಪ್ರೆಸ್, 1 ಡಬಲ್ ಡೆಕ್ಕರ್ ಮತ್ತು 2 ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ.

ಇನ್ನು, ರೈಲ್ವೆ ಇಲಾಖೆಯು ರಾತ್ರಿ ವೇಳೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಫೆಬ್ರವರಿ 2024ರೊಳಗೆ ಓಡಾಟ ನಡೆಸುವ ನೀರಿಕ್ಷೆಯಿದೆ. ಈ ರೈಲು, 16 ಕೋಚ್‌ಗಳನ್ನು ಹೊಂದಿರಲಿದ್ದು, ಒಟ್ಟು 823 ಬರ್ತ್‌ಗಳು ಇರಲಿವೆ. ಪ್ಯಾಂಟ್ರಿ ವ್ಯವಸ್ಥೆ, ಸೇನಾರ್ ಡ್ರೈವೆನ್ ಇಂಟರ್ ಕಮ್ಯುನಿಕೇಷನ್ ಡೋರ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications